ಬುಧವಾರ, ಅಕ್ಟೋಬರ್ 16, 2019
21 °C
ಮಳೆಗೆ ಜನಜೀವನ ಅಸ್ತವ್ಯಸ್ತ

ದೇವನಹಳ್ಳಿ, ವಿಜಯಪುರ ಸುತ್ತ ಮಳೆ ಸೃಷ್ಟಿಸಿದ ಅವಾಂತರ: ಪರದಾಟ

Published:
Updated:
Prajavani

ದೇವನಹಳ್ಳಿ: ನಗರದಲ್ಲಿ ಸೋಮವಾರ ಮುಂಜಾನೆ ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಸೂಲಿಬೆಲೆ ರಸ್ತೆ ಕೆರೆಯಂತಾಗಿ ಸಂಚಾರ ಸ್ಥಗಿತಗೊಂಡಿತ್ತು.

ಬೈಪಾಸ್ ರಸ್ತೆಯಿಂದ ದೇವನಹಳ್ಳಿ ನಗರಕ್ಕೆ ಪ್ರವೇಶ ಕಲ್ಪಿಸುವ ಕೆಂಪೇಗೌಡ ವೃತ್ತದ ತಗ್ಗು ಪ್ರದೇಶದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ದ್ವಿಚಕ್ರವಾಹನ ಸವಾರರು ‍ಪರದಾಡಿದರು. ಅವೈಜ್ಞಾನಿಕ ಚರಂಡಿ ನಿರ್ಮಾಣ ಹಾಗೂ ರಾಜಕಾಲುವೆಗಳ ಒತ್ತುವರಿ ಸಮಸ್ಯೆಯಿಂದ ಈ ನಿ‌ರ್ಮಾಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಸರ್ಕಾರಿ ಕಿರಿಯ ಕಾಲೇಜು ಮೈದಾನದ ಕಡೆಯಿಂದ ಹರಿದುಬಂದ ಅಪಾರ ಪ್ರಮಾಣದ ಮಳೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಪುರಸಭೆ ಮುಂಭಾಗದ ಮೈದಾನಕ್ಕೆ ಹರಿದು, ಕೆರೆಯಂತಾಗಿತ್ತು. ವಿಜಯಪುರ ಕ್ರಾಸ್‌ನ ತಗ್ಗು ಪ್ರದೇಶದಿಂದ ಹರಿಯುವ ನೀರು ಚಿಕ್ಕ ಸಿಹಿನೀರಿನ ಕೆರೆ ಸೇರಬೇಕು. ಎಡಭಾಗದ ಕಾಲುವೆ ನೀರು ಹಳೆ ಸಿನಿಮಾ ಟೆಂಟ್ ಪಕ್ಕದ ರಸ್ತೆ ಕಡೆಗೆ ಹರಿಯಬೇಕು. ಆದರೆ, ಈ ಅಪಾರ ಪ್ರಮಾಣದ ನೀರು ‌ಹರಿಯಲು ಅವಕಾಶವಿಲ್ಲದೆ ಕೆರೆಯಂತಾಗಿದೆ ಎಂಬುದು ಸ್ಥಳೀಯರ ದೂರು.

ಪುರಸಭೆ ಅಧಿಕಾರಿಗಳು ಮತ್ತು ವಾರ್ಡ್‌ ಸದಸ್ಯರು ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಪದ್ಮಮ್ಮ. ಚರಂಡಿ ಮತ್ತು ರಾಜಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿ ಮತ್ತು ತುಂಬಿರುವ ಹೂಳು ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪುರಸಭೆ ಸದಸ್ಯರು ಆಯ್ಕೆಯಾಗಿ ನಾಲ್ಕು ತಿಂಗಳು ಕಳೆದಿದೆ. ಆದರೆ, ಸೌಜನ್ಯಕ್ಕಾದರೂ ಪುರಸಭೆ ಮುಖ್ಯಾಧಿಕಾರಿ ಸದಸ್ಯರನ್ನು ಕರೆದು ಸಭೆ ನಡೆಸಿಲ್ಲ. ವೈಯಕ್ತಿಕ ನಿರ್ಧಾರದಿಂದ ತಮಗೆ ಬೇಕಾದ ವಾರ್ಡ್‌ಗಳಿಗೆ ಅನುದಾನ ನೀಡುತ್ತಿದ್ದಾರೆ. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು 8ನೇ ವಾರ್ಡ್‌ನ ಸದಸ್ಯ ಬಾಂಬೆ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

‘ಮಳೆ ನಿಂತ ತಕ್ಷಣ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಸಿಬ್ಬಂದಿ ಕೊರತೆಯಿಂದ ಸಮಸ್ಯೆಗಳನ್ನು ಬಗೆಹರಿಸಲು ವಿಳಂಬವಾಗುತ್ತಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ತಿಳಿಸಿದರು.

Post Comments (+)