ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಬಳಕೆಗೆ ಪ್ರಚಾರ ಅಗತ್ಯ: ಶಾಸಕ ಟಿ. ವೆಂಕಟರಮಣಯ್ಯ

Last Updated 27 ನವೆಂಬರ್ 2022, 4:03 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಿರಿಧಾನ್ಯಗಳಿಂದ ಉತ್ತಮ ಆರೋಗ್ಯ ಲಭಿಸಲಿದೆ. ಇವುಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಧಾನ್ಯಗಳ ಮಹತ್ವದ ಬಗ್ಗೆ ಪ್ರಚಾರ ಮುಖ್ಯವಾಗಿದೆ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

ನಗರದ ಪ್ರವಾಸಿ ಮಂದಿರದ ಬಳಿಯಿಂದ ಕೃಷಿ ಇಲಾಖೆ ಮತ್ತು ತಾಲ್ಲೂಕು ಕೃಷಿಕ ಸಮಾಜದ ಸಹಯೋಗದಲ್ಲಿ ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಧ್ಯೇಯೋಕ್ತಿಯೊಂದಿಗೆ ಸಿರಿಧಾನ್ಯಗಳ ನಡಿಗೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪಾರಂಪರಿಕ ಆಹಾರ ಪದ್ಧತಿಗಳಲ್ಲಿ ಇದ್ದ ಸತ್ವಗಳಿಂದ ಹಿರಿಯರು ಹೆಚ್ಚಿನ ಆರೋಗ್ಯ ಹಾಗೂ ಆಯಸ್ಸು ಹೊಂದಿದ್ದರು. ಈಗಿನ ಆಹಾರ ಪದ್ಧತಿ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶ ನೀಡುತ್ತಿಲ್ಲ. ಅರ್ಕಾ, ನವಣೆ ಮೊದಲಾದ ಸಿರಿಧಾನ್ಯಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಪೂರಕವಾಗಿವೆ ಎಂದರು.

ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕೃಷ್ಣ ಬೈರೇಗೌಡ ಕೃಷಿ ಸಚಿವರಾಗಿದ್ದಾಗ ಸಿರಿಧಾನ್ಯ ಉತ್ತೇಜನಕ್ಕೆ ಕಾರ್ಯಕ್ರಮ ರೂಪಿಸಿದ್ದರು. ಈಗ ಸಿರಿಧಾನ್ಯಗಳಿಗೆ ಹೆಚ್ಚಿನ ಮನ್ನಣೆ ದೊರೆಯುತ್ತಿರುವುದು ಉತ್ತಮ ಬೆಳವಣಿಗೆ. ಈಗ ನಗರ ಪ್ರದೇಶಗಳಲ್ಲಿಯೂ ಬಳಸುತ್ತಿರುವುದು ವಿಶೇಷ ಎಂದರು.

29ರಂದು ಸಿರಿಧಾನ್ಯ ಹಬ್ಬ:ಕೃಷಿ ಇಲಾಖೆಯ ಕೇಂದ್ರ ಜಂಟಿ ನಿರ್ದೇಶಕಿ ರೂಪಾ ಮಾತನಾಡಿ, ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಷ್ಟ್ರಮಟ್ಟದ ಸಿರಿಧಾನ್ಯ ಮೇಳವು ಜ. 20ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಇದರ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಿರಿಧಾನ್ಯ ಹಬ್ಬವನ್ನು ನ. 29ರಂದು ಬೆಳಿಗ್ಗೆ 10ಗಂಟೆಗೆ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಡಾ.ಲಲಿತಾ ರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ಆಂಜಿನಗೌಡ, ಉಪಾಧ್ಯಕ್ಷ ರಾಮಾಂಜಿನಪ್ಪ, ರಾಜ್ಯ ತೆಂಗಿನ ನಾರು ಸಹಕಾರ ಮಹಾಮಂಡಳದ ಅಧ್ಯಕ್ಷ ವೆಂಕಟೇಶ್ ಬಾಬು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ. ಲಕ್ಷ್ಮೀನಾರಾಯಣ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವೆಂಕಟೇಗೌಡ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಎಂ.ಸಿ. ವಿನುತಾ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಡಿ. ರಾಜೇಶ್ವರಿ, ತಾಂತ್ರಿಕ ವಿಭಾಗದ ರೂಪ ಸೇರಿದಂತೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಇದ್ದರು.

ಕಾರ್ಯಕ್ರಮದಲ್ಲಿ ಸಿರಿಧಾನ್ಯ ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಸಾಮೂಹಿಕ ವ್ಯಾಯಾಮ ಹಾಗೂ ಯೋಗ ಪ್ರದರ್ಶನ ನಡೆಯಿತು. ನಗರದ ಟಿ.ಬಿ ವೃತ್ತದಿಂದ ಆರಂಭವಾದ ರೋಡ್ ಶೋ ಕೋರ್ಟ್ ರಸ್ತೆ, ತಾಲ್ಲೂಕು ಕಚೇರಿ ರಸ್ತೆ, ಬಸವ ಭವನದ ಮೂಲಕ 3 ಕಿ.ಮೀ. ಸಾಗಿ ಟಿ.ಬಿ ವೃತ್ತದಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT