ಶುಕ್ರವಾರ, ಡಿಸೆಂಬರ್ 6, 2019
21 °C

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ‘ಸಂವಿಧಾನವನ್ನು ಡಾ. ಬಿ.ಆರ್.ಅಂಬೇಡ್ಕರ್ ಒಬ್ಬರೆ ರಚಿಸಿಲ್ಲ ಎನ್ನುವ ಕೈಪಿಡಿ ಹೊರತಂದಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಕೂಡಲೆ ವೃತ್ತಿಯಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ದಲಿತ ಮುಖಂಡರು ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ‘ಸರ್ಕಾರದ ಗಮನಕ್ಕೂ ತಾರದೆ ಕೈಪಿಡಿ ರಚನೆ ಮಾಡಿರುವ ಬಗ್ಗೆ ಸರ್ಕಾರ ಕೂಡಲೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ‘ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯನ್ನು ಇಡೀ ಜಗತ್ತೆ ಸ್ಮರಿಸುತ್ತಿದೆ. ಸಂವಿಧಾನದಲ್ಲಿ ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು, ದಲಿತರು, ಕಾರ್ಮಿಕರು, ಹಿಂದುಳಿದವರೆಲ್ಲರಿಗೂ ರಕ್ಷಣೆ ಹಾಗೂ ಅನೇಕ ರಾಜಕೀಯ ಪ್ರಯೋಗಗಳಿಗೆ, ಸಾಮಾಜಿಕ ಬದಲಾವಣೆಗೆ, ಆರ್ಥಿಕ ಸುಧಾರಣೆಗೆ, ಶೈಕ್ಷಣಿಕ ಪ್ರಗತಿಗೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ, ಸಾಂಸ್ಕೃತಿಕ ಬೆಳವಣಿಗೆಗೆ ಮುಕ್ತ ಅವಕಾಶಗಳನ್ನು ಒದಗಿಸಲಾಗಿದೆ. ಇಂತಹ ಸಂವಿಧಾನ ಬರೆದವರು ಅಂಬೇಡ್ಕರ್ ಅಲ್ಲ ಎನ್ನುವ ಕೈಪಿಡಿ ತರುವುದು ಮೂರ್ಖತನ’ ಎಂದರು.

ದಲಿತ ಮುಖಂಡ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಜಗತ್ತೇ ಅಪ್ಪಿ, ಒಪ್ಪಿ, ಗೌರವಿಸುತ್ತಿರುವ ಸಂದರ್ಭದಲ್ಲಿ ದೇಶದ ಕೆಲವು ಕೋಮುವಾದಿ ವ್ಯಕ್ತಿಗಳು ಅಂಬೇಡ್ಕರ್ ಅವರನ್ನು ಮೀಸಲಾತಿಯ ಜನಕ, ದಲಿತ ನಾಯಕ ಎಂಬ ಹಣೆಪಟ್ಟಿ ಕಟ್ಟಲು ಚಿತಾವಣೆ ನಡೆಸುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ’ ಎಂದರು.

ಡಿಎಸ್ಎಸ್ ಸಂಚಾಲಕ ವೆಂಕಟೇಶ್, ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಎಸ್. ಕುಮಾರ್, ಮುಖಂಡರಾದ ನೀಲಸಂದ್ರ ಸಿದ್ದರಾಮು, ಕುಮಾರ್, ಜೈಕಾಂತ್, ಕೂಡ್ಲೂರು ಸಿದ್ದರಾಮು, ಕೋಟೆ ಶ್ರೀನಿವಾಸ್, ಬಿ.ಎಸ್.ಪಿ. ಶಿವರಾಂ, ಅಬ್ಬೂರು ಮಹೇಶ್, ಅಬ್ಬೂರು ಚಂದ್ರನಾಥ್, ಸಿದ್ದರಾಜು, ನಾರಾಯಣಸ್ವಾಮಿ, ಶ್ರೀನಿವಾಸ್, ಶಿವಕುಮಾರ್, ಕಿರಣ್, ಭರತ್, ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಉಮಾಶಂಕರ್, ರಾಜ್ಯ ಉಪಾಧ್ಯಕ್ಷ ಶ್ರೀಧರ್, ರಾಜ್ಯ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ರಂಜಿತ್ ಗೌಡ ಇದ್ದರು.

ಪ್ರತಿಕ್ರಿಯಿಸಿ (+)