ದುರುದ್ದೇಶಕ ದೂರು ರದ್ದಾಗಬೇಕು

7

ದುರುದ್ದೇಶಕ ದೂರು ರದ್ದಾಗಬೇಕು

Published:
Updated:
ಪೊಲೀಸರ ದಲಿತ ವಿರೋಧಿ ನೀತಿ ಖಂಡಿಸಿ ಡಿವೈಎಸ್‌ಪಿ ಕಚೇರಿ ಮುಂದೆ ಧರಣಿ ನಡೆಸಲಾಯಿತು

ದೊಡ್ಡಬಳ್ಳಾಪುರ: ದಲಿತ ಮುಖಂಡರ ಮೇಲೆ ಪೊಲೀಸರು ದುರುದ್ದೇಶದಿಂದ ದೂರು ದಾಖಲಿಸಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವತಿಯಿಂದ ಶುಕ್ರವಾರ ನಗರದ ಡಿವೈಎಸ್‌ಪಿ ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು.

ನಗರದ ಹೊರವಲಯದ ಹಮಾಮ್ ಕ್ರಾಸ್ ಬಳಿಯಿಂದ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ದಲಿತ ಮುಖಂಡರು ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ನಗರದ ಡಿವೈಎಸ್‌ಪಿ ಕಚೇರಿಯ ಮುಂದೆ ಧರಣಿ ನಡೆಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಅವರು ವಿಶ್ವನಾಥಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾಗ ಪಿ.ಎಸ್.ಐ ಶ್ರೀನಿವಾಸ್ ಎರಡೂ ಕಡೆ ನ್ಯಾಯ ಪರಿಶೀಲನೆ ಮಾಡದೇ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಇದೇ ವಿಚಾರವನ್ನು ಡಿವೈಎಸ್‌ಪಿ ನೇತೃತ್ವದ ಪರಿಶಿಷ್ಟ ಜಾತಿ, ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಕಾರಹಳ್ಳಿ ಶ್ರೀನಿವಾಸ್ ಅವರು ತಮಗಾದ ಅವಮಾನ ಹಾಗೂ ದಲಿತರ ಮೇಲಿನ ಶೋಷಣೆಗಳನ್ನು ಸಭೆಯ ಗಮನಕ್ಕೆ ತಂದಿದ್ದಾರೆ. ಈ ಸಮಯದಲ್ಲಿ ಯಾವುದೇ ಅಶಾಂತಿ ಮಾಡದ ಕಾರಹಳ್ಳಿ ಶ್ರೀನಿವಾಸ್ ಹಾಗೂ ದಲಿತ ಮುಖಂಡ ಮುನಿರಾಜು ಅವರ ವಿರುದ್ಧ ಪಿ.ಎಸ್.ಐ ಶ್ರೀನಿವಾಸ್, ಡಿವೈಎಸ್‌ಪಿ ಆರ್‌. ಮೋಹನ್‌ಕುಮಾರ್ ಹಾಗೂ ನಗರ ಠಾಣೆಯ ಬಿ.ಕೆ. ಪಾಟೀಲ್‌ ಅವರು ದೂರು ದಾಖಲಿಸಿಕೊಂಡಿದ್ದಾರೆ.

ದಲಿತರಿಗೆ ಆಗುತ್ತಿರುವ ಶೋಷಣೆಯ ಬಗ್ಗೆ ಮಾತನಾಡಿದ ದಲಿತ ಮುಖಂಡರ ವಿರುದ್ಧವೇ ದುರುದ್ದೇಶ ಪೂರಕವಾಗಿ ದೂರು ದಾಖಲಿಸಿರುವ ಪಿ.ಎಸ್.ಐ ಶ್ರೀನಿವಾಸ್ ಅಮಾನತ್ತು ಮಾಡಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಬರೀ ವರ್ಗಾವಣೆ ಮಾಡಿದರೆ ಸಾಲದು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಎಲ್ಲೇ ಹೋದರೂ ಬಿಡುವುದಿಲ್ಲ. ದಲಿತ ಚಳುವಳಿಯ ನಾಯಕರುಗಳಾದ ಕಾರಹಳ್ಳಿ ಶ್ರೀನಿವಾಸ್ ಮತ್ತು ಮುನಿರಾಜುರವರ ಮೇಲೆ ದಾಖಲಿಸುವ ಸುಳ್ಳು ದೂರನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಡಿ.ಎಸ್.ಎಸ್ ರಾಜ್ಯ ಸಮಿತಿ ಸದಸ್ಯೆ ಇಂದಿರಾ ಕೃಷ್ಣಪ್ಪ ಮಾತನಾಡಿ, ಪೊಲೀಸ್ ಅಧಿಕಾರಿಗಳ ಈ ವರ್ತನೆ ಸಾಮಾನ್ಯರಿಗೆ ನ್ಯಾಯ ಸಿಗುವುದೇ ಎನ್ನುವ ಪ್ರಶ್ನೆಯಾಗಿದೆ. ದಲಿತರಿಗೆ ಶೋಷಿತರಿಗೆ ರಕ್ಷಣೆ ನೀಡಬೇಕಿರುವ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ಈ ಕೂಡಲೇ ಅಧಿಕಾರಿಗಳು ತಮ್ಮ ವರ್ತನೆಗೆ ಕ್ಷಮೆ ಯಾಚಿಸಬೇಕು ಎಂದರು.

ಡಿ.ಎಸ್.ಎಸ್ ಬೆಂಗಳೂರು ವಿಭಾಗೀಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಡಿವೈಎಸ್‌ಪಿ ನೇತೃತ್ವದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯಲ್ಲಿ ನಾನು ಯಾವುದೇ ರೀತಿಯ ಅನುಚಿತ ವರ್ತನೆ ಮಾಡಿಲ್ಲ. ಅವಾಚ್ಯ ಶಬ್ದಗಳಿಂದ ಯಾರನ್ನೂ ನಿಂದಿಸಿಲ್ಲ. ಆದರೆ ಸಿನಿಮಾ ಶೈಲಿಯಲ್ಲಿ ವರ್ತನೆ ಮಾಡಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿವುದು ಈಗ ಫ್ಯಾಷನ್ ಆಗಿದೆ. ದಲಿತರ ದನಿ ಅಡಗಿಸುವ ಕೆಲಸ ಇಂದು ಆಗುತ್ತಿದೆ. ಪಿ.ಎಸ್.ಐ ಶ್ರೀನಿವಾಸ್‌ರವರ ವರ್ತನೆ ಖಂಡನೀಯ. ಡಿವೈಎಸ್‌ಪಿ ನೇತೃತ್ವದ ಪರಿಶಿಷ್ಟ ಜಾತಿ, ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ನ್ಯಾಯ ಕೇಳಿದ ನಮ್ಮ ಮೇಲೆ ಮೊಕದ್ದಮೆ ದಾಖಲಿಸಲಾಗಿದ್ದು, ದೂರು ಹಿಂಪಡೆಯುವ ತನಕ ಹೋರಾಟ ನಿಲ್ಲುವುದಿಲ್ಲ ಎಂದರು.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕುಂದು ಕೊರತೆಗಳ ಸಭೆಯಲ್ಲಿ ಡಿ.ವೈ.ಎಸ್.ಪಿ ನೇತೃತ್ವದಲ್ಲಿ ನಡೆದಿದ್ದರೂ ಉದ್ದೇಶ ಪೂರ್ವಕವಾಗಿ ಸುಳ್ಳುದೂರು ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಠಾಣೆಗಳಲ್ಲಿ ಬಡವರ, ದಮನಿತರ ಪರವಾಗಿ ಕೆಲಸಮಾಡಲು ಠಾಣಾಧಿಕಾರಿಗಳಿಗೆ ಮೇಲಾಧಿಕಾರಿಗಳು ಸೂಚಿಸಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜ್ಯನ್ಯ ತಡೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಪಿ.ಎಸ್.ಐ ಶ್ರೀನಿವಾಸ್‌ ಅವರ ಅವಧಿಯಲ್ಲಿ ಕೆಲವು ಅಮಾಯಕರ ಮೇಲೆ ಸುಳ್ಳುದೂರುಗಳನ್ನು ದಾಖಲಿಸಿದ್ದು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದು, ಪ್ರಕರಣಗಳನ್ನು ಮೇಲಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಹಕ್ಕೋತ್ತಾಯಗಳನ್ನು ಮಂಡಿಸಲಾಯಿತು.

ಕ್ರಮ ಕೈಗೊಳ್ಳುವ ಭರವಸೆ: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ, ಪೊಲೀಸ್ ಅಧಿಕಾರಿಗಳ ಮೇಲಿನ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಕರಣವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಪಿವಿಸಿ ರಾಜ್ಯ ಅಧ್ಯಕ್ಷ ಮುನಿಆಂಜಿನಪ್ಪ, ನಿವೃತ್ತ ಜಿಲ್ಲಾಧಿಕಾರಿ ರುದ್ರಪ್ಪ ಹನಗವಾಡಿ, ಡಿ.ಎಸ್.ಎಸ್ ರಾಜ್ಯ ಸಮಿತಿ ಸದಸ್ಯರಾದ ನೆರಳೂರು ಮುನಿಕೃಷ್ಣಪ್ಪ, ಬೆಂಗಳೂರು ವಿಭಾಗೀಯ ಸಮಿತಿಯ ಮುನಿಯಲ್ಲಪ್ಪ, ಕೆ.ಆರ್.ಮುನಿಯಪ್ಪ, ರಾಜಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ರಾಜುಸಣ್ಣಕ್ಕಿ, ಐಸ್ನಳ್ಳಿ ಮೂರ್ತಿ, ಕೊರಳೂರು ಶ್ರೀನಿವಾಸ್, ತಿಮ್ಮರಾಯಪ್ಪ ಆವತಿ, ನಾರಾಯಣಸ್ವಾಮಿ, ಎಚ್.ಕೆ.ವೆಂಕಟೇಶ್ ಸೇರಿದಂತೆ ಡಿ.ಎಸ್.ಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !