ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತ ಕಡೆಗಣಿಸಿ ಚುನಾವಣೆಗೆ ಸಿದ್ಧತೆ

ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ, ರೈತರು, ಪೊಲೀಸರ ನಡುವೆ ವಾಗ್ವಾದ
Last Updated 5 ಜನವರಿ 2019, 13:27 IST
ಅಕ್ಷರ ಗಾತ್ರ

ದೇವನಹಳ್ಳಿ: ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಡಳಿತ ಭವನ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಚನಗೌಡ ಮಾತನಾಡಿ, 1,500 ಅಡಿ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಸಮಗ್ರ ಕರ್ನಾಟಕ ನೀರಾವರಿ ಅಯವ್ಯಯವನ್ನು ಗಮನಿಸಿದಾಗ ಬಯಲುಸೀಮೆ ಪ್ರದೇಶಕ್ಕೆ ಕಡಿಮೆ ಆದ್ಯತೆ ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹತ್ತು ವರ್ಷಗಳ ಹಿಂದೆ ಸರ್ಕಾರ ಎತ್ತಿನಹೊಳೆಯಿಂದ ನೀರು ಹರಿಸಲಾಗುವುದೆಂದು ಹೇಳಿ ₹13 ಸಾವಿರ ಕೋಟಿ ಬಿಡುಗಡೆ ಮಾಡಿದೆ. ಕನಿಷ್ಠ ತುಮಕೂರು ಗಡಿ ಭಾಗದವರೆಗೂ ಕಾಮಗಾರಿಯಾಗಿಲ್ಲ. ಬೆಂಗಳೂರಿನ ಹೆಬ್ಬಾಳ ಮತ್ತು ನಾಗವಾರದಿಂದ ಕೊಳಚೆ ನೀರು ಸಂಸ್ಕರಿಸಿದೇವನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಗೆ ಪೂರೈಕೆ ಮಾಡುವ ಕೆ.ಸಿ. ವ್ಯಾಲಿ ಕಾಮಗಾರಿಮುಗಿದುಈಗಾಗಲೇ ಕೆರೆಗಳಿಗೆ ನೀರು ಹರಿಸಬೇಕಿತ್ತು; ಅದೂ ಆಗಿಲ್ಲ. ಸರ್ಕಾರ ರೈತರ ಹಿತ ರಕ್ಷಿಸದೆ ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಈಗಾಗಲೇ ಎರಡು ಹಂತದಲ್ಲಿ 156 ತಾಲ್ಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಈ ವರೆವಿಗೂ ಬರ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ದಶಕಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡುತ್ತಿಲ್ಲ ಇದರಿಂದ ದೇಶದಲ್ಲಿ ರೈತರ ಆತ್ಮಹತ್ಯೆಯಂತಹ ಘಟನೆಗಳು ನಿರಂತರವಾಗಿದೆ. ರೈತರಿಗೆ ಬಿಡಿಗಾಸು ಬೆಂಬಲ ಬೇಡ ವರದಿ ಮೊದಲು ಜಾರಿ ಮಾಡಬೇಕು ಎಂದರು ಆಗ್ರಹಿಸಿದರು.

ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ‘ರಾಜ್ಯ ಸರ್ಕಾರ 2010ರಲ್ಲಿ ಅಧಿಸೂಚನೆಯನ್ನು ಹೊರಡಿಸಿ ತಾಲ್ಲೂಕಿನ 12 ಸಾವಿರ ಎಕರೆ ಭೂ ಸ್ವಾಧೀನ ಪಡಿಸಲು ಮುಂದಾಗಿತ್ತು. ಮೊದಲ ಹಂತದಲ್ಲಿ 2090 ಎಕರೆಗೆ ನೋಟಿಸ್ ನೀಡಿತ್ತು. ಅದರೂ ಈಗ ಮತ್ತೆ ನೋಟಿಸ್ ನೀಡುವ ಔಚಿತ್ಯವೇನು? ಜಮೀನು ಸ್ವಾಧೀನಕ್ಕೆ ಬಿಡುವುದಿಲ್ಲ ಎಂದು ಹೇಳಿದರೂ ಅಧಿಕಾರಿಗಳು ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಸ್. ಹರೀಶ್ ಮಾತನಾಡಿ, ‘ಸರ್ಕಾರ ರೈತರ ಸಾಲಮನ್ನಾ ಎಂದು ಘೊಷಣೆ ಮಾಡಿದೆ. ಅದರೂ ರೈತರಿಗೆ ಅಧಿಕಾರಿಗಳು ನೋಟಿಸ್ ನೀಡಿ ಅವಮಾನ ಮಾಡುತ್ತಿದ್ದಾರೆ. ರೈತರು ಟ್ರ್ಯಾಕ್ಟರ್ ಖರೀದಿಸಿ ನೋಂದಣಿ ಮಾಡಿಸಲು ಬೋನೋ ಪೈಡ್ ಸರ್ಟಿಫಿಕೆಟ್ ನೀಡಲು ನಿಗದಿ ಪಡಿಸಿರುವ ಮಾನದಂಡವೇ ಅವೈಜ್ಞಾನಿಕವಾದುದು. ಎರಡು ಎಕರೆ ಮಿತಿಯನ್ನು ರದ್ದುಗೊಳಿಸಿ ಅರ್ಧ ಎಕರೆಗೆ ಅವಕಾಶ ನೀಡಬೇಕು. ಬಂಡವಾಳ ಶಾಹಿಗಳಿಗೆ ಬ್ಯಾಂಕುಗಳು ಕೋಟಿ ಗಟ್ಟಲೇ ಸಾಲ ನೀಡುತ್ತವೆ. ಜಮೀನಿನ ಎಲ್ಲ ದಾಖಲೆ ಮತ್ತೊಬ್ಬರ ಸಾಕ್ಷಿ ಪಡೆದರೂ ರೈತರನ್ನು ಅಲೆಸುತ್ತಾರೆ’ ಎಂದು ಕಿಡಿಕಾರಿದರು.

ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ತಾಲ್ಲೂಕು ಘಟಕ ಅಧ್ಯಕ್ಷ ಗಾರೆ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ರಮೇಶ್, ನಾಲ್ಕು ತಾಲ್ಲೂಕು ರೈತ ಘಟಕ ಪದಾಧಿಕಾರಿಗಳು, ಮುಖಂಡರು ಇದ್ದರು.

ರೈತರು, ಪೋಲಿಸ್‌ ನಡುವೆ ವಾಗ್ವಾದ:ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಕರೆ ನೀಡಿದ್ದ ಜಿಲ್ಲಾ ಮಟ್ಟದ ಪ್ರತಿಭಟನೆಗೆ ಮೊದಲು ಬೆಳಿಗ್ಗೆ 11.30ಕ್ಕೆ ರೈತರು ಚಪ್ಪರದ ಕಲ್ಲು ಬಳಿ ಸಮಾವೇಶಗೊಂಡರು ನಂತರ ಜಿಲ್ಲಾಡಳಿತ ಭವನದ ಮುಖ್ಯದ್ವಾರಕ್ಕೆ ಬಂದ ನೂರಾರು ರೈತರು ಮುತ್ತಿಗೆ ಹಾಕಲು ಯತ್ನಿಸಿದರು. ಬಿಗಿ ಪೊಲೀಸ್ ವ್ಯವಸ್ಥೆಯಲ್ಲಿ ‌‌ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಪದೇ ಪದೇ ಪಟ್ಟು ಬಿಡದೆ ನುಗ್ಗಲು ರೈತರು ಪ್ರಯತ್ನಿಸಿದರು. ‘ನಾವು ರೈತರು ಕಚೇರಿ ಧ್ವಂಸ ಮಾಡಲು ಬಂದಿಲ್ಲ. ದೂಳು ಇರುವ ನೆಲದಲ್ಲೇ ಕುಳಿತು ಧರಣಿ ಹೇಗೆ ನಡೆಸುವುದು’ ಎಂದು ರೈತರು ಪ್ರಶ್ನಿಸಿದರು. ಕೆಲ ರೈತರು ನೀವು ಒಳಗೆ ಬಿಡದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸುವುದಾಗಿ ಆಕ್ರೋಶಗೊಂಡು ರಸ್ತೆ ತಡೆ ನಡೆಸಿದರು.

ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಜಿಲ್ಲಾಧಿಕಾರಿಯನ್ನು ರೈತರಿರುವ ಜಾಗಕ್ಕೆ ಕರೆಯಿಸಿದರು. ನಂತರ ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿ, ‘ನಿಮ್ಮೊಂದಿಗೆ ನಾನು ಸಹ ಕುಳಿತುಕೊಳ್ಳವೆ. ನಾನು ರೈತನ ಮಗ. ಇಲ್ಲಿ ಬೇಡ ಬನ್ನಿ ನೀವು ಇಷ್ಟಪಡುವ ಜಾಗದಲ್ಲಿ ಧರಣಿ ನಡೆಸಿ’ ಎಂದು ಹೇಳಿದಾಗ ಎಲ್ಲ ರೈತರು ಮುಖ್ಯ ದ್ವಾರದೊಳಗೆ ಪ್ರವೇಶಿಸಿ ಧರಣಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT