ಮಂಗಳವಾರ, ಅಕ್ಟೋಬರ್ 20, 2020
23 °C

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಅರ್ಹರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಪ್ರಜಾ ವಿಮೋಚನಾ ಬಹುಜನ ಸಮಿತಿಯ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪಿವಿಬಿಎಸ್ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ಬಡವರ ಮತ್ತು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ರಾಜಕೀಯ ಮುಖಂಡರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿ ಇರುವುದಿಲ್ಲ. ಅವರು ಯಾವಾಗ ಕಚೇರಿಗೆ ಬರುತ್ತಾರೆ, ಯಾವಾಗ ಮನೆಗೆ ತೆರಳುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ ಎಂದು ದೂರಿದರು.

ಸರ್ಕಾರಿ ಗೋಮಾಳ, ಗುಂಡು ತೋಪು, ಕೆರೆ ಅಂಗಳ, ಸ್ಮಶಾನ ಮತ್ತು ರಾಜಕಾಲುವೆಗಳ ಒತ್ತುವರಿ ನಡೆದಿದೆ. ಆದರೆ, ಅಧಿಕಾರಿಗಳು ದಿವ್ಯ ನಿರ್ಲಕ್ಯ ತಳೆದಿದ್ದಾರೆ. ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 73ರಲ್ಲಿ 3.02 ಎಕರೆ ಸರ್ಕಾರಿ ಜಾಗದ ಒತ್ತುವರಿಯಾಗಿದೆ. ಆದರೂ, ತ‍ಪ್ಪಿತಸ್ಥರು ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಎರಡು ದಶಕಗಳಿಂದಲೂ ವಿವಿಧ ಪಕ್ಷಗಳಿಂದ ನಾಲ್ಕು ಬಾರಿ ಆಯ್ಕೆಯಾಗಿ ತಮ್ಮ ಅವಧಿ ಪೂರೈಸಿರುವ ಶಾಸಕರು ಒಂದೂ ನಿವೇಶನದ ಹಕ್ಕುಪತ್ರ ನೀಡಿಲ್ಲ. ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳು ಜಾತಿ, ಮತ ಧಿಕ್ಕರಿಸಿ ಸಂಘಟಿತರಾಗಬೇಕು ಎಂದು ಕೋರಿದರು.

ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಚಿನ್ನಗರಾಯಪ್ಪ, ಕಾರ್ಯದರ್ಶಿ ಸುರೇಶ್, ಕಾರ್ಯಾಧ‍್ಯಕ್ಷ ಮುನಿಕೃಷ್ಣಯ್ಯ, ವಿಭಾಗೀಯ ಅಧ‍್ಯಕ್ಷ ರಾಮಮೂರ್ತಿ, ಜಿಲ್ಲಾ ಅಧ್ಯಕ್ಷ ಮುನಿರಾಜು, ತಾಲ್ಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಉಪಾಧ್ಯಕ್ಷ ಶಿವಾನಂದ್, ಯುವ ಘಟಕದ ಅಧ್ಯಕ್ಷ ಸಂತೋಷ್, ಸಂಘಟನಾ ಕಾರ್ಯದರ್ಶಿ ನಿಲೇರಿ ನಾಗರಾಜ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.