ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ಥಳಿ ಅನಾವರಣಕ್ಕೆ ತಡೆಯಾಜ್ಞೆ ವಿರುದ್ಧ ಪ್ರತಿಭಟನೆ

Last Updated 13 ನವೆಂಬರ್ 2019, 11:50 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಬಿದಲೂರು ಗ್ರಾಮದಲ್ಲಿ ನ.5 ರಂದು ಪ್ರತಿಷ್ಠಾಪಿಸಲಾದ ಪುತ್ಥಳಿ ಅನಾವರಣಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಡೆ ನೀಡಿರುವುದನ್ನು ಖಂಡಿಸಿ ತಾಲ್ಲೂಕು ವಾಲ್ಮೀಕಿ ಸಮುದಾಯದವರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಡೇರಿ ನಾಗೇಶ್ ಮಾತನಾಡಿ, ವಿಶ್ವಕ್ಕೆ ರಾಮಾಯಣದಂತಹ ಮಹಾ ಗ್ರಂಥ ನೀಡಿದ ಮಹಾರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣಕ್ಕೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ದುರದೃಷ್ಟಕರ ಬೆಳವಣಿಗೆ. ಯಾವ ಉದ್ದೇಶದಿಂದ ಅಧಿಕಾರಿಗಳು ತಡೆಯಾಜ್ಞೆ ನೀಡಿದ್ದಾರೆ ಎಂಬುದನ್ನು ವಿವರಿಸದೆ ಒಂದೆರಡು ಸಾಲಿನಲ್ಲಿ ತಡೆಯಾಜ್ಞೆ ಎಂದರೆ ಅರ್ಥವೇನು ಎಂದು ಆಕ್ಷೇಪಿಸಿದರು.

ತಡೆಯಾಜ್ಞೆ ನೀಡುವಂತೆ ದೂರು ನೀಡಿದವರು ಯಾರು, ಅವರ ಹೆಸರು ಬಹಿರಂಗ ಪಡಿಸಬೇಕು, ಕ್ಷುಲ್ಲಕ ಕಾರಣವನ್ನು ನೆಪವಾಗಿಸಿ ಗ್ರಾಮದಲ್ಲಿ ಸಾಮರಸ್ಯ ಕದಡಲು ಅಧಿಕಾರಿಗಳೇ ತಡೆಯಾಜ್ಞೆ ನೀಡಿ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಮುನಿರಾಜು ಮಾತನಾಡಿ, ಪುತ್ಥಳಿ ಸ್ಥಾಪನೆಗೆ ಎರಡು ವರ್ಷದಿಂದ ಯುವಕರು ಪರಿಶ್ರಮ ಪಟ್ಟಿದ್ದಾರೆ. ಸಮುದಾಯದ ಕುಟುಂಬ ಸದಸ್ಯರ ಮನೆಗಳಿಗೆ ತೆರಳಿ ಹಣ ಸಂಗ್ರಹಿಸಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ನಿರಾಕ್ಷೇಪಣ ಪತ್ರ ಪಡೆದು ಪೊಲೀಸ್ ಠಾಣೆಯಿಂದ ಅನುಮತಿ ಪಡೆದು ನ. 5 ರಂದು ಪುತ್ಥಳಿ ಪ್ರತಿಷ್ಠಾಪಿಸಲಾಯಿತು. ನ.6ರಂದು ಪುತ್ಥಳಿ ಅನಾವರಣಗೊಳ್ಳಬೇಕಿತ್ತು ಎಂದು ಘಟನೆ ಬಗ್ಗೆ ವಿವರಿಸಿದರು.

ಹಗಲು ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ರಾತ್ರಿ ವೇಳೆ ಎಂಬುದರಲ್ಲಿ ಹುರುಳಿಲ್ಲ. ಅನಾವರಣಕ್ಕೆ ಬಹಿರಂಗವಾಗಿ ಯಾರೂ ವಿರೋಧಿಸುತ್ತಿಲ್ಲ. ಮೌಖಿಕವಾಗಿ ಮತ್ತು ಅನಾಮಧೇಯ ವ್ಯಕ್ತಿಗಳು ಗ್ರಾಮಸ್ಥರ ಹೆಸರಿನಲ್ಲಿ ಲಿಖಿತವಾಗಿ ದೂರು ನೀಡಿದ್ದಾರೆ. ದೂರಿನನ್ವಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಒತ್ತಡಕ್ಕೆ ಮಣಿದು ಕಚೇರಿಯಲ್ಲೇ ಕುಳಿತು ತಡೆಯಾಜ್ಞೆ ಪ್ರತಿಯನ್ನು ಆಪ್ತರ ಮೂಲಕ ಕಳುಹಿಸಿರುವುದು ಆಕ್ಷೇಪಾರ್ಹ ಎಂದು ತಿಳಿಸಿದರು.

‘ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಆಯಾ ಸಮುದಾಯದ ಆದರ್ಶ ನಾಯಕರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅವುಗಳಿಗೆಲ್ಲ ಅಧಿಕಾರಿಗಳು ಅನುಮತಿ ನೀಡಿದ್ದಾರೆಯೇ, ಅವರಿಗಿಲ್ಲದ ಮಾನದಂಡ ನಮಗೇಕೆ ಯಾವುದೇ ಕಾರಣಕ್ಕೂ ಅನಾವರಣ ಕಾರ್ಯ ನಿಲ್ಲುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ, ವಾಲ್ಮೀಕಿ ಯುವಕ ಸಂಘ ರಾಜ್ಯ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ವಾಲ್ಮೀಕಿ ಸಂಘ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಖಜಾಂಚಿ ಚಂದ್ರಶೇಖರ್, ಮುಖಂಡರಾದ ದೊಡ್ಡಸೊಣ್ಣೆ ಮುನಿರಾಜು, ಮಾಚಪ್ಪ, ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT