ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಧರಣಿಗೆ ದೇವೇಗೌಡರ ಬೆಂಬಲ

Last Updated 4 ಡಿಸೆಂಬರ್ 2021, 2:32 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕವನ್ನು ಬಂದ್‌ ಮಾಡುವಂತೆ ಸ್ಥಳೀಯ ಗ್ರಾಮಸ್ಥರು ನಡೆಸುತ್ತಿರುವ ಧರಣಿಗೆ ಮಾಜಿ ಪ್ರಧಾನಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸೇರಿದಂತೆ ಹಲವಾರು ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದ್ದು ಧರಣಿ ನಿರತರ ಆತ್ಮವಿಶ್ವಾಸ ಹೆಚ್ಚಿಸಿದೆ.

ಕಸ ವಿಲೇವಾರಿ ಘಟಕವನ್ನು ಮುಚ್ಚುವಂತೆ ನಡೆಯುತ್ತಿರುವ ಧರಣಿಗೆ ಶುಕ್ರವಾರ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಹಾಗೂ ನೆಲಮಂಗಲ ಸೋಂಪುರ ಹೋಬಳಿಯ ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಿದ್ದರು.

ದೂರವಾಣಿಯಲ್ಲಿ ಮಾತನಾಡಿರುವ ದೇವೇಗೌಡರು ‘ಇಲ್ಲಿನ ಎಲ್ಲಾ ಮಾಹಿತಿಯನ್ನು ತಿಳಿದಿದ್ದು ವಿಧಾನ ಪರಿಷತ್‌ ಚುನಾವಣೆಯ ನಂತರ ಜೆಡಿಎಸ್‌ ಪಕ್ಷದ ಮುಖಂಡರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿರುವುದಾಗಿ ಧರಣಿಯ ನೇತೃತ್ವ ವಹಿಸಿರುವ ನವ ಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್‌, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ ತಿಳಿಸಿದರು.

ಲಾರಿ ವಶಕ್ಕೆ: ಕುಣಿಗಲ್ ಮೂಲದ ಖಾಸಗಿ ಕಂಪನಿಗೆ ಸೇರಿದ ಕೈಗಾರಿಕಾ ತ್ಯಾಜ್ಯದ ನೀರನ್ನು ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ತಂದು ಸುರಿಯಲು ಬಂದಿದ್ದ ವಾಹನವನ್ನು ಪ್ರತಿಭಟನಾಕಾರರು ತಡೆದು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲು ಮಾಡಿಸಿದ್ದಾರೆ.

ನೆಲಮಂಗಲದ ತಾಲ್ಲೂಕು ಬಿಜೆಪಿ ಮುಖಂಡ ಜಗದೀಶ್‌ಚೌಧರಿ ಮಾತನಾಡಿ, ರೈತರ ಪರ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ಮಾತ್ರ ಕಸದಿಂದ ವಿಷವನ್ನು ಬಿಟ್ಟು ರೈತರ ಬದುಕನ್ನು ಹಾಳು ಮಾಡಲಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ 20 ವರ್ಷಗಳಲ್ಲಿ ಇಲ್ಲಿ ಜನರೇ ವಾಸಿಸದ ಪ್ರದೇಶವಾಗಿ ಮಾರ್ಪಡುತ್ತದೆ ಎಂದು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ವಕೀಲ ಜಗದೀಶ್ ಮಾತನಾಡಿ, ಇಲ್ಲಿನ ಪ್ರದೇಶ ಎರಡು ದಶಕಗಳು ಕಳೆದರು ಸರಿಹೋಗದಷ್ಟು ಹಾಳಾಗಿದೆ. ಕಾಲುವೆ, ಕುಂಟೆಗಳಲ್ಲಿನ ನೀರು ಯಾವ ಜಾನುವಾರುಗಳು ಕುಡಿಯಲು ಯೋಗ್ಯವಾಗಿಲ್ಲ. ರೈತರಿಗೂ ಇಲ್ಲಿನ ನೀರಿನಿಂದ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವಾಗಿ ಬಿಬಿಎಂಪಿ ಕಸದ ಘಟಕವನ್ನು ಮುಚ್ಚಲೇಬೇಕು ಎಂದು ಆಗ್ರಹಿಸಿದರು.

ಎರಡನೇ ಬಾರಿಗೆ ಪರಿಶೀಲನೆ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯವರು ಯಾವುದೇ ರೀತಿಯ ಪರಿಶೀಲನೆಯನ್ನು ನಡೆಸದೇ 2026ರವರೆಗೂ ಕಸ ವಿಲೇವಾರಿ ಘಟಕ ನಡೆಸಲು ಪರವಾನಗಿ ನವೀಕರಿಸಿ ನೀಡಿದ್ದರು. ಆದರೆ ಗ್ರಾಮಸ್ಥರ ಧರಣಿ ನಂತರ ಕಸ ವಿಲೇವಾರಿ ಘಟಕಕ್ಕೆ ಎರಡು ಬಾರಿ ಭೇಟಿ ನೀಡಿ ಇಲ್ಲಿನ ವಾಸ್ತವ ವರದಿಯನ್ನು ಸಂಗ್ರಹ ಮಾಡಿದ್ದಾರೆ.

ಬೆಂಗಳೂರು ಉತ್ತರ ವಲಯ ಹಿರಿಯ ಪರಿಸರ ಅಧಿಕಾರಿ ಸಿದ್ದರಾಮಯ್ಯ, ಪ್ರಾದೇಶಿಕ ಪರಿಸರ ಅಧಿಕಾರಿ ಸುನಿತಾ ಅವರು ಕಸ ವಿಲೇವಾರಿ ಘಟಕದ ಸುತ್ತಲಿನ ಕಲುಷಿತ ನೀರಿನ ಮಾದರಿ ಸಂಗ್ರಹ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT