ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಾಡಿ ಕೆರೆ ಸಂರಕ್ಷಣೆಗೆ ಸಹಕಾರ ಅಗತ್ಯ

ಉಗನವಾಡಿ ಕೆರೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಕರೀಗೌಡ
Last Updated 11 ಡಿಸೆಂಬರ್ 2018, 12:42 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಸ್ಥಳೀಯ ಗ್ರಾಮಸ್ಥರ ಜೀವನಾಡಿಗಳಾಗಿರುವ ಕೆರೆಗಳ ಸಂರಕ್ಷಣೆಗೆ ಸಹಕಾರ ಅಗತ್ಯ’ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

ಇಲ್ಲಿನ ಉಗನವಾಡಿ ಕೆರೆಯನ್ನು ಪರಿಶೀಲಿಸಿ ಸ್ಥಳೀಯ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ‘ನಾವು 50 ವರ್ಷಗಳ ಹಿಂದಿನ ಗ್ರಾಮೀಣ ಜನಜೀವನವನ್ನು ನೆನಪು ಮಾಡಿಕೊಳ್ಳಬೇಕು. ಆನೇಕ ಕಡೆಗಳಲ್ಲಿ ಕೆರೆಯ ನೀರನ್ನು ಪ್ರತಿಯೊಂದಕ್ಕೂ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಕೆರೆಯಿಂದ ದೂರ ಇರುವ ಗ್ರಾಮಗಳಲ್ಲಿ ಬಾವಿ, ರಿಗ್ ಬೋರ್ ಮಾತ್ರ ಇದ್ದವು’ ಎಂದರು.

‘ಆಗ ಅಂತರ್ಜಲದ ಕೊರತೆ ಇರಲಿಲ್ಲ. ಹತ್ತು ವರ್ಷಗಳಿಂದ ನೀರಿಗಾಗಿ ಪರಿತಪಿಸುವಂತಾಗಿದೆ ಎಂದರೆ ನಾವು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಒಂದು ಕುಟುಂಬಕ್ಕೆ ಕನಿಷ್ಠ ನಾಲ್ಕು ಎಕರೆ ಜಮೀನು ಅಧಿಕೃತವಾಗಿ ಇದ್ದರೂ ಅದರ ಪಕ್ಕದಲ್ಲಿರುವ ರಾಜಕಾಲುವೆ, ಕೆರೆಯಂಗಳ ಒತ್ತುವರಿ ಮಾಡಿಕೊಂಡರೆ ನೀರು ಕರೆಗಳಿಗೆ ಹರಿದು ಬರುವುದಾದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಒಂದು ಕಡೆ ಅರಣ್ಯ ನಾಶ ಮತ್ತೊಂದು ಕಡೆ ಹೆಚ್ಚುತ್ತಿರುವ ಕೊಳವೆ ಬಾವಿ, ಅತಿಯಾದ ನೀರಿನ ಬಳಕೆ, ಆನೇಕ ಕಾರಣಗಳು ನಮ್ಮ ಮುಂದಿವೆ. ಈಗಲೇ ಇಷ್ಟೊಂದು ಪರದಾಟವೆಂದರೆ ಭವಿಷ್ಯದ ಪೀಳಿಗೆಗೆ ನಾವು ಕೊಡುವ ಕೊಡುಗೆ ಏನು ಎಂದು ಯೋಚಿಸಬೇಕು’ ಎಂದರು.

‘ಸರ್ಕಾರದಿಂದ ನಯಾ ಪೈಸೆ ಬರುವುದಿಲ್ಲವೆಂದು ಈಗಾಗಲೇ ಹಲವು ಸಾರಿ ಹೇಳಿದ್ದೇನೆ, ಕಾರಹಳ್ಳಿ, ದೇವನಹಳ್ಳಿ, ಕನ್ನಮಂಗಲ ಕೆರೆಯಲ್ಲಿ ಹೂಳು ಎತ್ತುವ ಕಾಮಗಾರಿ ಭರದಿಂದ ಸಾಗುತ್ತಿದೆ. ಕೆಂಪತಿಮ್ಮನಹಳ್ಳಿ ಕೆರೆಯನ್ನು ಈಗಾಗಲೇ ಪರಿಶೀಲಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ’ ಎಂದು ತಿಳಿಸಿದರು.

ಈ ಕೆರೆ ಪೆದ್ದನಗಹಳ್ಳಿ, ಅರಸನಹಳ್ಳಿ, ಉಗನವಾಡಿ ಮೂರು ಗ್ರಾಮ ವ್ಯಾಪ್ತಿಯಲ್ಲಿ ಬರುವುದರಿಂದ 60 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಹೂಳೆತ್ತಲು ಅಂತಹ ದೊಡ್ಡ ಸಮಸ್ಯೆ ಆಗಲಾರದು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT