ಮಂಗಳವಾರ, ಮೇ 17, 2022
26 °C
ಫೆ. 19ರಿಂದ ಆರಂಭ l ಹೋರಾಟಗಾರ ತ.ನ. ಪ್ರಭುದೇವ್‌ ಅಧ್ಯಕ್ಷರಾಗಿ ಆಯ್ಕೆ

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 19 ಮತ್ತು 20ರಂದು ನಗರದ ಬಸವ ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ ಮಹದೇವ್‌ ಹೇಳಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಮುಂದೂಡಲಾಗಿದ್ದ 2020ನೇ ಸಾಲಿನ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಈಗ ನಡೆಸಲಾಗುತ್ತಿದೆ. ಹಿರಿಯ ಕನ್ನಡಪರ ಹೋರಾಟಗಾರ ತ.ನ. ಪ್ರಭುದೇವ್‌ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ‌ಸಮ್ಮೇಳನದಲ್ಲಿ ಹಿರಿಯ ಸಾಹಿತಿ‌ ಡಾ.ಸಿದ್ದಲಿಂಗಯ್ಯ, ಚಿತ್ರನಟಿ ಭವ್ಯಾ, ಪರಿಷತ್‌ನ‌ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ್, ಶಾಸಕ ಟಿ. ವೆಂಕಟರಮಣಯ್ಯ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿ.ಮಾ. ಸುಧಾಕರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಫೆ. 19ರಂದು ಬೆಳಿಗ್ಗೆ 8ಕ್ಕೆ ಬಸವ ಭವನದ ಆವರಣದಲ್ಲಿ ಧ್ವಜಾರೋಹಣದೊಂದಿಗೆ ಆರಂಭವಾಗುವ ಸಮ್ಮೇಳನದಲ್ಲಿ ನಗರದ ಡಾ.ರಾಜ್‌ಕುಮಾರ್ ಪ್ರತಿಮೆಗೆ ಪುಷ್ಪ ನಮನದ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಚಾಲನೆಗೊಳ್ಳಲಿದೆ. ಮಧ್ಯಾಹ್ನ 2 ಗಂಟೆಯಿಂದ ನಾಡು, ನುಡಿ, ಸಂಸ್ಕೃತಿ ಕುರಿತು ವಿಚಾರಗೋಷ್ಠಿ, ಕನ್ನಡ, ಮಹಿಳೆ ಮತ್ತು ಮಕ್ಕಳು ಕುರಿತು ವಿಚಾರಗೋಷ್ಠಿ ನಡೆಯಲಿದೆ. ಸಂಜೆ 6 ಗಂಟೆಯ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 20ರಂದು ಬೆಳಿಗ್ಗೆ 9 ಗಂಟೆಗೆ ಕೃಷಿ, ನೀರಾವರಿ, ನೇಕಾರಿಕೆ ಕುರಿತ ವಿಚಾರಗೋಷ್ಠಿ, ಬೆಳಿಗ್ಗೆ 11.30ಕ್ಕೆ ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ, ಕವಿಗೋಷ್ಠಿ, ಸನ್ಮಾನ ಸಮಾರಂಭ, ಸಂಜೆ 5 ಗಂಟೆಗೆ ಸಮಾರೋಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ ನಡೆಯಲಿದೆ ಎಂದು ವಿವರಿಸಿದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಸು. ನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಪರ ಹೋರಾಟಗಾರರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ‌ಹೆಮ್ಮೆಯ ಸಂಗತಿ. ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಅಧ್ಯಕ್ಷ ಹುಲಿಕಲ್ ‌ನಟರಾಜ್ ಮಾತನಾಡಿ, ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯಕ್ರಮ ನಡೆಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ರಾಜೇಂದ್ರಕುಮಾರ್, ರಾಜು ಸಣ್ಣಕ್ಕಿ, ವಿ.ಸಿ. ಜ್ಯೋತಿಕುಮಾರ್, ಗಂಗರಾಜ್ ಶಿರವಾರ, ನಿರ್ಮಲಾ, ತರಿದಾಳ್ ‌ಶ್ರೀನಿವಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು