ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕ್ಲಿನಿಕ್‌ಗಳಿಗೇ ಆದ್ಯತೆ: ಸರ್ಕಾರಿ ಆಸ್ಪತ್ರೆಗೆ ಹೋಗಲು ಹೆದರಿಕೆ

Last Updated 3 ಮೇ 2021, 3:36 IST
ಅಕ್ಷರ ಗಾತ್ರ

ದೇವನಹಳ್ಳಿ (ವಿಜಯಪುರ): ಇತ್ತಿಚೆಗೆ ಬದಲಾಗುತ್ತಿರುವ ವಾತಾವರಣದಿಂದಾಗಿ ಜನರಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತಿರುವ ಜ್ವರ, ಕೆಮ್ಮು, ನೆಗಡಿ, ಮೈ ಕೈ ನೋವಿನಂತಹ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗೆ ಹೋದರೆ, ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಹೇಳುತ್ತಾರೆ ಎನ್ನುವ ಭಯದಲ್ಲಿ ಜನರು, ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ.

ಇತ್ತಿಚೆಗೆ ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು, ಹಾಗೂ ಆಸ್ಪತ್ರೆಗಳಲ್ಲಿ ಬೆಡ್‌ಗಳ ಲಭ್ಯತೆಯಿಲ್ಲದಿರುವುದು, ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಿಗದ ಕಾರಣದಿಂದಾಗಿ ಜನರು ಪರೀಕ್ಷೆ ಮಾಡಿಸಿಕೊಂಡರೆ ಪಾಸಿಟಿವ್ ಬರಬಹುದು ಎನ್ನುವ ಆತಂಕದಲ್ಲಿ ಖಾಸಗಿ ಕ್ಲಿನಿಕ್ ಗಳಲ್ಲೆ ಚಿಕಿತ್ಸೆ ಪಡೆದುಕೊಂಡು ಮನೆಗಳಿಗೆ ವಾಪಸ್ಸಾಗುತ್ತಿದ್ದಾರೆ.

ಮನೆಯಲ್ಲೆ ಇರಬಹುದು: ಕೋವಿಡ್ ಪರೀಕ್ಷೆ ಮಾಡಿಸಿದ ನಂತರ ಪಾಸಿಟಿವ್ ಬಂದರೂ ಲಕ್ಷಣಗಳು ಗಂಭೀರವಾಗಿಲ್ಲದಿದ್ದರೆ, ಮನೆಯಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಉಸಿರಾಟದಲ್ಲಿ ಆಮ್ಲಜನಕದ ಪ್ರಮಾಣ 94ಕ್ಕಿಂತಲೂ ಕಡಿಮೆಯಿದ್ದಾಗ ಮಾತ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ರೋಗದ ಲಕ್ಷಣಗಳಿಲ್ಲದೆ, ಪಾಸಿಟಿವ್ ಬಂದಿದ್ದರೂ ಜನರು ಭಯಪಡುವಂತಹ ಅಗತ್ಯವಿಲ್ಲ. ಅಂತಹವರ ಆರೋಗ್ಯದ ಕುರಿತು ತಪಾಸಣೆ ಮಾಡಲಿಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಗಂಭೀರವಾಗಿದ್ದಾಗ ಮಾತ್ರವೇ ಆಸ್ಪತ್ರೆಗಳಿಗೆ ದಾಖಲಾಗಬಹುದು ಎಂದು ವೈದ್ಯರೊಬ್ಬರು ಹೇಳಿದರು.

ರೋಗಿ ಅಶ್ವಥಮ್ಮ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗೆ ಹೋದರೆ, ಕೊರೊನಾ ಇಲ್ಲದಿದ್ದರೂ ಇದೆ ಅಂತಾ ರಿಪೋರ್ಟ್ ಕೊಡ್ತಾರಂತೆ. ಕೊರೊನಾ ಬಂದ್ರೆ ಅಕ್ಕಪಕ್ಕ ಮನೆಗಳಲ್ಲಿ ನಮ್ಮನ್ನು ನೋಡೊ ರೀತಿನೇ ಬೇರೆಯಾಗುತ್ತೆ, ಅದಕ್ಕೆ ಹೋಗಿಲ್ಲ. ಇಲ್ಲೆ ಇಂಜೆಕ್ಷನ್ ತಗೊಂಡು ಹೋಗೋಣ ಅಂತ ಬಂದಿದ್ದೀನಿ’ ಎಂದರು.

‘ಕೈಗೆ ಇನ್ ಜೆಕ್ಷನ್ ಕೊಡ್ತಿದ್ದಾರಂತೆ (ವ್ಯಾಕ್ಸಿನ್). ಅದು ಹಾಕಿಸಿಕೊಂಡರೆ ಕೈಯೆಲ್ಲಾ ಊತ ಬರುತ್ತಂತೆ. ಜ್ವರ, ಕೆಮ್ಮು, ನೆಗಡಿ ಎಲ್ಲಾ ಬರುತ್ತಂತೆ. ಯಾರೋ ಕೆಲವರು ಸತ್ತುಹೋಗಿದ್ದಾರಂತೆ. ಅದಕ್ಕೆ ಹಾಕಿಸಿಕೊಳ್ಳಲಿಕ್ಕೆ ಭಯ ಆಗುತ್ತೆ’ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ನಾಗರಿಕರಿಗೆ ಲಸಿಕೆಯ ಕುರಿತು ಜಾಗೃತಿ ಮೂಡಿಸಬೇಕಾಗಿರುವ ಅನಿವಾರ್ಯತೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ತಜ್ಞರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT