ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ | ಜಿಲ್ಲೆಗೊಂದು ಗೋಶಾಲೆ ತೆರೆಯಲು ಸಿದ್ಧತೆ

400 ಪಶು ವೈದ್ಯಕೀಯ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಪ್ರಭು ಬಿ. ಚವ್ಹಾಣ್
Last Updated 26 ಜೂನ್ 2022, 7:27 IST
ಅಕ್ಷರ ಗಾತ್ರ

ತೂಬಗೆರೆ (ದೊಡ್ಡಬಳ್ಳಾಪುರ ತಾಲ್ಲೂಕು): ‘ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರದಿಂದ ಪ್ರತಿ ಜಿಲ್ಲೆಗೆ ಒಂದರಂತೆ 30 ಗೋಶಾಲೆಗಳನ್ನು ತೆರೆಯುವ ಯೋಜನೆ ಪ್ರಗತಿಯಲ್ಲಿದೆ. ಆತ್ಮನಿರ್ಭರ ಗೋಶಾಲೆ ತೆರೆಯುವ ಮೂಲಕ ಗೋಉತ್ಪನ್ನಗಳನ್ನು ಸ್ವತಃ ಸಿದ್ಧಪಡಿಸುವ ಯೋಜನೆ ರೂಪಿಸಲಾಗಿದೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್ ಹೇಳಿದರು.

ತಾಲ್ಲೂಕಿನ ಘಾಟಿಕ್ಷೇತ್ರದ ರಾಷ್ಟ್ರೋತ್ಥಾನ ಪರಿಷತ್‌ನ ಗೋಶಾಲಾ ಆವರಣದಲ್ಲಿ ಶನಿವಾರ ಮಾಧವ ಸೃಷ್ಟಿ, ಆ್ಯಪ್ಟೆನ್ ಇಂಡಿಯಾ, ಜೀವನ್ ಮುಕ್ತಿ, ಹಸಿರುಸೇನೆ ಪಡೆಯ ಸಹಯೋಗದಡಿ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಗೋವುಗಳ ರಕ್ಷಣೆಗಾಗಿ ಹೆಚ್ಚು ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಘೋಷಿಸಲಾಗಿದ್ದ 100 ಗೋಶಾಲೆಗಳಲ್ಲಿ ತಾಲ್ಲೂಕಿಗೆ ಒಂದರಂತೆ ತೆರೆಯುವ ಕುರಿತು ಸಿದ್ಧತೆ ನಡೆಯುತ್ತಿದೆ. ಜಿಲ್ಲಾಮಟ್ಟದಲ್ಲಿ ಈಗಾಗಲೇ 10 ಗೋಶಾಲೆಗಳು ಸಿದ್ಧವಾಗಿವೆ. ಪ್ರತಿ ಗೋಶಾಲೆಗೆ ₹50 ಲಕ್ಷ ಅನುದಾನ ನೀಡಲಾಗುತ್ತಿದೆ. ಕೆಲವೆಡೆ ಸ್ಥಳಗಳು ಮೀಸಲಿಡುವ ಕಾರಣದಿಂದ ವಿಳಂಬವಾಗುತ್ತಿದೆ ಎಂದರು.

ರಾಜ್ಯದಲ್ಲಿ ಪ್ರಾಣಿಗಳ ಸಹಾಯವಾಣಿ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಪ್ರಾಣಿಗಳ ರಕ್ಷಣೆಗೆ ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಇಲಾಖೆಯಲ್ಲಿ ಸಹಾಯವಾಣಿ ತೆರೆದಿದ್ದು, 8277 100 200 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಪುಣ್ಯಕೋಟಿ ದತ್ತು ಯೋಜನೆಯಡಿ ರಾಸುಗಳನ್ನು ದತ್ತು ಪಡೆಯುವ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಗೋಶಾಲೆ ತೆರೆಯಲು ಖಾಸಗಿ ಸಂಘ–ಸಂಸ್ಥೆಗಳಿಗೂ ಅವಕಾಶವಿದೆ. ಈ ಶಾಲೆಗಳಿಂದ ಉತ್ತಮ ಆದಾಯವೂ ಇದೆ. ಘಾಟಿಯಲ್ಲಿನ ಈ ಗೋಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

400 ಹುದ್ದೆಗಳ ನೇಮಕಾತಿ: ರಾಜ್ಯದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುತ್ತಿದೆ. 400 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಇದೇ ವೇಳೆ ಗೋಶಾಲೆಯನ್ನು ಸುತ್ತಾಡಿ ಗೋವುಗಳಿಗೆ ಪೂಜೆ ಸಲ್ಲಿಸಿದ ಸಚಿವರು, ಕರುಗಳನ್ನು ಕೈಯಲ್ಲಿ ಎತ್ತಿಕೊಂಡು ಸಂತಸ ವ್ಯಕ್ತಪಡಿಸಿದರು. ಗೋವುಗಳ ಮೈಸವರಿ, ಮುತ್ತಿಟ್ಟು ಪ್ರೀತಿ ವ್ಯಕ್ತಪಡಿಸಿದರು.

‘ಪ್ರಾಣಿಗಳ ಮೇಲಿನ ಪ್ರೀತಿಯಿಂದ ಮತ್ತೊಮ್ಮೆ ಪಶು ಸಂಗೋಪನಾ ಸಚಿವನಾಗಿ ಮುಂದುವರಿದಿದ್ದೇನೆ. ನಮ್ಮ ಮನೆಯಲ್ಲಿಯೂ ಸಾಕಷ್ಟು ಹಸುಗಳಿವೆ’ ಎಂದು ತಮ್ಮ ಪ್ರಾಣಿ ಸೇವೆಯನ್ನು ಮೆಲುಕುಹಾಕಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಔಷಧೀಯ ಸಸ್ಯಗಳು ಸೇರಿದಂತೆ ಸುಮಾರು 1,200ಕ್ಕೂ ಹೆಚ್ಚು ಸಸಿಗಳನ್ನು ಆವರಣದಲ್ಲಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರೋತ್ಥಾನ ಪರಿಷತ್‌ನ ಗೋಶಾಲೆಯ ಯೋಜನಾ ವ್ಯವಸ್ಥಾಪಕ ಜೀವನ್‌ಕುಮಾರ್, ಜೀವನ್ ಮುಕ್ತಿ ಸಂಸ್ಥೆಯ ಮಾರ್ಗದರ್ಶಕಿ ರೂಪಾ, ಹಸಿರುಸೇನೆ ಪಡೆ, ಆ್ಯಪ್ಟೆನ್ ಇಂಡಿಯಾ ಕಂಪನಿ ಸಿಬ್ಬಂದಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT