ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್ ಪುರಸಭೆ ಆಡಳಿತ ವಿರುದ್ಧ ಪ್ರತಿಭಟನೆ

ಟೌನ್ ಬಿಜೆಪಿ ಘಟಕದಿಂದ ತಹಶೀಲ್ದಾರ್‌ಗೆ ಮನವಿ ಪತ್ರ
Last Updated 30 ಅಕ್ಟೋಬರ್ 2019, 14:34 IST
ಅಕ್ಷರ ಗಾತ್ರ

ಆನೇಕಲ್ : ಪಟ್ಟಣದ ಪುರಸಭೆಯ ಆಡಳಿತ ವೈಪಲ್ಯವನ್ನು ಖಂಡಿಸಿ ಆನೇಕಲ್‌ ಟೌನ್ ಬಿಜೆಪಿ ಘಟಕದಿಂದ ಪುರಸಭಾ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪುರಸಭಾ ಸದಸ್ಯ ಬಿ.ನಾಗರಾಜು ಮಾತನಾಡಿ ಆನೇಕಲ್‌ ಪುರಸಭೆ ಆಡಳಿತ ಸಂಪೂರ್ಣ ಹದಗೆಟ್ಟಿದ್ದು ಜನರ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿಂದ ಪಟ್ಟಣದ ಜನತೆ ಪರದಾಡುವಂತಾಗಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಪುರಸಭೆಗೆ ಖಾಯಂ ಮುಖ್ಯಾಧಿಕಾರಿಗಳಿಲ್ಲದೇ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಪ್ರಭಾರ ಪುರಸಭೆಯ ಮುಖ್ಯಾಧಿಕಾರಿಗಳು ಪಟ್ಟಣದ ಯಾವುದೇ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ.

ಆನೇಕಲ್‌ಗೆ ಕಾವೇರಿ ನೀರು ಸರಬರಾಜಾಗುತ್ತಿದ್ದರೂ ಹಲವು ವಾರ್ಡ್‌ಗಳಿಗೆ 15-20 ದಿನಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಎಚ್‌ಡಿ ಪೈಪ್‌ ರಿಪೇರಿ ಎಂಬ ರೆಡಿಮೇಡ್‌ ಉತ್ತರ ನೀಡಲಾಗುತ್ತಿದೆ. ಆದರೆ ಕಾಮಗಾರಿ ಕಳಪೆಯಾಗಿರುವುದರಿಂದ ಪಟ್ಟಣದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವಂತಾಗಿದೆ. ನೀರಿದ್ದು ನೀರಿನ ಅಭಾವ ಎದುರಿಸುವಂತಾಗಿದೆ ಎಂದರು.

ಪಟ್ಟಣದ ಪುರಸಭೆಗೆ ಪೂರ್ಣಾವಧಿ ಮುಖ್ಯಾಧಿಕಾರಿಯಿಲ್ಲ. ಎಂಜಿನಿಯರ್‌ ಇಲ್ಲ. ಕಾಯಂ ವಾಟರ್‌ ಆಪರೇಟರ್‌ಗಳಿಲ್ಲ. ನೀರಿನ ಸೋರಿಕೆ ನಿರಂತರವಾಗಿ ನಡೆಯುತ್ತಿದೆ. ಸೋರಿಕೆ ತಡೆದರೆ ಇಡೀ ಪಟ್ಟಣಕ್ಕೆ ಒಂದು ದಿನ ನೀರು ಪೂರೈಕೆ ಮಾಡಬಹುದು. ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು.

ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಡಂಪಿಂಗ್‌ ಯಾರ್ಡ್‌ಗೆ ಜಾಗ ಮಂಜೂರಾಗಿ ಕಾಂಪೌಂಡ್‌ ನಿರ್ಮಿಸಲಾಗಿದೆ. ಆದರೆ ಕಸ ವಿಲೇವಾರಿ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಎಲ್ಲಂದರಲ್ಲಿ ಕಸವನ್ನು ಎಸೆಯಲಾಗುತ್ತಿದೆ. ಪುರಸಭೆಯಲ್ಲಿ ಚುನಾಯಿತ ಸದಸ್ಯರು ವಾರ್ಡ್‌ಗಳ ಮತದಾರರಿಂದ ಬೈಗುಳ ಕೇಳಬೇಕಾದ ಪರಿಸ್ಥಿತಿ ಅಧಿಕಾರಿಗಳು ನಿರ್ಮಿಸಿದ್ದಾರೆ ಎಂದರು.

ಪಂಚಾಯಿತಿ ವ್ಯಾಪ್ತಿಯಲ್ಲಿನ ಬಡಾವಣೆಗಳನ್ನು ಬೋಗಸ್‌ ದಾಖಲೆಗಳನ್ನು ಸೃಷ್ಟಿಸಿ ಪುರಸಭೆ ವ್ಯಾಪ್ತಿಗೆ ತರಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ ಪುರಸಭೆಯಿಂದ ಕ್ರಮ ಕೈಗೊಂಡಿಲ್ಲ ಎಂದರು.

ಪುರಸಭಾ ಮಾಜಿ ಸದಸ್ಯ ರಾಮಕೃಷ್ಣ ಮಾತನಾಡಿ, ಆನೇಕಲ್‌ನಲ್ಲಿ ಬಡವರು ಮನೆಗಳನ್ನು ನಿರ್ಮಾಣ ಮಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಸಭೆಯಿಂದ ಮನೆ ಕಟ್ಟಲು ಪರವಾನಗಿ ನೀಡುತ್ತಿಲ್ಲ. ಪರವಾನಗಿಯಿಲ್ಲದೇ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಹಲವು ವರ್ಷಗಳಿಂದ ಸಮಸ್ಯೆಯಿದ್ದರೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂದರು.

ಟೌನ್‌ ಬಿಜೆಪಿ ಅಧ್ಯಕ್ಷ ಸಿ.ಕೆ.ಜಗನ್ನಾಥ್ ಮಾತನಾಡಿ, ಪುರಸಭೆ ಆಡಳಿತ ಸಂಪೂರ್ಣ ಹದಗೆಟ್ಟಿದೆ. ಜನರು ರೋಸಿ ಹೋಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ದಿನೇಶ್‌ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಸಮಸ್ಯೆಗಳ ಬಗ್ಗೆ ಉಪವಿಭಾಗಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಎಂ.ಯಂಗಾರೆಡ್ಡಿ, ಪುರಸಭಾ ಸದಸ್ಯರಾದ ಶ್ರೀಕಾಂತ್, ಪ್ರಕಾಶ್‌, ಸುರೇಶ್‌, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಂ.ರಾಮಕೃಷ್ಣ, ಮುಖಂಡರಾದ ಕೆ.ನಾಗರಾಜು, ನರಸಿಂಹರೆಡ್ಡಿ, ಶ್ರೀನಿವಾಸ್‌, ನಾರಾಯಣಪ್ಪ, ಮಧು.ಎಸ್‌.ಮೂರ್ತಿ, ಮುರಳಿ, ರಾಜಪ್ಪ, ಕೀರ್ತಿಪ್ರಸಾದ್‌, ಮುನಿರಾಜು, ನಿರಂಜನ್‌, ಅಂಜನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT