ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲಿಗೆ ಸಿಗದ ಬೆಲೆ: ರೈತರ ಕಂಗಾಲು

ವೈಜ್ಞಾನಿಕ ದರ ನಿಗದಿಗೆ ರಾಜ್ಯ ಸರ್ಕಾರಕ್ಕೆ ಒತ್ತಾಯ
Last Updated 3 ಸೆಪ್ಟೆಂಬರ್ 2021, 3:44 IST
ಅಕ್ಷರ ಗಾತ್ರ

ವಿಜಯಪುರ: ‘ಕಷ್ಟಪಟ್ಟು ದುಡಿದರೆ ತಕ್ಕ ಬೆಲೆ ಸಿಗಲ್ಲ. ಬೇರೆ ಕೆಲಸ ಮಾಡೋಣವೆಂದರೆ ನಮಗೆ ಗೊತ್ತಿಲ್ಲ. ಉದ್ಯೋಗ ಸಿಗುತ್ತೋ ಇಲ್ವೋ. ಕೃಷಿ ಕೈಹಿಡಿಯುತ್ತದೆ ಎಂದು ನಂಬಿಕೊಂಡು ಜೀವನ ಮಾಡುತ್ತಾ ಬಂದಿದ್ದೇವೆ’.

-ಹೀಗೆಂದು ಅಳಲು ತೋಡಿಕೊಂಡಿದ್ದು ಯುವ ರೈತ ಮುಖಂಡ ಪ್ರದೀಪ್. ಹೋಬಳಿಯ ಗಡ್ಡದನಾಯಕನಹಳ್ಳಿಯ ಈ ರೈತ ತೊಟಗಾರಿಕೆ, ರೇಷ್ಮೆ, ಹೂವು, ರಾಗಿ ಸೇರಿದಂತೆ ವಿವಿಧ ಬಗೆಯ ಕೃಷಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲವಾದ ಕಾರಣ ನಮ್ಮಂತೆ ಬಹಳಷ್ಟು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ತೋಡಿಕೊಂಡರು.

ಮೊದಲು ಮನೆಯಲ್ಲಿದ್ದ ಎಲ್ಲರೂ ಒಗ್ಗಟ್ಟಿನಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈಗ ಮನೆಯಲ್ಲಿ ಕೆಲವರು, ನಮ್ಮ ಪೂರ್ವಿಕರಿಂದ ಬಂದಿರುವ ಕಸುಬು ಎನ್ನುವ ಕಾರಣಕ್ಕೆ ತೊಡಗಿಸಿಕೊಳ್ಳುತ್ತಾರೆ. ಕುಟುಂಬವನ್ನು ನಿರ್ವಹಣೆ ಮಾಡಲು ಮನೆಯ ಇತರೇ ಸದಸ್ಯರು ವಿಮಾನ ನಿಲ್ದಾಣ ಸೇರಿದಂತೆ ಬೇರೆ ಕಡೆಗಳಲ್ಲಿ ಕೆಲಸ ಹುಡುಕಿಕೊಂಡು ಪೋಷಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತೋಟಗಳಿಗೆ ಹಾಕುವ ರಸಗೊಬ್ಬರದ ಬೆಲೆ ದುಬಾರಿಯಾಗಿದೆ. ಕೊಟ್ಟಿಗೆ ಗೊಬ್ಬರ ಒಂದು ಟ್ರ್ಯಾಕ್ಟರ್ ಲೋಡಿಗೆ ₹ 4 ಸಾವಿರ ಆಗಿದೆ. ಮಾರುಕಟ್ಟೆಯಲ್ಲಿ ಡಿಎಪಿ ಸಿಗುತ್ತಿಲ್ಲ. ಮಳೆಗಾಲದಲ್ಲಿ ಕೊಳವೆಬಾವಿಗಳಲ್ಲಿ ಒಂದಷ್ಟು ನೀರು ಬರುತ್ತವೆ. ಉಳಿದಂತೆ ನಮಗೆ ನೀರಿನ ಕೊರತೆ ಜಾಸ್ತಿಯಾಗುತ್ತದೆ. ಇಂತಹ ಕಠಿಣವಾದ ಸಮಯದಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಹಾಯಿಸಿ, ಬೆಳೆ ಬೆಳೆದರೂ ನಮಗೆ ಕನಿಷ್ಠ ಬೆಲೆಯೂ ಸಿಗುತ್ತಿಲ್ಲ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಬಾಡಿಗೆ ಕಾರ್ಮಿಕರ ಕೂಲಿ ಸೇರಿದಂತೆ ಎಲ್ಲವನ್ನೂ ಕೈಯಿಂದ ಕಟ್ಟಬೇಕು ಎಂದು ಎಂಬುದು ರೈತರ ಅಳಲು.

ರೈತ ರಾಮಾಂಜಿನಪ್ಪ ಮಾತನಾಡಿ, ‘ನಾವು ಹೂವು ಬೆಳೆದಿದ್ದೇವೆ. ಹಬ್ಬದ ಸೀಸನ್‌ನಲ್ಲಿ ಒಂದು ಕೆ.ಜಿಗೆ ₹ 100ವರೆಗೂ ಬೆಲೆ ಇತ್ತು. ಈಗ ಕೇವಲ ₹ 60ರಿಂದ ₹ 70ಕ್ಕೆ ಬಂದಿದೆ. ಇಷ್ಟು ಬೆಲೆ ಇದ್ದರೆ ನಮಗೆ ಹೂಡಿರುವ ಬಂಡವಾಳವೂ ಬರಲ್ಲ. ಕೂಲಿನೂ ಬರಲ್ಲ, ಸರ್ಕಾರವೇನೋ ರೈತರಿಗೆ ಸಬ್ಸಿಡಿ ಕೊಡ್ತದೆ. ಆದರೆ, ನಿಜವಾದ ರೈತರಿಗೆ ಇದರ ಸೌಲಭ್ಯ ಸಿಗುತ್ತಿಲ್ಲ. ಮಧ್ಯವರ್ತಿಗಳ ಪಾಲಾಗುತ್ತಿದೆ’ ಎಂದು ಹೇಳಿದರು.

ರೈತ ನಾಗರಾಜಪ್ಪ ಮಾತನಾಡಿ, ‘ರೈತರ ಕಷ್ಟ ನಿಜವಾಗಿಯೂ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಕೂಡ ರೈತರ ಸಂಕಷ್ಟವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿ ಕೇವಲ ರಾಜಕಾರಣಕ್ಕೆ ಇಳಿದುಬಿಟ್ಟಿದ್ದಾರೆ’ ಎಂದು ದೂರಿದರು.

‘ಒಂದು ಕೊಳವೆಬಾವಿ ಕೊರೆಯಿಸಬೇಕಾದರೆ ಕನಿಷ್ಠವೆಂದರೂ ₹ 8 ಲಕ್ಷ ಖರ್ಚು ಮಾಡಬೇಕು. ಒಂದು ಬಾರಿ ಪಂಪ್‌, ಮೋಟಾರ್‌ ರಿಪೇರಿ ಬಂದರೆ ₹ 20 ಸಾವಿರ ಖರ್ಚು ಮಾಡಬೇಕು. ಬ್ಯಾಂಕ್‌ಗಳಿಂದ ಪಡೆದಿರುವ ಸಾಲ ತೀರಿಸಬೇಕು. ಬೆಲೆಗಳಿಲ್ಲದೆ ಸಾಲ ತೀರಿಸುವುದು ಹೇಗೆ, ಮಕ್ಕಳನ್ನು ಓದಿಸುವುದು ಹೇಗೆ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೈಗಾರಿಕೆಗಳು ನಷ್ಟವಾದರೆ ಕೋಟಿಗಟ್ಟಲೆ ಪರಿಹಾರದ ಹಣ ಬಿಡುಗಡೆ ಮಾಡ್ತಾರೆ. ರೈತರಿಗೆ ನಷ್ಟವಾದರೆ ಬಿಡಿಗಾಸು ಪರಿಹಾರ ನೀಡುತ್ತಾರೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು ರೈತ
ಸುಬ್ಬಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT