ರಾಗಿ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

7
ದೊಡ್ಡಬಳ್ಳಾಪುರ: ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

ರಾಗಿ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

Published:
Updated:
Deccan Herald

ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ, ಮುಸುಕಿನ ಜೋಳ ಖರೀದಿ ಕೇಂದ್ರ ತೆರೆಯದೆ ಇರುವ ಸರ್ಕಾರದ ಕ್ರಮ ಖಂಡಿಸಿ ಡಿ.8ರಂದು ತಾಲ್ಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಪ್ರಸನ್ನ ಹೇಳಿದರು.

ಅವರು ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 15 ದಿನಗಳ ಹಿಂದೆ ಖರೀದಿ ಕೇಂದ್ರ ತೆರೆಯುವಂತೆ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಒಂದು ವಾರದೊಳಗೆ ಖರೀದಿ ಕೇಂದ್ರವನ್ನು ಎಪಿಎಂಸಿ ಆವರಣದಲ್ಲಿ ತೆರೆಯುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ತೀವ್ರ ಬರಗಾಲದಿಂದ ರೈತರು ಬಸವಳಿದಿದ್ದಾರೆ. ಜೋಳ, ರಾಗಿಯನ್ನು ಹಣದ ತುರ್ತಿನಿಂದ ಈಗಾಗಲೇ ಅರ್ಧ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡಿಕೊಂಡಿದ್ದಾರೆ. ಸರ್ಕಾರ ತುರ್ತಾಗಿ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು.

ರಾಜಾನುಕುಂಟೆ ಸಮೀಪದ ನಂದಿನಿ ಪಶು ಆಹಾರ ತಯಾರಿಕಾ ಘಟಕಕ್ಕೆ ರೈತರೇ ನೇರವಾಗಿ ಜೋಳ ಸರಬರಾಜು ಮಾಡುವಂತೆ ಹೇಳಲಾಗುತ್ತಿದೆ. ಆದರೆ, 5ರಿಂದ 10ಚೀಲ ಜೋಳ ಬೆಳೆಯವ ರೈತರು ಹೇಗೆ ಅಲ್ಲಿಯವರೆಗೂ ತೆಗೆದುಕೊಂಡು ಹೋಗಲು ಸಾಧ್ಯ ಎಂದು ಪ್ರಶ್ನಿಸಿದರು.

ಎಪಿಎಂಸಿ ಯಾರ್ಡ್‌ನಲ್ಲಿಯೇ ಖರೀದಿ ಕೇಂದ್ರ ತೆರೆದು ಸಣ್ಣ ಹಿಡುವಳಿದಾರ ರೈತರಿಂದ ಜೋಳ, ರಾಗಿ ಖರೀದಿಸಬೇಕು ಎಂದು ಒತ್ತಾಯಿಸಿದರು.

ರೈತರ ಬೆಳೆ ಸಾಲಮನ್ನಾ ವಿಚಾರ ಹಲವು ಗೊಂದಲಗಳಿಂದ ಕೂಡಿದೆ. ಸರ್ಕಾರಿ ಕಚೇರಿಯಲ್ಲಿ ರೈತರ ಕೆಲಸಗಳೇ ಆಗದಂತಹ ಸ್ಥಿತಿ ಇರುವಾಗ ವಾರದಲ್ಲಿ ಐದು ದಿನ ಮಾತ್ರ ಕೆಲಸ ಎನ್ನುವ ನಿಯಮ ಕೈಬಿಟ್ಟು, ವಾರದ ಆರು ದಿನವೂ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಬೇಕು. ಹಗಲಿನ ವೇಳೆಯಲ್ಲಿ 7ಗಂಟೆ ಕಾಲ ಕೃಷಿಗೆ ನಿರಂತರ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿದರು.

ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆರ್.ಎಸ್.ಸತೀಶ್ ಮಾತನಾಡಿ, ಬರದಿಂದಾಗಿ ಮೇವಿನ ಕೊರತೆ ಉಂಟಾಗಿದೆ. ಇಂತಹ ಸ್ಥಿತಿಯಲ್ಲಿ ರೈತರು ಡೇರಿಗಳಿಗೆ ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ ₹ 10 ಪ್ರೋತ್ಸಾಹ ಧನ ನೀಡಬೇಕು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಪರಿಷ್ಕರಣೆಯಂತೆ ಹಾಲಿನ ಬೆಲೆಯನ್ನು ಕನಿಷ್ಠ ಮೂರು ತಿಂಗಳಿಗೆ ಒಮ್ಮೆಯಾದರೂ ಪರಿಷ್ಕರಣೆ ಮಾಡಬೇಕು ಎಂದರು

ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಶಿವರಾಜ್, ಜಿಂಕೆಬಚ್ಚಹಳ್ಳಿ ಸತೀಶ್, ಮುಖಂಡರಾದ ಉಮಾದೇವಿ, ಮಹದೇವ್, ಬೈರೇಗೌಡ, ಮುನಿನಾರಾಯಣಪ್ಪ, ವಾಸು, ಹರೀಶ್, ಕಾಡನೂರು ಮೂರ್ತಿ, ಮರಿಯಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !