ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ವಕೀಲರ ಹತ್ಯೆ ಪ್ರಕರಣ: ರಕ್ಷಣೆಗೆ ಒತ್ತಾಯ

Last Updated 2 ನವೆಂಬರ್ 2018, 13:23 IST
ಅಕ್ಷರ ಗಾತ್ರ

ದೇವನಹಳ್ಳಿ: ವಕೀಲರೊಬ್ಬರ ಬರ್ಬರ ಹತ್ಯೆ ಖಂಡಿಸಿ ತಾಲ್ಲೂಕಿನ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ವಕೀಲರು ದಿನದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

ತಾಲ್ಲೂಕು ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಮಾತನಾಡಿ, ಅ.31 ರಂದು ವಕೀಲ ಬಂಡಿವಡ್ಡರ ಅವರು ಸಿಂಧಗಿ ತಾಲ್ಲೂಕು ನ್ಯಾಯಾಲಯದ ಕಲಾಪ ಮುಗಿಸಿಕೊಂಡು ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದ ಸಮಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸರ್ಕಾರ ವಕೀಲರಿಗೆ ರಕ್ಷಣೆ ನೀಡಬೇಕು. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದನ್ನು ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಭೈರೇಗೌಡ ಮಾತನಾಡಿ, ವಕೀಲರ ಹತ್ಯೆ ದಿನನಿತ್ಯದ ಪ್ರಕಿಯೆ ಎಂಬಂತಾಗಿದೆ. ಒಬ್ಬ ವಕೀಲ ವಕಾಲತ್ತು ವಹಿಸಬಾರದು ಎಂದು ಬೆದರಿಕೆ ಹಾಕಿ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸದರೆ ಹೇಗೆ. ಸಾಮಾನ್ಯ ಕಕ್ಷಿದಾರರ ಪಾಡೇನು ಎಂದು ಪ್ರಶ್ನಿಸಿದರು. ನ್ಯಾಯಾಲಯಗಳ ಆವರಣದಲ್ಲಿ ಭೀತಿ ಹುಟ್ಟಿಸಿ ವಕೀಲರ ಅತ್ಮಸ್ಥೈರ್ಯ ಕುಂದಿಸುವ ಕೆಟ್ಟ ಪರಂಪರೆಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಹರೀಶ್ ಮಾತನಾಡಿ, ಆನೇಕ ವರ್ಷಗಳಿಂದ ವಕೀಲರ ರಕ್ಷಣಾ ಕಾಯ್ದೆ ಜಾರಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುತ್ತಿದೆ. ರಾಜ್ಯ ವಕೀಲರ ಪರಿಷತ್‌ ಈಗಾಗಲೇ ಕಾನೂನು ಸಚಿವರೊಂದಿಗೆ ಸಭೆ ನಡೆಸಿದೆ. ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದರು.

ವಕೀಲರಾದ ಶ್ರೀನಿವಾಸಮೂರ್ತಿ ಮತ್ತು ವೆಂಕಟಗಿರಿಯಪ್ಪ ಮಾತನಾಡಿ, ಪ್ರತಿಭಾವಂತ ವಕೀಲರು ವೈಯಕ್ತಿಕ ಹಿತಾಸಕ್ತಿಗಾಗಿ ವಕಾಲತ್ತು ವಹಿಸುವುದಿಲ್ಲ. ವಕೀಲರಿಗೆ ಕಕ್ಷಿದಾರರ ಹಿತಮುಖ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಹತ್ಯೆ ಪ್ರಕರಣದ ಗಂಭೀರತೆ ಅರಿತು ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಬೇಕೆಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT