ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿ ಕೇಂದ್ರ: ಅವ್ಯವಸ್ಥೆ ಆಗರ

ದಿನಾಂಕ ಬದಲಾವಣೆಯಿಂದ ಗೊಂದ--ಲ: ಸಾಲುಗಟ್ಟಿ ನಿಂತ ರಾಗಿ ಚೀಲ ತುಂಬಿದ ಟ್ರ್ಯಾಕ್ಟರ್‌ಗಳು
Last Updated 8 ಫೆಬ್ರುವರಿ 2023, 5:58 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದೆ, ರೈತರು ಪರದಾಡುವಂತಾಗಿದೆ.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಸಮಯದಲ್ಲಿ ನೀಡಲಾಗಿದ್ದ ದಿನಾಂಕಕ್ಕೆ ಅನುಸಾರ ರಾಗಿ ಖರೀದಿ ನಡೆಯದೇ ಇರುವುದು ಹಾಗೂ ಸೂಕ್ತ ಸಮಯಕ್ಕೆ ಟ್ರ್ಯಾಕ್ಟರ್‌ಗಳಿಂದ ರಾಗಿಯನ್ನು ಗೋದಾಮಿಗೆ ಹಾಕಲು ಕಾರ್ಮಿಕರನ್ನು ನೇಮಕಮಾಡಿಕೊಳ್ಳದೇ ಇರುವುದು, ರೈತರು ತರುವ ಚೀಲಗಳಿಂದ ರಾಗಿಯನ್ನು ಮತ್ತೆ ಬೇರೆ ಚೀಲಕ್ಕೆ ಬದಲಾಯಿಸುವುದು ಅಧಿಕಾರಿಗಳ ಈ ಎಲ್ಲಾ ತಪ್ಪುಗಳಿಂದ ರೈತರು ಖರೀದಿ ಕೇಂದ್ರದ ಬಳಿ ರಾತ್ರಿ ಹಗಲೆನ್ನದೆ ವನವಾಸ ಪಡುವಂತಹ ದುಃಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 9 ಕಿ.ಮೀ ದೂರದ ಗುಂಡಮಗೆರೆ ಕ್ರಾಸ್‌ನ ಬಳಿ ಆಹಾರ ನಿಗಮದಿಂದ ನಿರ್ಮಿಸಲಾಗಿರುವ ಗೋದಾಮಿನಲ್ಲಿ ರಾಗಿ ದಾಸ್ತಾನು ಮಾಡಲಾಗುತ್ತಿದೆ. ಗೋದಾಮು ಇರುವ ಸಮೀಪ ಯಾವುದೇ ಹೋಟೆಲ್‌, ಕುಡಿಯುವ ನೀರಿನ ಸೌಲಭ್ಯ ಇಲ್ಲ. ಕಾಡಿನಂಹ ಪ್ರದೇಶದಲ್ಲಿನ ಗೋದಾಮಿಗೆ ಟ್ರ್ಯಾಕ್ಟರ್‌ಗಳಲ್ಲಿ ರಾಗಿ ಚೀಲಗಳನ್ನು ತುಂಬಿಕೊಂಡು ಬರುವ ರೈತರು ಕನಿಷ್ಠ 3 ರಿಂದ 4 ದಿನಗಳ ಕಾಲ ಸರದಿ ಸಾಲಿನಲ್ಲಿ ಕಾದು
ನಿಲ್ಲಬೇಕಾಗಿದೆ.

ಅಧಿಕಾರಿಗಳು ಈ ಹಿಂದೆ ನೀಡಿದ್ದ ದಿನಾಂಕವನ್ನು ಎರಡು ದಿನಗಳಿಗೆ ಒಮ್ಮೆ ಬದಲಾಯಿಸುತ್ತಲೇ ಇದ್ದಾರೆ. ಆದರೆ ದಿನಾಂಕ ಬದಲಾವಣೆ ಮಾಡಿರುವ ಬಗ್ಗೆ ಮಾತ್ರ ರೈತರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ರೈತರು ನೋಂದಣಿ ಸಂದರ್ಭದಲ್ಲಿ ನೀಡಲಾಗಿದ್ದ ದಿನಾಂಕದಂತೆಯೇ ಖರೀದಿ ಕೇಂದ್ರಕ್ಕೆ ಟ್ರ್ಯಾಕ್ಟರ್‌ಗಳಲ್ಲಿ ರಾಗಿ ತುಂಬಿಕೊಂಡು
ಬರುತ್ತಿದ್ದಾರೆ.

ಈ ಹಿಂದೆ ನೀಡಿರುವ ದಿನಾಂಕದಂತೆ ಬರುವುದೊ ಅಥವಾ ಹೊಸದಾಗಿ ನೀಡುತ್ತಿರುವ ದಿನಾಂಕದಂದು ಬರಬೇಕೋ
ಎನ್ನುವ ಗೊಂದಲವೇ ಖರೀದಿ ಕೇಂದ್ರದ ಮುಂದೆ ರಾಗಿ ಚೀಲ ತುಂಬಿರುವ ಟ್ರ್ಯಾಕ್ಟರ್‌ಗಳು ಕಿಲೋಮೀಟರ್‌ ಗಟ್ಟಲೆ ಸಾಲುಗಟ್ಟು ನಿಲ್ಲುವಂತಾಗಿದೆ ಎಂದು ರೈತರು ದೂರಿದ್ದಾರೆ.

ರಾತ್ರಿ–ಹಗಲು ವನವಾಸ

ರಾಗಿ ಬೆಳೆದು ಇಲ್ಲಿಗೆ ತಂದು ರಾತ್ರಿ ಹಗಲೆನ್ನದೆ ವನವಾಸ ಪಡುವುದಕ್ಕಿಂತಲು ಜಮೀನು ಪಾಳುಬಿಟ್ಟು ಕೂಲಿ ಮಾಡುವುದೇ ಲೇಸು ಅನ್ನುವಷ್ಟು ಬೇಸರವಾಗಿದೆ. ಮುಂದಿನ ವರ್ಷ ನಮ್ಮ ಮನೆಗೆ ಸಾಕಾಗುಷ್ಟು ರಾಗಿ ಬೆಳೆದುಕೊಂಡರೆ ಸಾಕು ಎನ್ನುವಷ್ಟು ಸಾಕಾಗಿ ಹೋಗಿದೆ ಎಂದು ಮರಳೇನಹಳ್ಳಿಯ ಬೈಯ್ಯಣ್ಣ ತಿಳಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ

‘ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಅಸಮರ್ಪಕ ವ್ಯವಸ್ಥೆಯಿಂದ ರೈತರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಿಲ್ಲ. ಖರೀದಿ ಕೇಂದ್ರ ಬಳಿ ರೈತರಿಗೆ ಯಾವುದೇ ರೀತಿಯ ಮೂಲ ಸೌಕರ್ಯ ಇಲ್ಲ. ಹೆಚ್ಚುವರಿ ಕಾರ್ಮಿಕರ ನೇಮಕ ಮಾಡಿಕೊಳ್ಳುವಂತೆ ಹೇಳುತ್ತಲೇ ಇದ್ದರು ಅಧಿಕಾರಿಗಳು ಕ್ರಮ ಕೈಗೊಳ್ಳದೆ, ನಿರ್ಲಕ್ಷ್ಯವಹಿಸಿದ್ದಾರೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT