ಬುಧವಾರ, ಆಗಸ್ಟ್ 21, 2019
22 °C

‘ಮದ್ಯಪಾನ ತ್ಯಜಿಸಿ ಸುಖಕರ ಜೀವನ ನಡೆಸಿ’

Published:
Updated:
Prajavani

ವಿಜಯಪುರ: ಮದ್ಯಪಾನ ಹವ್ಯಾಸ ಇದ್ದರೆ ಅದು ಚಟವಾಗಿ ಬೆಳೆಯುತ್ತದೆ. ಇದರಿಂದಾಗಿ ಮನುಷ್ಯ ತನ್ನ ನಿಯಂತ್ರಣ ಕಳೆದುಕೊಂಡು ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿಕೊಳ್ಳುತ್ತಾನೆ ಎಂದು ಗೌರಿಬಿದನೂರಿನ ಜನಜಾಗೃತಿ ಬೀದಿ ನಾಟಕ ತಂಡದ ನಾಯಕ ವೈ.ಟಿ.ಪ್ರಸನ್ನ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನೇತೃತ್ವದಲ್ಲಿ ನಡೆದ ‘ಮದ್ಯಪಾನ ವಿರುದ್ಧ  ಜಾಗೃತಿ ಬೀದಿ ನಾಟಕ’ದಲ್ಲಿ ಅವರು ಮಾತನಾಡಿದರು.

ಮದ್ಯಪಾನ ದೇಹದ ಪ್ರತಿಯೊಂದು ಅಂಗಕ್ಕೂ ಹಾನಿ ಮಾಡುತ್ತದೆ. ಇದರಲ್ಲಿನ ವಿಷಕಾರಿ ಅಂಶ ನರಮಂಡಲದ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಸಂಸಾರದ ನೆಮ್ಮದಿ ಹಾಳಾಗಲಿದ್ದು, ಹಣ ವ್ಯರ್ಥವಾಗಲಿದೆ. ಮದ್ಯಪಾನ, ಬೀಡಿ-ಸಿಗರೇಟು, ಗುಟ್ಕಾ, ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಂದ ಪ್ರತಿಯೊಬ್ಬರೂ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಕಲಾವಿದ ಕಿರಣ್ ಮಾತನಾಡಿ, ವಿಶ್ವದಲ್ಲಿನ ಎಲ್ಲ ಧರ್ಮಗಳು ಮದ್ಯಪಾನ ನಿಷೇಧಿಸಿವೆ. ವೇದಗಳು ಸುರಾಪಾನ ಮಹಾಪಾಪವೆಂದು ಹೇಳಿ, ಅದನ್ನು ಸಂಪೂರ್ಣ ನಿಷೇಧಿಸಿವೆ. ಮದ್ಯಪಾನ ತ್ಯಜಿಸಿ ಸುಖಕರವಾದ ಜೀವನ ನಡೆಸಲು ಸಲಹೆ ನೀಡಿದರು.

ಕಲಾವಿದರಾದ ಸೊರಪ್ಪಲ್ಲಿ ಚಂದ್ರಶೇಖರ್, ಷಣ್ಮುಖ, ಲೀಲಾವತಿ, ಶಿವಾನಂದ, ಶ್ರೀಕಾಂತ್ ಇದ್ದರು.

Post Comments (+)