ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ:ಜನಪ್ರತಿನಿಧಿಗಳ ಮುಂದೆ ಮಕ್ಕಳ ಅಹವಾಲು

ಜನಪ್ರತಿನಿಧಿಗಳ ಮುಂದೆ ಅಹವಾಲು ಮುಂದಿಟ್ಟ ಶಾಲಾ ಮಕ್ಕಳು
Last Updated 21 ಜನವರಿ 2020, 16:32 IST
ಅಕ್ಷರ ಗಾತ್ರ

ವಿಜಯಪುರ: ನಮಗೆ ಕುಡಿಯುವ ನೀರಿಲ್ಲ. ಶೌಚಾಲಯ ಕೆಟ್ಟಿದೆ. ಶಾಲಾ ಕಟ್ಟಡ ಶಿಥಿಲವಾಗಿದೆ ಅದನ್ನು ದುರಸ್ತಿ ಮಾಡಿಸಿಕೊಡಿ. ಶಾಲೆಗೆ ವಾಟರ್‌ಫಿಲ್ಟರ್ ಹಾಕಿಸಿಕೊಡಿ. ಮಳೆ ಬಂದಾಗ ಶಾಲೆ ಮೇಲ್ಛಾವಣಿ ಸೋರುತ್ತಿದೆ ಅದನ್ನು ಸರಿಪಡಿಸಿ. ಹೀಗೆ ಅನೇಕ ಬೇಡಿಕೆಗಳನ್ನು ಶಾಲಾ ಮಕ್ಕಳು ಜನಪ್ರತಿನಿಧಿಗಳ ಮುಂದೆ ಇಟ್ಟರು.

ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಹಿಳೆ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಮುದುಗುರ್ಕಿ, ಹೊಸಹುಡ್ಯ, ವೆಂಕಟಗಿರಿಕೋಟೆ, ಹುರುಳುಗುರ್ಕಿ ಗ್ರಾಮಗಳ ಮಕ್ಕಳು ತಮ್ಮ ಹಳ್ಳಿ ಹಾಗೂ ಶಾಲೆಗಳಲ್ಲಿನ ಸಮಸ್ಯೆಗಳನ್ನು ತೆರೆದಿಟ್ಟರು.

ಶಾಲಾ ಮಕ್ಕಳ ಅಹವಾಲು ಆಲಿಸಿದ ನಂತರ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ಮಹಿಳೆಯರು ಕೂಡ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಮಕ್ಕಳ ಹಕ್ಕುಗಳ ಕುರಿತು ಗಂಭೀರವಾಗಿ ಚಿಂತನೆ ನಡೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ಉತ್ತಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಜಂಕ್‌ಫುಡ್ ತಿನ್ನುವ ಅಭ್ಯಾಸದಿಂದ ಮಕ್ಕಳು ಕಾಯಿಲೆಗೆ ತುತ್ತಾಗುತ್ತಿರುವುದು ಕಳವಳಕಾರಿ. ಪೋಷಕರು ತಮ್ಮ ಮಕ್ಕಳಿಗೆ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳುವುದನ್ನು ಕಲಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೋಜಮೂರ್ತಿ ಮಾತನಾಡಿ, ಮಕ್ಕಳಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿ ಅವರನ್ನು ಸದೃಢರಾಗಿ ಬೆಳೆಸಬೇಕಿದೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವಲ್ಲಿ ಶಿಕ್ಷಕರೊಂದಿಗೆ ಸಮುದಾಯ ಕೈಜೋಡಿಸಬೇಕಿದೆ ಎಂದು ಹೇಳಿದರು.

ಮಹಿಳೆಯರ ರಕ್ಷಣೆ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ನೀಡಿರುವ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಅಮರನಾಥ್ ಮಾತನಾಡಿ, ಸ್ವಾತಂತ್ರ್ಯ ಬಂದು 73ವರ್ಷ ಕಳೆದರೂ ಶಾಲೆಗಳಲ್ಲಿ ಸಮಾನ ಶಿಕ್ಷಣ, ಗುಣಾತ್ಮಕ ಶಿಕ್ಷಣ, ವಿಷಯವಾರು ಶಿಕ್ಷಕರ ನೇಮಕಾತಿ, ತರಗತಿವಾರು ಕೊಠಡಿ ಸೇರಿದಂತೆ ಮೂಲ ಸೌಕರ್ಯ ಮರೀಚಿಕೆಯಾಗಿ ಉಳಿದಿವೆ. ಅಧಿಕಾರಿಗಳು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಪ್ಪ ಮಾತನಾಡಿ, ಸಮಾನ ಶಿಕ್ಷಣ ಎಲ್ಲರಿಗೂ ಸಿಗಬೇಕು. ಇದು ಸರ್ಕಾರದ ಆಶಯ ಕೂಡ. ಸಂವಿಧಾನದ ಪರಿಚ್ಛೇದ 24ರ ಪ್ರಕಾರ 14ವರ್ಷದೊಳಗಿನ ಮಕ್ಕಳನ್ನು ದುಡಿಮೆ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುವುದನ್ನು ನಿರ್ಭಂದಿಸಲಾಗಿದೆ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ಮಾಲೀಕರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ ಎಂದರು.

ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಸೀನಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ರವಿಪ್ರಕಾಶ್, ಮುನಿರತ್ನಮ್ಮ, ಪ್ರೇಮಕುಮಾರಿ, ಮುಖಂಡ ಮುದುಗುರ್ಕಿ ಮೂರ್ತಿ, ಶಾಲಾ ಶಿಕ್ಷಕರಾದ ಚಂದ್ರಶೇಖರ್, ಸೀತಾರಾಮು, ಮುನಿರಾಜು, ಯಶೋಧ, ಅಮೃತ, ಆದರ್ಶ, ರಾಧ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT