ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಮ್ಮಳಾಪುರ ಗೌರಮ್ಮ ದೇವಿ ಜಾತ್ರೆಗೆ ಸಿದ್ಧತೆ

ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಗೌರಮ್ಮ ದೇವಾಲಯ
Last Updated 29 ಸೆಪ್ಟೆಂಬರ್ 2022, 5:49 IST
ಅಕ್ಷರ ಗಾತ್ರ

ಆನೇಕಲ್: ಪಟ್ಟಣ ಸಮೀಪದ ತಮಿಳುನಾಡಿನ ಗುಮ್ಮಳಾಪುರದ ಗೌರಮ್ಮ ದೇವಿ ಜಾತ್ರಾ ಮಹೋತ್ಸವವು ಸೆ. 29ರಂದು ನಡೆಯಲಿದೆ. ಗೌರಮ್ಮ ದೇವಿ ದೇವಾಲಯವು ವರ್ಷಕ್ಕೆ ಒಂದು ತಿಂಗಳು ಮಾತ್ರ ತೆರೆಯಲಿದ್ದು, ಹಬ್ಬದ ಸಂದರ್ಭದಲ್ಲಿ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ.

ಆನೇಕಲ್‌ನಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಗುಮ್ಮಳಾಪುರದ ಗೌರಮ್ಮ ದೇವಾಲಯ ಮತ್ತು ಗುಮ್ಮಳಾಪುರ ಸಂಸ್ಥಾನ ಮಠ ಪ್ರಾಚೀನ ಇತಿಹಾಸ ಹೊಂದಿದೆ. ಗೌರಿ, ಗಣೇಶ ಹಬ್ಬದಿಂದ ಪ್ರಾರಂಭವಾಗಿ ಒಂದು ತಿಂಗಳವರೆಗೆ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಗೌರಿ ಹಬ್ಬದ ದಿನ ಗೌರಿ ದೇವಿಯ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿಯನ್ನು ಗುಮ್ಮಳಾಪುರದ ಹಿರೇಮಠದಲ್ಲಿಯೇ ತಿದ್ದಿ ಸಿದ್ಧಪಡಿಸುವುದು ವಿಶೇಷ. ನಂತರ ಗಣೇಶ ಚತುರ್ಥಿ ದಿನದಂದು ಗಣೇಶನ ಮೂರ್ತಿಯನ್ನು ಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಕೈಲಾಸದಿಂದ ತವರು ಮನೆಗೆ ಬಂದಿರುವ ಗೌರಿಯನ್ನು ಭೂಲೋಕದಲ್ಲಿ ಭಕ್ತರು ತವರು ಮನೆಗೆ ಬಂದ ಮಗಳೆಂಬಂತೆ ಪ್ರೀತಿ, ಭಕ್ತಿಯಿಂದ ಪೂಜಿಸಿ ದೇವಿಯ ಆರಾಧನೆ ಮಾಡುವ ಪ್ರತೀಕವಾಗಿ ಮಹಿಳೆಯರು ಮಡಿಲಕ್ಕಿ ತುಂಬುವುದು ವಾಡಿಕೆ. ಇದಕ್ಕಾಗಿ ಮಹಿಳೆಯರು ಬೆಂಗಳೂರು, ಕನಕಪುರ, ತುಮಕೂರು, ದೊಡ್ಡಬಳ್ಳಾಪುರ, ತಮಿಳುನಾಡಿನ ಹೊಸೂರು, ಡೆಂಕಣಿಕೋಟೆ, ಥಳಿ ಸೇರಿದಂತೆ ವಿವಿಧ ಭಾಗಗಳಿಂದ ಬರುತ್ತಾರೆ.

ರೋಮಾಂಚನಕಾರಿ ತೇರು: ಒಂದು ತಿಂಗಳ ಕಾಲ ಗೌರಿ ದೇವಿಯ ಆತಿಥ್ಯ ನಡೆಸುವ ಭಕ್ತರು ಜಾತ್ರೆ ದಿನದಂದು ಗುಮ್ಮಳಾಪುರದ ಬಳಿ ಇರುವ ಗೌರಮ್ಮನ ಕೆರೆವರೆಗೂ ಗಣಪತಿ ಮತ್ತು ಗೌರಿಯ ಪ್ರತ್ಯೇಕ ತೇರುಗಳನ್ನು ನಿರ್ಮಿಸಿ ಉತ್ಸವದೊಂದಿಗೆ ಕೊಂಡೊಯ್ದು ವಿಸರ್ಜಿಸುವ ಪದ್ಧತಿ ಇದೆ. ತೇರಿನ ತಯಾರಿಯೇ ವಿಶಿಷ್ಟವಾದುದು. ಗೌರಿ ಮತ್ತು ಗಣಪತಿ ತೇರುಗಳನ್ನು ಬಿದರಿನಿಂದ ಸಿದ್ಧಪಡಿಸಲಾಗುತ್ತದೆ. ಎಲ್ಲೆಡೆ ತೇರುಗಳನ್ನು ಎಳೆದರೆ ಇಲ್ಲಿ ತೇರುಗಳನ್ನು ನೂರಾರು ಭಕ್ತರು ಹೊತ್ತು ವೇಗವಾಗಿ ಓಡುತ್ತಾ ಕೊಂಡೊಯ್ಯುವುದು ರೋಮಾಂಚಕಾರಿಯಾಗಿರುತ್ತದೆ.

ಇತಿಹಾಸ: ಗುಮ್ಮಳಾಪುರವನ್ನು ಕೈಲಾಸಪುರ, ಕಮಲಾಪುರ, ಕಲ್ಯಾಣಪುರವೆಂಬ ಹೆಸರಿನಲ್ಲಿ ಕರೆಯುತ್ತಿದ್ದರು ಎಂಬ ಬಗ್ಗೆ ಹಳೆಗನ್ನಡ ಕಾವ್ಯಗಳಲ್ಲಿ ದಾಖಲಿಸಲಾಗಿದೆ. ಭೂ ಕೈಲಾಸವೆಂದು ಹೆಸರುಗಳಿಸಿರುವ ಪುರಾಣ ಪ್ರಸಿದ್ಧ ಗುಮ್ಮಳಾಪುರದಲ್ಲಿ 101 ಬಾವಿ, 101 ಕೆರೆ, 101 ಕಟ್ಟೆ, 101 ಗವಿಗಳು, 101 ದೇವಾಲಯಗಳು, 101 ಬಿಲ್ವವೃಕ್ಷಗಳು ಹಾಗೂ 771 ಶಿವಶರಣರು ವಾಸವಾಗಿದ್ದರು ಎನ್ನಲಾಗಿದೆ.

‘ಗುಮ್ಮಳಾಪುರ ಮಠವು ಐತಿಹಾಸಿಕವಾದುದು. ಗೌರಮ್ಮ ದೇವಿ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ. ಗುಮ್ಮಳಾಪುರ ಹಿರೇಮಠದಲ್ಲಿ ಜಾತ್ರೆ ಪ್ರಯುಕ್ತ ಅನ್ನ ದಾಸೋಹ ಏರ್ಪಡಿಸಲಾಗಿದೆ. ಗದ್ದುಗೆಗಳ ಪ್ರತಿಷ್ಠಾಪನೆ ಸೇರಿದಂತೆ ಮಠದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ’ ಎಂದು ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT