ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ’

Last Updated 14 ನವೆಂಬರ್ 2019, 14:24 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:‘ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನೆಹರು ಜನ್ಮದಿನವಾದ ನ. 14ರಂದು ಮಕ್ಕಳ ದಿನಾಚರಣೆ ನಡೆಯುತ್ತಿದೆ. ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಹೊಣೆ ಸಮುದಾಯದ ಮೇಲಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಎಂ.ಬಿ.ಕುಲಕರ್ಣಿ ಹೇಳಿದರು.

ಇಲ್ಲಿನ ಕಾರ್ಮಲ್ ಜ್ಯೋತಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ವತಿಯಿಂದ ನಡೆದ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಸಂವಿಧಾನ ಎಲ್ಲ ಮಕ್ಕಳ ಮೂಲಭೂತ ಹಕ್ಕು ಮತ್ತು ಅಗತ್ಯಗಳನ್ನು ರಕ್ಷಿಸುವ ಪ್ರಾಥಮಿಕ ಜವಾಬ್ದಾರಿ ನೀಡಿದೆ. ಇವುಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ಮಕ್ಕಳಿಗೆ ಅನ್ವಯಿಸುವ ಕಾರ್ಮಿಕ ಕಾನೂನುಗಳ ಕಾಯ್ದೆ, ಬಾಲಕಾರ್ಮಿಕರ ನಿಯಂತ್ರಣ ಮತ್ತು ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಮಕ್ಕಳ ಆರೈಕೆ ಮತ್ತು ರಕ್ಷಣೆಗೆ ಸಂಬಂಧಿಸಿದ ಕಾಯ್ದೆ ಮೊದಲಾಗಿ ಮಕ್ಕಳಿಗೆ ಅನ್ವಯಿಸುವ ಪ್ರಮುಖ ಕಾನೂನುಗಳಿವೆ’ ಎಂದರು.

‘ಮಕ್ಕಳಿಗೆ ಶಿಕ್ಷಣದ ಹಕ್ಕು ನೀಡಲಾಗಿದ್ದು, 14 ವರ್ಷದವರೆಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವುದು ಸರ್ಕಾರದ ಹೊಣೆ. ಅಂತೆಯೇ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಪೋಷಕರ ಹೊಣೆಯಾಗಿದೆ. ದೇಶ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರಮಹತ್ವದ್ದು. ಸಾಕ್ಷರತೆ ಪ್ರಮಾಣ ಶೇ 100 ಆಗಬೇಕು. ಬಾಲ್ಯ ವಿವಾಹ ಹಾಗೂ ಮಕ್ಕಳನ್ನು ದುಡಿಸಿಕೊಳ್ಳುವುದು ಬಾಲ ಕಾರ್ಮಿಕ ವಿರೋಧಿ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧ. ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೀಪ್‍ ಎ.ನಾಯಕ್ ಮಾತನಾಡಿ, ‘ಮಕ್ಕಳ ಹಕ್ಕುಗಳ ಸಮ್ಮೇಳನ ಇತಿಹಾಸದಲ್ಲಿಯೇ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲಾದ ಮಾನವ ಹಕ್ಕುಗಳ ಒಪ್ಪಂದ. ಮಕ್ಕಳು ಅಪರಾಧವೆಸಗಿದ್ದರೂ ಅವರನ್ನು ಅಪರ ಎಂದು ಸಂಭೋದಿಸಿ, ವಯಸ್ಕರಂತೆ ನಡೆಸಿಕೊಳ್ಳುವಂತಿಲ್ಲ. ಅಪ್ರಾಪ್ತರ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆಗಾರಿ ಪೋಕ್ಸೋ ಕಾಯ್ದೆ ರೂಪಿಸಲಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಸಿ.ಜೆ.ಸುಬ್ರಮಣ್ಯ, ವಕೀಲರ ಸಂಘದ ಅಧ್ಯಕ್ಷ ರಾ.ಬೈರೇಗೌಡ, ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಅಸಾದುಲ್ಲಾ ಖಾನ್, ಶಾಲಾ ಮುಖ್ಯ ಶಿಕ್ಷಕಿ ರೋಜ್‌ ಶಶಿಕಲಾ, ವಕೀಲರಾದ ಎನ್.ಸುನೀತಾ, ಕೆ.ಎಸ್.ಶ್ರೀಧರ್, ಕೆ.ಎನ್.ಸತೀಶ್‌ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT