ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕೃಷಿ ಸೌಕರ್ಯ ಯೋಜನೆಗೆ ಪ್ರಚಾರ

ಅನುಷ್ಠಾನದಲ್ಲಿ ಕ್ರಮ, ಅಧಿಕಾರಿಗಳ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ಸೂಚನೆ
Last Updated 24 ಏಪ್ರಿಲ್ 2021, 5:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ಕೃಷಿ ಮೂಲಸೌಕರ್ಯ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಯಶಸ್ವಿಗೊಳಿಸಲು ವ್ಯಾಪಕ ಪ್ರಚಾರ ಕೈಗೊಳ್ಳುವ ಮೂಲಕ ರೈತ ಉತ್ಪಾದಕ ಸಂಘಗಳು,ಮಾರುಕಟ್ಟೆ ಸಹಕಾರಿ ಸಂಘಗಳಿಗೆ ಯೋಜನೆಯ ಅರಿವು ಮೂಡಿಸಿಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಕೃಷಿ ಮೂಲ ಸೌಕರ್ಯ ನಿಧಿ(AIF)’ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೂತನ ಯೋಜನೆಯಡಿ ಜಿಲ್ಲೆಯಲ್ಲಿರುವ ಕೃಷಿ ಮೂಲ ಸೌಕರ್ಯದಡಿ ರೈತರು ಹಾಗೂ ಸಹಕಾರ ಸಂಘಗಳಿಗೆ ಅಗತ್ಯ ಸಬ್ಸಿಡಿ ಸೌಲಭ್ಯದೊಂದಿಗೆ ನೀಡಲಾಗುವ ಸಹಾಯಧನದ ಬಗ್ಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನಾ ಇಲಾಖೆಗಳು ಕರಪತ್ರಗಳನ್ನು ಹಂಚುವ ಮೂಲಕ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಹೆಚ್ಚು ಬೆಳೆಯಲಾಗುತ್ತಿದ್ದು, ಇಂತಹ ರೈತರನ್ನು ಗುರುತಿಸಿ ಅವರಿಗೆ ಪ್ಯಾಕ್ ಹೌಸ್, ಶೈತ್ಯಾಗಾರಗಳು, ಗೋದಾಮುಗಳ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಬಳಿ ಅಗತ್ಯ ದಾಖಲೆಗಳಿದ್ದರೆ ಬ್ಯಾಂಕ್‌ಗಳು ವಿಳಂಬ ಮಾಡದೆ, ಶೀಘ್ರವಾಗಿ ಸಾಲ ಮಂಜೂರು ಮಾಡುವಂತೆ ಸೂಚಿಸಲಾಗುವುದು ಎಂದರು.

ರೈತ ಸಹಕಾರ ಸಂಘಗಳು,ಸ್ವಸಹಾಯ ಗುಂಪುಗಳ ಸದಸ್ಯರು ಸ್ವತಃ ಪಶು ಆಹಾರ ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಮೂಲಕ ಪಶು ಆಹಾರ ಉತ್ಪಾದನೆ ಮಾಡಬಹುದು. ಕುರಿ, ಮೇಕೆ ಸಾಕಾಣಿಕೆ ಘಟಕಗಳನ್ನು ನಿರ್ಮಿಸಿಕೊಳ್ಳಲು ಈ ಯೋಜನೆಯಡಿ ಅವಕಾಶವಿದ್ದು, ಸಿರಿ ಧಾನ್ಯಗಳನ್ನು ಸಂಗ್ರಹಿಸಿ ಸಹಕಾರ ಸಂಘಗಳ ಮೂಲಕ ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು, ಮಾರುಕಟ್ಟೆ ಸಹಕಾರಿ ಸಂಘಗಳು, ಸ್ವಸಹಾಯ ಸಂಘಗಳು ಸೇರಿದಂತೆ ಈ ಯೋಜನೆ ಲಾಭ ಪಡೆದುಕೊಳ್ಳುವ ವಿವಿಧ ಸಂಘಗಳ ಸದಸ್ಯರಿಗೆ ತಾಲ್ಲೂಕು ಮಟ್ಟದಲ್ಲಿ ತರಬೇತಿ ನೀಡುವ ಮೂಲಕ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು ಹಾಗೂ ಜಿಲ್ಲಾ ಮಟ್ಟದ ರೈತ ಉತ್ಪಾದಕರ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿಲ್ಲಾ ಉಪ ಕೃಷಿ ನಿರ್ದೇಶಕಿ ಎಂ.ಸಿ. ವಿನುತಾ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಧುಸೂದನ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅನಿಲ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT