ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಹಾಲು ಪೂರೈಕೆಗೆ ಆದ್ಯತೆ ನೀಡಿ

ಯಲುವಹಳ್ಳಿ ಡೇರಿ: ವಾರ್ಷಿಕ ಸಾಮಾನ್ಯ ಸಭೆ
Last Updated 29 ಆಗಸ್ಟ್ 2019, 13:58 IST
ಅಕ್ಷರ ಗಾತ್ರ

ವಿಜಯಪುರ: ಹಾಲು ಉತ್ಪಾದಕರ ಪರಿಶ್ರಮ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯಿಂದ ಮಾತ್ರ ಡೇರಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಯಲುವಹಳ್ಳಿ ಡೇರಿ ಅಧ್ಯಕ್ಷ ಡಿ.ಗಜೇಂದ್ರ ಹೇಳಿದರು.

ಇಲ್ಲಿಗೆ ಸಮೀಪದ ಯಲುವಹಳ್ಳಿ ಡೇರಿಯಲ್ಲಿ ಗುರುವಾರ ಆಯೋಜಿಸಿದ್ದ 2018-19 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಸಹಕಾರ ಸಂಘಗಳು ಎಲ್ಲರ ಏಳಿಗೆಗಾಗಿ ಅಭಿವೃದ್ಧಿಯಾಗಬೇಕಾಗಿದೆ. ಉತ್ಪಾದಕರು ನೀಡುವ ಒಂದೊಂದು ಹನಿ ಹಾಲಿನ ಹಿಂದೆ ಸಾಕಷ್ಟು ಪರಿಶ್ರಮವಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ಕಾರ್ಯನಿರ್ವಹಿಸಬೇಕಾಗಿದೆ. ಹೈನುಗಾರಿಕೆಯನ್ನು ನಂಬಿಕೊಂಡು ಸಾಕಷ್ಟು ಕುಟುಂಬಗಳು ಇಂದು ಜೀವನ ಮಾಡುತ್ತಿವೆ. ಸದಸ್ಯರು ಗುಣಮಟ್ಟದ ಹಾಲು ಡೇರಿಗೆ ನೀಡುವ ಮೂಲಕ ಸಂಘವನ್ನು ಬಲಪಡಿಸಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮೀಣ ಪ್ರದೇಶದ ರೈತರು ಈಗ ಹೈನುಗಾರಿಕೆಯನ್ನೇ ನಂಬಿದ್ದು, ಇದರ ಪರಿಣಾಮವಾಗಿ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಹೈನುಗಾರಿಕೆಗೆ ಹಲವು ಸವಲತ್ತುಗಳನ್ನು ನೀಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

‘ರೈತರು ರಾಸುಗಳಿಗೆ ತಪ್ಪದೆ ವಿಮಾ ಯೋಜನೆ ಮಾಡಿಸಿಕೊಂಡರೆ ರಾಸುಗಳು ಆಕಸ್ಮಿಕವಾಗಿ ಮರಣಹೊಂದಿದರೆ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ವಿಮೆಯಿಂದ ಬರುವ ಹಣದಿಂದ ಸಾಧ್ಯವಾಗುತ್ತದೆ ಒಕ್ಕೂಟದಿಂದ ನೀಡುತ್ತಿರುವ ಪಶು ಆಹಾರಕ್ಕೆ ಸಬ್ಸಿಡಿ ಕೊಡಬೇಕು’ ಎಂದರು.

ಬೆಂಗಳೂರು ಹಾಲು ಒಕ್ಕೂಟ ದೇವನಹಳ್ಳಿ ಶಿಬಿರದ ಮಾರ್ಗ ವಿಸ್ತರಣಾಧಿಕಾರಿ ಎಂ. ಮುನಿರಾಜು ಮಾತನಾಡಿ, ‘ಸಂಘದ ಏಳಿಗೆಯಲ್ಲಿ ಪ್ರತಿಯೊಬ್ಬ ಸದಸ್ಯರ ಪಾತ್ರ ಮಹತ್ತರವಾಗಿರುತ್ತದೆ. ಡೇರಿ ಸಿಬ್ಬಂದಿ ಒಕ್ಕೂಟದಿಂದ ಉತ್ಪಾದಕರಿಗೆ ಬರುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಸಂಘದ ಏಳಿಗೆಗಾಗಿ ತಯಾರಿಸುವಂತಹ ವಾರ್ಷಿಕ ಬಜೆಟ್‌ನ ಏರಿಕೆ, ಇಳಿಕೆಯ ಬಗ್ಗೆಯೂ ತೀರ್ಮಾನ ಮಾಡಲು ಸದಸ್ಯರು ಹಾಗೂ ಉತ್ಪಾದಕರಿಗೆ ಅವಕಾಶವಿದೆ’ ಎಂದರು.

‘ಲೆಕ್ಕಪತ್ರಗಳಲ್ಲಿ ಲೋಪದೋಷಗಳಿದ್ದರೆ ಪ್ರಶ್ನಿಸುವ ಹಕ್ಕು ನಿಮಗಿರುವುದರಿಂದ ಸಭೆಯಲ್ಲೆ ಪ್ರಶ್ನೆ ಮಾಡಬಹುದು. ಕಾಲುಬಾಯಿ ಜ್ವರ ಬರುವ ಮುಂಚೆ ಲಸಿಕೆ ಹಾಕಿಸಬೇಕು’ ಎಂದರು.

‘8 ವರ್ಷದಿಂದ ಡೇರಿಗೆ ಹಾಲು ಸರಬರಾಜು ಮಾಡುತ್ತಿದ್ದೇವೆ. ಈ ಬಾರಿ ಸಂಘದಲ್ಲಿ ಷೇರು ನೀಡಬೇಕು’ ಎಂದು ಹಾಲು ಉತ್ಪಾದಕರು ಮನವಿ ಮಾಡಿದರು.ಸಂಘದ ನಿರ್ದೇಶಕರ ಸಭೆಯಲ್ಲಿ ಚರ್ಚಿಸಿ ಷೇರು ನೀಡಲು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಗಜೇಂದ್ರ ತಿಳಿಸಿದರು. ಡೇರಿ ವತಿಯಿಂದ ಹಾಲು ಉತ್ಪಾದಕರಿಗೆ 15 ಲೀಟರ್ ಸಾಮರ್ಥ್ಯದ ಹಾಲಿನ ಕ್ಯಾನುಗಳನ್ನು ವಿತರಣೆ ಮಾಡಿದರು.

ಡೇರಿ ಉಪಾಧ್ಯಕ್ಷ ಎನ್. ನಾಗರಾಜ್, ನಿರ್ದೇಶಕರಾದ ಕೆ. ಸೀನಪ್ಪ, ಸಿ.ಎನ್. ಮುನೇಗೌಡ, ಮಲ್ಲೇಶಪ್ಪ, ಪಿ.ಪಾಪಣ್ಣ, ಶಿವಶಂಕರಪ್ಪ, ಸಿ. ಮುನಿರಾಜು, ವೈ.ಎಂ. ಮುನಿಕೃಷ್ಣ, ರತ್ನಮ್ಮ, ನಾಗವೇಣಿ, ಎಂ. ವೆಂಕಟರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಎನ್. ಮಂಜುನಾಥ್, ಹಾಲು ಪರೀಕ್ಷಕ ರಾಘವೇಂದ್ರ, ಸಹಾಯಕ ಡಿ.ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT