ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಚುನಾವಣೆಗೆ ಸದ್ದಿಲ್ಲದೆ ತಯಾರಿ

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಗಳ ಕೊರತೆ l ಒಟ್ಟು ವಾರ್ಡ್ ಸಂಖ್ಯೆ 31
Last Updated 3 ಆಗಸ್ಟ್ 2021, 5:03 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ನಗರಸಭೆ ಸದಸ್ಯರ ಅಧಿಕಾರದ ಅವಧಿ ಮುಗಿದು ಎರಡು ವರ್ಷಗಳ ನಂತರ ಚುನಾವಣೆ ನಡೆಸಲು ವಾರ್ಡ್‌ವಾರು ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಸದ್ದಿಲ್ಲದೆ ಚಟುವಟಿಕೆ ಗರಿಗೆದರಿವೆ. ನಗರದ ಎಲ್ಲಾ 31 ವಾರ್ಡ್‌ಗಳಲ್ಲೂ ಗೆಲ್ಲುವ ತಯಾರಿ ನಡೆಸಿರುವ ನಡುವೆಯೇ ಕೆಲವು ವಾರ್ಡ್‌ಗಳಿಗೆ ಅಭ್ಯರ್ಥಿಗಳ ಕೊರತೆಯು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಕ್ಕೆ ಕಾಡುತ್ತಿದೆ.

2013ರಲ್ಲಿ ನಗರಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಐದು ವರ್ಷದಲ್ಲಿ ಮೂವರು ಅಧ್ಯಕ್ಷರು ಆಗುವಂತಾಗಿ ಜನರ ನಿರೀಕ್ಷೆಯಂತೆ ನಗರ ಅಭಿವೃದ್ಧಿಯಾಗದೆ ಹಿಂದುಳಿಯುವಂತಾಯಿತು ಎನ್ನುವುದು ಜನರ ಆರೋಪ.

ಕಾಂಗ್ರೆಸ್‌ ಪಕ್ಷ ಈಗಾಗಲೇ ಪ್ರತಿ ವಾರ್ಡ್‌ಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದೆ. ಕ್ಷೇತ್ರದ ಶಾಸಕ ಟಿ. ವೆಂಕಟರಮಣಯ್ಯ ಅವರು ಬೇರೆ ಪಕ್ಷ, ಸಂಘಟನೆಗಳ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ವಾರ್ಡ್‌ಗಳಲ್ಲಿಯೇ ಸಾರ್ವಜನಿಕ ಸಭೆ ನಡೆಸಿ 7 ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ಕುರಿತಂತೆ ಪ್ರಚಾರ ಆರಂಭಿಸಿದ್ದಾರೆ.

ನಗರಸಭೆ ಸೇರಿದಂತೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲುವಂತೆ ಹಾಗೂ ಮುಂದಿನ ವಿಧಾನಸಭಾ ಚುನಾವಣೆಗೂ ಸಹಕಾರಿಯಾಗುವಂತೆ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಜೆಡಿಎಸ್‌ ಈಗಾಗಲೇ ರಾಜ್ಯದ ಪ್ರತಿ ವಿಧಾನಸಭಾ ವ್ಯಾಪ್ತಿಗಳಲ್ಲಿ ಅಡಾಕ್‌ ಕಮಿಟಿ (ತಾತ್ಕಾಲಿಕ ಸಮಿತಿಗಳನ್ನು) ನೇಮಕ ಮಾಡುತ್ತಿದೆ. ಆದರೆ ತಾಲ್ಲೂಕಿನಲ್ಲಿ ಮಾತ್ರ ಎರಡು ಗುಂಪುಗಳ ಹಗ್ಗಜಗ್ಗಾಟದಿಂದಾಗಿ ಇನ್ನೂ ಸಮಿತಿ ರಚನೆಯಾಗಿಲ್ಲ. ಈ ನಡುವೆಯೇ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ ಅವರು ನಗರಸಭೆ ಚುನಾವಣೆ ಕುರಿತಂತೆ ಆಕಾಂಕ್ಷಿಗಳ ಸಭೆ ನಡೆಸಿದ್ದಾರೆ. ಬಿಜೆಪಿ ನಗರಸಭೆ ಚುನಾವಣೆ ಕುರಿತಂತೆ ಒಮ್ಮೆ ಮಾತ್ರ ಆಕಾಂಕ್ಷಿಗಳ ಪೂರ್ವಭಾವಿ ಸಭೆ ನಡೆಸಿದೆ.

ಇತ್ತೀಚೆಗೆ ನಗರ ಬಿಜೆಪಿಯಲ್ಲಿ ಎರಡು ಗುಂಪುಗಳ ನಡುವಿನ ಹಗ್ಗಜಗ್ಗಾಟ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಐದು ಬಾರಿ ಸಭೆ

ಕೋರ್ಟ್‌ ಆದೇಶದಂತೆ ರಾಜ್ಯ ಚುನಾವಣಾ ಆಯೋಗ ನಗರಸಭೆ ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ ನಂತರ ಐದು ಬಾರಿ ಆಕಾಂಕ್ಷಿಗಳ ಸಭೆ ನಡೆಸಲಾಗಿದೆ. ಕೆಲವು ವಾರ್ಡ್‌ಗಳಲ್ಲಿ ಮೂವರು ಆಕಾಂಕ್ಷಿಗಳು ಇದ್ದಾರೆ. ಕೆಲವೆಡೆ ಒಬ್ಬರೇ ಆಕಾಂಕ್ಷಿ ಇದ್ದಾರೆ. ಚುನಾವಣಾ ದಿನಾಂಕ ಪ್ರಕಟವಾದ ನಂತರ ಪಕ್ಷದ ಎಲ್ಲ ಮುಖಂಡರ ಸಮ್ಮುಖದಲ್ಲಿ ಅಭ್ಯರ್ಥಿಗಳ ಪಟ್ಟಿ ಯನ್ನು ಅಂತಿಮಗೊಳಿಸಲಾಗುವುದು.

ವಡ್ಡರಹಳ್ಳಿ ರವಿ,ಅಧ್ಯಕ್ಷ,
ಜೆಡಿಎಸ್‌ ನಗರ ಘಟಕ

ಆಕಾಂಕ್ಷಿಗಳ ಸಭೆ

ಈಗಿನ ಮೀಸಲಾತಿ ಪಟ್ಟಿಯಂತೆ ಒಂದೆರಡು ವಾರ್ಡ್‌ಗಳಲ್ಲಿ ಮಾತ್ರ ಒಬ್ಬರೇ ಆಕಾಂಕ್ಷಿಗಳು ಇದ್ದಾರೆ. ಉಳಿದಂತೆ ಎಲ್ಲಾ ವಾರ್ಡ್‌ಗಳಲ್ಲೂ ಎರಡಕ್ಕಿಂತಲೂ ಹೆಚ್ಚಿನ ಆಕಾಂಕ್ಷಿಗಳು ಇದ್ದಾರೆ. ಈಗಾಗಲೇ, ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಸಭೆ ನಡೆಸಲಾಗಿದೆ. ಈ ಬಾರಿ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ನಗರಸಭೆಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ.

ಕೆ.ಪಿ. ಜಗನ್ನಾಥ್‌,ಅಧ್ಯಕ್ಷ, ಕಾಂಗ್ರೆಸ್‌ ನಗರ ಬ್ಲಾಕ್‌

ಗುಂಪುಗಾರಿಕೆ ಇಲ್ಲ

ನಗರಸಭೆಯಲ್ಲಿ ಬಿಜೆಪಿ ಆಡಳಿತಕ್ಕೆ ಬರಲೇ ಬೇಕು ಎನ್ನುವ ಗುರಿಯೊಂದಿಗೆ ಬೂತ್‌ ಕಮಿಟಿಗಳು ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಯಾವುದೇ ಸಂದರ್ಭದಲ್ಲಿ ಚುನಾವಣಾ ದಿನಾಂಕ ಪ್ರಕಟವಾದರೂ ಬಿಜೆಪಿ ಸಿದ್ಧವಾಗಿದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲದೆ ಹಿರಿಯರ ಮಾರ್ಗದರ್ಶದಲ್ಲಿ ಪಕ್ಷದ ಸಂಘಟನೆ ನಡೆಸಲಾಗಿದೆ.

ಎಚ್‌.ಎಸ್‌. ಶಿವಶಂಕರ್‌,ಅಧ್ಯಕ್ಷ, ಬಿಜೆಪಿ ನಗರ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT