ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಒತ್ತುವರಿ ತೆರವು ಪ್ರಾರಂಭಿಸಲಾಗಿದೆ: ಜಿಲ್ಲಾಧಿಕಾರಿ ಜೆ. ಮಂಜುನಾಥ್‌

ಬೆಂಗಳೂರು ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ ರಾಗಿ ಬೆಳೆ ಹಾನಿ
Last Updated 28 ನವೆಂಬರ್ 2021, 5:36 IST
ಅಕ್ಷರ ಗಾತ್ರ

ಆನೇಕಲ್:ಪಟ್ಟಣಕ್ಕೆ ಹೊಂದಿಕೊಂಡಿರುವ ದೊಡ್ಡ ಕೆರೆ ಸುಮಾರು 20 ವರ್ಷಗಳಿಗೂ ಹೆಚ್ಚು ಅವಧಿಯಿಂದಲೂ ತುಂಬಿಲ್ಲ. ಹೆಚ್ಚು ಮಳೆಯಾಗುತ್ತಿದ್ದರೂ ಕೆರೆ ತುಂಬದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯ ನೀರಿನ ಮೂಲಗಳನ್ನು ಪುನರ್‌ ನವೀಕರಿಸುವ ನಿಟ್ಟಿನಲ್ಲಿ ರಾಜಕಾಲುವೆಗಳ ಗುರುತು ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ತಿಳಿಸಿದರು.

ಪಟ್ಟಣಕ್ಕೆ ಸಮೀಪದ ಆನೇಕಲ್‌ ದೊಡ್ಡಕೆರೆ ಬಳಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಬೆಂಗಳೂರು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ಹಲವು ಕೆರೆಗಳು ಕೋಡಿ ಹೋಗಿವೆ. ದೊಡ್ಡಕೆರೆಯ ನೀರಿನ ಮೂಲವಾದ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆಯು ಒಗ್ಗೂಡಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಕೆರೆಗಳನ್ನು ತುಂಬಿಸುವುದು ನಮ್ಮ ಗುರಿಯಾಗಿದೆ. ಕೆ.ಸಿ. ವ್ಯಾಲಿಯಿಂದ 69 ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆರೆಗಳು ತುಂಬಬೇಕಾದರೆ ರಾಜಕಾಲುವೆಗಳ ಒತ್ತುವರಿ ತೆರವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ ಎಂದರು.

ಕೆರೆಗೆ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಮತ್ತು ಕೊಳಚೆ ನೀರನ್ನು ಕೆರೆಗೆ ಬಿಡುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ತ್ಯಾಜ್ಯ ನೀರು ಹರಿಯದಂತೆ ಗಮನ ಹರಿಸಲಾಗುವುದು. ಘನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಜಾಗ ಮಂಜೂರು ಮಾಡಲಾಗಿದೆ. ಈ ಸ್ಥಳಗಳಲ್ಲಿಯೇ ವೈಜ್ಞಾನಿಕವಾಗಿ ವಿಲೇ ಮಾಡಬೇಕು ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊಯ್ಲಿಗೆ ಬಂದಿದ್ದ 4,000 ಹೆಕ್ಟೇರ್‌ ರಾಗಿ ಬೆಳೆ ಮಳೆಯಿಂದ ಹಾಳಾಗಿದೆ. 400 ಹೆಕ್ಟೇರ್‌ ಜೋಳ ಹಾಳಾಗಿದೆ. ಹಾನಿಯ ಅಂದಾಜು ಮಾಡಲು ಕಂದಾಯ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ಜಂಟಿ ಸಮೀಕ್ಷೆ ನಡೆಸಿ ವರದಿಗಳನ್ನು ಗಣಕೀಕೃತಗೊಳಿಸುತ್ತಿದ್ದಾರೆ ಎಂದು ವಿವರಿಸಿದರು.

ಕಂಪ್ಯೂಟರ್‌ನಲ್ಲಿ ದಾಖಲಾದ ಕೂಡಲೇ ರೈತರ ಖಾತೆಗಳಿಗೆ ಹಣ ಜಮೆಯಾಗುತ್ತಿದೆ. ಬೆಳೆ ಹಾನಿಯಾಗಿದ್ದು ಸಮೀಕ್ಷೆ ಮಾಡದಿದ್ದ ಸಂದರ್ಭದಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳನ್ನು ರೈತರು ಸಂಪರ್ಕಿಸಬೇಕು. ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ತ್ವರಿತವಾಗಿ ರೈತರಿಗೆ ಪರಿಹಾರ ನೀಡುವ ಸಂಬಂಧ ರಜಾ ದಿನಗಳಲ್ಲೂ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.

ಹೆನ್ನಾಗರ ಕೆರೆಗೆ ತ್ಯಾಜ್ಯ ನೀರು ಹರಿಯುತ್ತಿರುವುದು, ರಾಜಕಾಲುವೆ ಒತ್ತುವರಿ ಮತ್ತು ಹೆನ್ನಾಗರ ಕೋಡಿಯ ಸಂಬಂಧ ಆಗಿರುವ ಹಾನಿಯ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ತಹಶೀಲ್ದಾರ್‌ ಮತ್ತು ಸರ್ವೆ ಇಲಾಖೆಯವರು ರಾಜಕಾಲುವೆಗಳ ಒತ್ತುವರಿ ಗಡಿ ಗುರುತಿಸುವ ಸಂಬಂಧ ಕೆಲಸ ಪ್ರಾರಂಭಿಸಿದ್ದಾರೆ ಎಂದರು.

ತಹಶೀಲ್ದಾರ್‌ ಪಿ. ದಿನೇಶ್, ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ, ಡಿವೈಎಸ್ಪಿ ಎಂ. ಮಲ್ಲೇಶ್‌, ಸಣ್ಣ ನೀರಾವರಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT