ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಸೇನಾ ಸಂವಹನ ವ್ಯವಸ್ಥೆಗೆ ಬಲ

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವುಹಾನ್‌/ಚೀನಾ: ಗಡಿಯಲ್ಲಿ ಅನಗತ್ಯ ಸಂಘರ್ಷಗಳನ್ನು ತಪ್ಪಿಸಿ ಶಾಶ್ವತ ಶಾಂತಿ ಕಾಪಾಡಲು ಸೇನೆಗಳ ನಡುವಿನ ಸಂವಹನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಭಾರತ–ಚೀನಾ ಪರಸ್ಪರ ಒಪ್ಪಿಗೆ ಸೂಚಿಸಿವೆ.

ಶನಿವಾರ ಮುಗಿದ ಎರಡು ದಿನಗಳ ನಿಯೋಗಮಟ್ಟದ ಅನೌಪಚಾರಿಕ ಶೃಂಗಸಭೆಯಲ್ಲಿ ಉಭಯ ರಾಷ್ಟ್ರಗಳು ತಮ್ಮ ಗಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿವೆ.

ಎರಡೂ ಸೇನೆಗಳ ನಡುವೆ ಪರಸ್ಪರ ಹೊಂದಾಣಿಕೆ, ವಿಶ್ವಾಸ ವೃದ್ಧಿ ಕ್ರಮಗಳನ್ನು ಬಲಪಡಿಸಲು ಉಭಯ ರಾಷ್ಟ್ರಗಳು ಮುಂದಾಗಿವೆ.

ದೋಕಲಾ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ನಡೆದ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರದ ಮಂತ್ರ ಜಪಿಸಿದ್ದಾರೆ.

ಗಡಿಯಲ್ಲಿಯ ಸಂಘರ್ಷದ ಹಾದಿ ತೊರೆದು ಶಾಂತಿ, ಸಹಕಾರ ಮತ್ತು ಪರಸ್ಪರರ ಭಾವನೆಗಳನ್ನು ಗೌರವಿಸುವ ಕುರಿತು ಮಾತನಾಡಿದ್ದಾರೆ.

‘ಪಂಚಶೀಲ ತತ್ವ’ ಜಪಿಸಿದ ಚೀನಾ
ಸೌಹಾರ್ದಯುತ ಸಂಬಂಧ ಮತ್ತು ಸಂರ್ಘರ್ಷರಹಿತ ಸಹಬಾಳ್ವೆಗಾಗಿ 1950ರಲ್ಲಿ ಪ್ರತಿಪಾದಿಸಲಾದ ಪಂಚಶೀಲ ತತ್ವಗಳ ಪಾಲನೆಗೆ ಭಾರತ ಮತ್ತು ಚೀನಾ ಬದ್ಧರಾಗಿರಬೇಕಿದೆ ಎಂದು ಜಿನ್‌ಪಿಂಗ್‌ ಹೇಳಿದ್ದಾರೆ.

ಹೊಸ ಮನ್ವಂತರದತ್ತ ಹೆಜ್ಜೆ ಹಾಕಿರುವ ಏಷ್ಯಾದ ಈ ಎರಡೂ ಪ್ರಬಲ ರಾಷ್ಟ್ರಗಳ ನಡುವೆ ಅನೇಕ ಸಾಮ್ಯತೆಗಳಿವೆ. ಅವುಗಳ ಮುಂದಿರುವ ಗುರಿ, ಅಭಿವೃದ್ಧಿಯ ಕನಸು ಮತ್ತು ಸವಾಲುಗಳು ಕೂಡ ಒಂದೇ ರೀತಿಯಾಗಿವೆ ಎಂದರು.

ಅಂತರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಿಲುವುಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಸಂಘರ್ಷಕ್ಕೆ ಅವಕಾಶ ಮಾಡಿಕೊಡದ ರೀತಿಯಲ್ಲಿ ಸಕಾರಾತ್ಮಕ ಮುಕ್ತ ಹೊಸ ನೀತಿ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಅವರು ಸಲಹೆ ಮಾಡಿದ್ದಾರೆ.

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಮೋದಿ ಇದೇ ಸಂದರ್ಭದಲ್ಲಿ ಷಿ ಜಿನ್‌ಪಿಂಗ್‌ಗೆ ಆಹ್ವಾನ ನೀಡಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋಭಾಲ್‌, ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ, ಚೀನಾದಲ್ಲಿರುವ ಭಾರತದ ರಾಯಭಾರಿ ಗೌತಮ್‌ ಬಂಬಾವಾಲೆ ಭಾರತದ ನಿಯೋಗದಲ್ಲಿದ್ದರು.

ಆರ್ಥಿಕತೆ ಬೆನ್ನೆಲುಬು
ಬಲಾಢ್ಯ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮುತ್ತಿರುವ ಭಾರತ ಮತ್ತು ಚೀನಾ ‘ವಿಶ್ವ ಆರ್ಥಿಕ ಬೆಳವಣಿಗೆಯ ಬೆನ್ನೆಲಬು’ ಎಂದು ಜಿನ್‌ಪಿಂಗ್‌ ಬಣ್ಣಿಸಿದ್ದಾರೆ.

ಬಹು–ಧ್ರುವೀಕರಣ ಮತ್ತು ಆರ್ಥಿಕ ಜಾಗತೀಕರಣದಲ್ಲಿ ಎರಡೂ ರಾಷ್ಟ್ರಗಳು ಬಹು ಮಹತ್ವದ ಪಾತ್ರ ನಿರ್ವಹಿಸಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ವಿಶ್ವಶಾಂತಿ ಮತ್ತು ಅಭಿವೃದ್ಧಿಗೆ ಭಾರತ ಮತ್ತು ಚೀನಾ ಜಂಟಿಯಾಗಿ ಸಕಾರಾತ್ಮಕ ಕೊಡುಗೆ ನೀಡಬೇಕಿದೆ ಎಂದರು.

ಅಫ್ಘಾನಿಸ್ತಾನದಲ್ಲಿ ಆರ್ಥಿಕ ಯೋಜನೆಗೆ ಸಮ್ಮತಿ: ಯುದ್ಧ ಮತ್ತು ದಾಳಿಗಳಿಂದ ನಲುಗಿದ ಅಫ್ಘಾನಿಸ್ತಾನದ ಅಭಿವೃದ್ಧಿ ಮತ್ತು ಅಲ್ಲಿಯ ನಾಗರಿಕರ ಕಲ್ಯಾಣಕ್ಕಾಗಿ ಜಂಟಿ ಆರ್ಥಿಕ ಯೋಜನೆ ಕಾರ್ಯಗತಗೊಳಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ.

ಮೂರನೇ ರಾಷ್ಟ್ರವೊಂದರ ಅಭಿವೃದ್ಧಿಗಾಗಿ ಭಾರತ–ಚೀನಾ ರೂಪಿಸಿರುವ ಮೊದಲ ಜಂಟಿ ಯೋಜನೆ ಇದಾಗಿದೆ.

ದೋಣಿ ವಿಹಾರ
ವುಹಾನ್‌ ನಗರದ ಈಸ್ಟ್ ಲೇಕ್‌ನಲ್ಲಿ ಮೋದಿ ಹಾಗೂ ಜಿನ್‌ಪಿಂಗ್ ಒಂದು ತಾಸಿಗೂ ಹೆಚ್ಚು ಕಾಲ ಜತೆಯಾಗಿ ದೋಣಿ ವಿಹಾರ ಮಾಡಿದರು. ಇದಕ್ಕೂ ಮೊದಲು ಇಬ್ಬರೂ ನಾಯಕರು ಸ್ನೇಹಯುತವಾಗಿ ಮಾತನಾಡುತ್ತಾ ಕೆರೆದಂಡೆಯಲ್ಲಿ ವಾಯುವಿಹಾರ ನಡೆಸಿದರು. ಮೋದಿ ಗೌರವಾರ್ಥ ಜಿನ್‌ಪಿಂಗ್ ಇಲ್ಲಿಯೇ ಔತಣಕೂಟ ಏರ್ಪಡಿಸಿದ್ದರು.

‘ಸುಂದರವಾದ ಈಸ್ಟ್ ಲೇಕ್‌ನ ದೋಣಿ ವಿಹಾರ ನೆನಪಿನಲ್ಲಿರುವಂತಹದ್ದು. ಇದು ವುಹಾನ್‌ನ ಪ್ರಮುಖ ಸ್ಥಳ’ ಎಂದು ಬಳಿಕ ಮೋದಿ ಟ್ವೀಟ್ ಮಾಡಿದ್ದಾರೆ. ಚೀನಾದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಈಸ್ಟ್ ಲೇಕ್ ಸಹ ಒಂದಾಗಿದೆ.

ಚೀನಿ ಅಧ್ಯಕ್ಷರಿಗೆ ‘ದಂಗಲ್’ ಇಷ್ಟ: ಹಿಂದಿ ಭಾರತದ ಪ್ರಾದೇಶಿಕ ಭಾಷೆಗಳ ಹಲವಾರು ಚಿತ್ರಗಳನ್ನು ವೀಕ್ಷಿಸಿದ್ದಾಗಿ ಜಿನ್‌ಪಿಂಗ್ ಅವರು ಮೋದಿ ಅವರ ಎದುರು ಹೇಳಿಕೊಂಡಿದ್ದಾರೆ.

ಭಾರತೀಯ ಚಿತ್ರಗಳು ಚೀನಾಗೆ, ಚೀನಾ ಚಿತ್ರಗಳು ಭಾರತೀಯ ಭಾಷೆಗೆ ವಿನಿಮಯವಾದರೆ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಟ ಅಮಿರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ತುಂಬಾ ಇಷ್ಟವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಚೀನಾದಲ್ಲಿ ₹1,100 ಕೋಟಿ ಗಳಿಕೆ ಮಾಡುವ ಮೂಲಕ ದಂಗಲ್ ಹೊಸ ದಾಖಲೆ ಬರೆದಿತ್ತು.

ಚೀನಾದಲ್ಲಿ ಆರ್‌.ಡಿ. ಬರ್ಮನ್ ಹಾಡು!
ಮೋದಿ ಅವರಿಗಾಗಿ ಚೀನಾ ಕಲಾವಿದರು ಬಾಲಿವುಡ್‌ನ ಪ್ರಸಿದ್ಧ ಚಿತ್ರ ‘ಯೇ ವಾದಾ ರಹಾ’ದ ಗೀತೆಯನ್ನು ಸಾಂಪ್ರದಾಯಿಕ ವಾದ್ಯ ಬಳಸಿಕೊಂಡು ನುಡಿಸಿದರು. ಇದನ್ನು ಕೇಳಿದ ಮೋದಿ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ಆರ್.ಡಿ. ಬರ್ಮನ್‌ ಸಂಗೀತ ಸಂಯೋಜನೆಯ ಈ ಗೀತೆಯನ್ನು ಕಿಶೋರ್ ಕುಮಾರ್ ಹಾಗೂ ಆಶಾ ಭೋಂಸ್ಲೆ ಹಾಡಿದ್ದರು.

**

ಜಾಗತಿಕ ಸ್ಥಿರತೆ ಮತ್ತು ಮನುಕುಲದ ಅಭಿವೃದ್ಧಿಯ ನಿಟ್ಟಿನಲ್ಲಿ ಚೀನಾ ಮತ್ತು ಭಾರತದ ನಡುವಿನ ಉತ್ತಮ ಬಾಂಧವ್ಯ ಒಂದು ಸಕಾರಾತ್ಮಕ ಹೆಜ್ಜೆ.
  – ಷಿ ಜಿನ್‌ಪಿಂಗ್‌ , ಚೀನಾ ಅಧ್ಯಕ್ಷ

**

ಚೀನಾ ಜತೆಗಿನ ಅನೌಪಚಾರಿಕ ದ್ವಿಪಕ್ಷೀಯ ಮಾತುಕತೆಗಳು ಫಲಪ್ರದವಾಗಿವೆ.
  – ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT