ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ಬಳಿ ಹೋರಾಟ: ಜನತೆಗೆ ಅಗೌರವ

ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ಧ ಬಿಜೆಪಿ ಆರೋಪ
Last Updated 14 ನವೆಂಬರ್ 2022, 5:02 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ನೆಪದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಶನಿವಾರ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಯ ಮುಂದೆ ಮಾಡಿದ ಹೋರಾಟ ಅಕ್ಷಮ್ಯವಾಗಿದ್ದು, ಇದು ಅವರು ಕ್ಷೇತ್ರದ ಜನತೆಗೆ ಮಾಡಿದ ಅಪಮಾನ’ ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರಗತಿಯ ಪ್ರತಿಮೆ ಪ್ರಧಾನಿಗಳಿಂದ ಅನಾವರಣಗೊಂಡಿರುವುದು ದೇಶವೇ ಸಂತಸ ಪಡುವ ವಿಚಾರ. ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಬೇಕಿತ್ತು. ಅದನ್ನು ಬಿಟ್ಟು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುವುದು ಜನರ ಮನೋಭಾವನೆಗೆ ಧಕ್ಕೆ ತರುವಂತಹ ಕೃತ್ಯ’ ಎಂದು ಟೀಕಿಸಿದರು.

ವಿಧಾನಸಭೆಯ ಮಾತು ಮಾಧ್ಯಮಗಳ ಮುಂದೆ ಏಕೆ?:ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತದಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದ್ದಲ್ಲಿ ವಿಧಾನಸಭೆಯಲ್ಲಿ ಹಕ್ಕುಚ್ಯುತಿಗೆ ಅವಕಾಶವಿತ್ತು. ಅದನ್ನು ಬಿಟ್ಟು ಮಾಧ್ಯಮದವರ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆಯೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ. ನಾನು ಶಾಸಕನಾಗಿದ್ದಾಗ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ ವಹಿಸಿದ್ದೇನೆ. ಪಕ್ಷಾತೀತವಾಗಿ ವರ್ತಿಸುವುದರ ಫಲವಾಗಿ ಅಭಿವೃದ್ಧಿಯಾಗಿದೆ ಎಂದರು.

ತಾಲ್ಲೂಕಿನ ಜನತೆಗೆ ಅಗೌರವ: ಕಾರ್ಯಕ್ರಮದಲ್ಲಿ ಭಾಗಿಯಾಗದೆ ಸೂಕ್ತ ಗೌರವ ಸಿಕಿಲ್ಲ ಎಂದು ಆರೋಪ ಮಾಡುವುದರ ಜೊತೆಗೆ, ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ವಿರೋಧ
ವ್ಯಕ್ತಪಡಿಸಿರುವುದು ಇಡೀ ತಾಲ್ಲೂಕಿನ ಜನತೆಗೆ ಅಗೌರವವಾಗಿದೆ. ವಿಮಾನ ನಿಲ್ದಾಣ, ಕೈಗಾರಿಕಾ ಪ್ರದೇಶ ವಿಸ್ತರಣೆ ಕಾರ್ಯಕ್ರಮದಲ್ಲಿ ನನಗೂ ಆಹ್ವಾನವಿರಲಿಲ್ಲ ಆದರೂ, ಅಭಿವೃದ್ಧಿಯ ಮನೋಭೂಮಿಕೆಯಲ್ಲಿ ಭಾಗವಹಿಸಿದ್ದೆ ಎಂ.ದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ಎನ್‌ ನಾರಾಯಣಸ್ವಾಮಿ ಮಾತನಾಡಿ, ಪಕ್ಷಾತೀತವಾಗಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಜನತೆ ಭಾಗವಹಿಸಿದ್ದಾರೆ. ಸರ್ಕಾರದ ವತಿಯಿಂದ ಶಿಷ್ಟಾಚಾರ ಪಾಲನೆಯಾಗಿದೆ. ಪ್ರಧಾನಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳದ್ದೇ ಅಧ್ಯಕ್ಷತೆ ಇರುತ್ತದೆ. ಕಾರ್ಯಕ್ರಮಕ್ಕೆ ಶಾಸಕರು ಗೈರಾಗಿರುವುದು ಅವರು ಕೆಂಪೇಗೌಡರಿಗೆ ಮಾಡಿದ ಅವಮಾನ. ಒಕ್ಕಲಿಗ ಸಮುದಾಯಕ್ಕೆ ತೋರಿದ ಅಗೌರವ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ದೇವೇಗೌಡರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಜೆಡಿಎಸ್‌ ಮಾಡುತ್ತಿದ್ದು, ರಾಜಕೀಯದ ಆಟಕ್ಕೆ ಮಹನೀಯರನ್ನು ಬಳಸಿಕೊಂಡಿದ್ದಾರೆ ಎಂದರು.

ಬೈಯಪ್ಪ ಮಾಜಿ ಅಧ್ಯಕ್ಷ ಅಶ್ವತ್ ನಾರಾಯಣ್, ರಾಜ್ಯ ಮಾಧ್ಯಮ ಪ್ರಕೋಷ್ಠದ ನಾಗೇಶ್, ದೇಸು ನಾಗರಾಜ್, ರಮೇಶ್, ಆನಂದ್, ಮಂಜುನಾಥ್, ಸಂದೀಪ್ ಇದ್ದರು.

ಇದೇ ಸಮಯದಲ್ಲಿ ಪಟ್ಟಣದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಅವರನ್ನು ಪತ್ರಕರ್ತರು ಭೇಟಿಯಾಗಲು ಯತ್ನಿಸಿದರು. ಈ ವೇಳೆ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎಂದರು.

ಮಾಧ್ಯಮ ಪ್ರಶ್ನೆಗೆ ಮುಖಂಡರು ತಬ್ಬಿಬ್ಬು

ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ಮುಖಂಡರು ತಬ್ಬಿಬ್ಬಾದ ಪ್ರಸಂಗವೂ ನಡೆಯಿತು.

ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಹೆಸರು ಯಾಕಿಲ್ಲ? ಪ್ರಗತಿ ಪ್ರತಿಮೆಯ ಶಿಲಾನ್ಯಾಸದ ಫಲಕದಲ್ಲಿ ಅಧ್ಯಕ್ಷರ ಜಾಗದಲ್ಲಿ ಮುಖ್ಯಮಂತ್ರಿಗಳ ಘನ ಉಪಸ್ಥಿತಿ ಎಂದು ಏಕಿದೆ? ದಲಿತ ಶಾಸಕರು ಕಾರ್ಯಕ್ರಮಕ್ಕೆ ಹಾಜರಾದರೆ ಮೈಲಿಗೆಯಾಗುತ್ತದೆ ಎಂದು ಬಿಜೆಪಿ ಈ ರೀತಿ ಮಾಡಿದೆಯೇ? ಮೃತ್ತಿಕೆ ಸಂಗ್ರಹ ಅಭಿಯಾನದಲ್ಲಿ ಸಮುದಾಯ ನಾಯಕರ
ಭಾವಚಿತ್ರದಲ್ಲಿ ತಾರತಮ್ಯ ಯಾಕೆ? ಕೆಂಪೇಗೌಡರು ಒಕ್ಕಲಿಗರ ನಾಯಕರಾ ಅಥವಾ ಜಾತ್ಯತೀತ ದೊರೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಖಂಡರು ಗೊತ್ತಿಲ್ಲ ಎಂದು ಅರ್ಧಕ್ಕೆ ಸುದ್ದಿಗೋಷ್ಠಿಯನ್ನು ಮುಕ್ತಾಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT