ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಖಾಸಗಿ ಶಿಕ್ಷಕರ ವೃತ್ತಿ ಗೌರವ ರಕ್ಷಣೆ

ಶಿಕ್ಷಕರ ಸಂಘದ ಅಭಿನಂದನಾ ಸಮಾರಂಭದಲ್ಲಿ ಪುಟ್ಟಣ್ಣ
Last Updated 11 ಸೆಪ್ಟೆಂಬರ್ 2020, 2:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್ ನೀಡಲು ಶಿಕ್ಷಣ ಸಚಿವರಿಂದ ಸ್ಪಂದನೆ ಬಂದಿದೆ’ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಪುಟ್ಟಣ್ಣ ಹೇಳಿದರು.

ಅವರು ತಾಲ್ಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ಹಾಗೂ ವಿವಿಧ ಶಿಕ್ಷಕರ ಸಂಘಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಅನುದಾನ ರಹಿತ ಶಾಲಾ ಕಾಲೇಜು ಗಳ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಕೋವಿಡ್-19 ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಶಿಕ್ಷಣ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆ ನಡೆದಿದೆ. ಶಿಕ್ಷಕರ ವೃತ್ತಿ ಗೌರವ ಉಳಿಸಿಕೊಳ್ಳುವ ಜೊತೆಗೆ ಅವರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

‘ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ತನಕ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಶಿಕ್ಷಕರ ಮತ್ತು ಉಪನ್ಯಾಸಕರ ಸಂಘಟನೆಗಳ ಶ್ರಮ ಮಹತ್ವದ್ದು’ ಎಂದರು.

‘ಯಾವುದೇ ಪಕ್ಷಸರ್ಕಾರ ನಡೆಸಿದರೂ ಶಿಕ್ಷಕರ ಕ್ಷೇತ್ರದ ಜನಪ್ರನಿಧಿಗಳು ಶಿಕ್ಷಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದಾರೆ. ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ತಾರತಮ್ಯ, ಬಡ್ತಿ ಶಿಕ್ಷಕರ ವೇತನ, ಶಿಕ್ಷಕರ ಸ್ನೇಹಿ ವರ್ಗಾವಣೆ ನೀತಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಹೆಚ್ಚುವರಿ ಸಮಸ್ಯೆ, ಅನುದಾನರಹಿತ ಶಿಕ್ಷಕರಿಗೆ ಪಿಎಫ್ ಮತ್ತು ಚೆಕ್ ಮೂಲಕ ವೇತನ ಬಿಡುಗಡೆ ಮುಂತಾದ ಹಲವಾರು ಸಮಸ್ಯೆಗಳನ್ನು ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಮಾಡಲಾಗಿದೆ. ಶಿಕ್ಷಕರ ಮತ್ತು ಉಪನ್ಯಾಸಕರ ಇನ್ನು ಹಲವಾರು ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಇದಕ್ಕಾಗಿ ಶಿಕ್ಷಕರ ಮತ್ತು ಉಪನ್ಯಾಸಕರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ’ ಎಂದರು.

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಬಡ್ತಿ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಎಲ್ಲಪ್ಪಗೌಡ ಮಾತನಾಡಿ, ‘ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮತ್ತು ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಿಗೆ ಬಡ್ತಿ ಪಡೆದಿರುವ ಸಹ ಶಿಕ್ಷಕರು ಮತ್ತು ಉಪನ್ಯಾಸಕರು ಕಡಿಮೆ ಸಂಬಳ ಪಡೆಯುವಂತಾಗಿದೆ. 6ನೇ ವೇತನ ಆಯೋಗದಲ್ಲಿ ಬಡ್ತಿ ಶಿಕ್ಷಕರಿಗೆ ಅಗಿರುವ ವೇತನ ತಾರತಮ್ಯವನ್ನು ನಿವಾರಿಸಲು ಮಾಡಲಾಗಿರುವ ಶಿಫಾರಸು ಇನ್ನು ಜಾರಿಗೆ ಬಂದಿಲ್ಲ. ಈ ಸಂಬಂಧ ಹೋರಾಟವನ್ನು ಮಾಡ ಲಾಗುತ್ತಿದೆ. ಈಗ ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಆದರೆ ಶಿಕ್ಷಕರ ಸಮಸ್ಯೆ ಮಾತ್ರ ನಿರಂತರವಾಗಿ ಮುಂದುವರಿದಿವೆ’ ಎಂದರು.

ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಕೆ.ಮಂಜುನಾಥ್, ದೊಡ್ಡಬಳ್ಳಾಪುರ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎ.ಸುಬ್ರಮಣಿ, ದೈಹಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಲಕ್ಷ್ಮೀಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT