ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಡ್ಯತೆ ತೊಲಗಿಸಲು ನಾಟಕ ಮಾಧ್ಯಮ

Last Updated 3 ಡಿಸೆಂಬರ್ 2019, 12:26 IST
ಅಕ್ಷರ ಗಾತ್ರ

ವಿಜಯಪುರ: ಪ್ರತಿಯೊಬ್ಬರಲ್ಲೂ ಹುಟ್ಟಿನಿಂದಲೇ ಒಂದೊಂದು ಕಲೆ ರಕ್ತಗತವಾಗಿರುತ್ತದೆ. ಅದನ್ನು ತೋರ್ಪಡಿಸಲಿಕ್ಕೆ ಉತ್ತಮ ವೇದಿಕೆಗಳು ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದು ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಹೇಳಿದರು.

ಇಲ್ಲಿನ ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ 61ನೇ ಮಾಸದ ಕನ್ನಡ ದೀಪ ಕಾರ್ಯಕ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಉತ್ತಮ ಪ್ರೋತ್ಸಾಹವಿಲ್ಲದೆ ತೆರೆಮರೆಗೆ ಸರಿಯುತ್ತಿರುವ ಕಲಾವಿದರ ಏಳಿಗೆಗಾಗಿ ನಾವೆಲ್ಲರೂ ಕಂಕಣಬದ್ಧರಾಗಬೇಕು. ಕಲಾವಿದರ ಪ್ರಯತ್ನಗಳಿಗೆ ಅಗತ್ಯವಾಗಿರುವ ಸಹಕಾರ ನೀಡುವುದಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಸಾಹಿತಿ ವಿ.ಎನ್.ರಮೇಶ್ ಮಾತನಾಡಿ, ‘ಸಮಾಜ ಬೆಳವಣಿಗೆಯಾಗುತ್ತಿರುವಂತೆಲ್ಲಾ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೆ ಕುಟುಂಬಸ್ಥರೆಲ್ಲಾ ನಾಟಕ ವೀಕ್ಷಣೆಗೆ ಹೋಗುತ್ತಿದ್ದರು. ಇಂದು ಸಾಮರಸ್ಯದ ಕೊರತೆಯಿಂದಾಗಿ ನಾಟಕಗಳಿಗೆ ವೀಕ್ಷಕರ ಕೊರತೆ ಕಾಡುತ್ತಿದೆ’ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅದ್ಯಕ್ಷ ಚಂದ್ರಶೇಖರ ಹಡಪದ್ ಅವರು ಮಾತನಾಡಿ, ‘ಪ್ರತಿನಿತ್ಯ ಸಮಾಜದಲ್ಲಿ ಬದಲಾವಣೆ ತರುವ ಶಕ್ತಿಯಿರುವ ನಾಟಕಗಳು, ರಂಗ ಪ್ರಯೋಗಗಳು ಬಲಗೊಳ್ಳಬೇಕು. ಸಾಹಿತಿಗಳಾದ ಗಿರೀಶ್‌ ಕಾರ್ನಾಡ್, ಶಿವರಾಮ ಕಾರಂತ, ಕುವೆಂಪು ಅಸಂಗತ ನಾಟಕಗಳನ್ನು ವೇದಿಕೆಗಳಲ್ಲಿ ಪ್ರಯೋಗ ಮಾಡುವುದು ಕಷ್ಟದ ಕೆಲಸ’ ಎಂದರು.

‘ತಂತ್ರಜ್ಞಾನ ಯುಗದಲ್ಲಿ ರಂಗಭೂಮಿಯಲ್ಲಿ ಪ್ರಯೋಗಗಳನ್ನು ಗಮನಿಸಬೇಕಾದರೆ ನಾಟಕಗಳು ವೀಕ್ಷಣೆ ಮಾಡುವಂತಹ ಹವ್ಯಾಸ ಬೆಳೆಯಬೇಕು. ಸಮಾಜದ ಮೇಲೆ ಪರಿಣಾಮ ಬೀರುವ ನಾಟಕಗಳು, ಸ್ವಾತಂತ್ರ್ಯ ಹೋರಾಟ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ’ ಎಂದರು.

‘ಕುವೆಂಪು ಅವರು ಜಾತಿ, ಮತ, ರಹಿತವಾದ ಜೀವನ ನಡೆಸಿದರು. ಸಮಾಜದಲ್ಲಿನ ಮೌಡ್ಯತೆ ತೊಲಗಿಸುವಲ್ಲಿಯೂ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ದೇವದಾಸಿ ನಾಟಕ ಸಮಾಜವನ್ನು ಎಚ್ಚರಿಸುತ್ತಿದೆ. ರಾಮಾಯಣ, ಮಹಾಭಾರತದಲ್ಲಿ ಪಾತ್ರಗಳು, ಸನ್ನಿವೇಶಗಳು ಜನರ ಜೀವನ ಮತ್ತು ಭಾವನೆಗಳನ್ನು ಪ್ರತಿಬಿಂಬಿಸಿವೆ. ಅಕ್ಷರ ಇಲ್ಲದ ಕಾಲದಲ್ಲಿ ಜೀವನದ ಪಾಠ ಹೇಳಿಕೊಟ್ಟಿದ್ದು ನಾಟಕಗಳು. ಆದರ್ಶ ಹೇಳಿಕೊಡುವ ಸಾಮರ್ಥ್ಯವೂ ಅವುಗಳಿಗೆ ಇದೆ. ಮೋಹದಿಂದ ಸಮಾಜದಲ್ಲಿ ಆಗುತ್ತಿರುವ ದುಷ್ಪರಿಣಾಮಗಳನ್ನು ನಿಭಾಯಿಸುವ ಪಾಠ ಹೇಳಿಕೊಡುವ ನಾಟಕಗಳ ಭಾಷೆಗೆ ಚೌಕಟ್ಟು ಹಾಕಲು ಸಾಧ್ಯವಿಲ್ಲ. ನೆಲದ ಭಾಷೆ ವಿಸ್ತಾರವಾಗಬೇಕಾದರೆ ಹಲವಾರು ಭಾಷೆಗಳನ್ನು ಕೂಡಿಸಿಕೊಳ್ಳಬೇಕು’ ಎಂದರು.

ಮುಖಂಡ ಕನಕರಾಜು ಮಾತನಾಡಿ, ಕನ್ನಡದ ಕುರಿತು ನವೆಂಬರ್‌ನಲ್ಲಿ ಕಾರ್ಯಕ್ರಮ ಮಾಡಿದರೆ ಸಾಲದು ವರ್ಷವಿಡೀ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಎಂ.ವಿ.ನಾಯ್ಡು, ಮಹಾತ್ಮಾಂಜನೇಯ ತಂಡದಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಕಲಾವಿದ ನಾರಾಯಣಸ್ವಾಮಿ, ಮಹಾತ್ಮಾಂಜನೇಯ ಅವರನ್ನು ಸನ್ಮಾನಿಸಲಾಯಿತು.
ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್, ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಸುಭ್ರಮಣಿ, ಗೋವಿಂದರಾಜು, ವೆಂಕಟಪತಿ, ರವಿಕುಮಾರ್, ನರಸಿಂಹಪ್ಪ, ವೆಂಕಟೇಶ್, ಪ್ರಸನ್ನಕುಮಾರ್, ಅಮರೇಂದ್ರ, ವೆಲ್ಡರ್ ಮುನಿಮಾರಪ್ಪ, ಶೇಷಗಿರಿರಾವ್, ರಾಮಣ್ಣ, ಭೈರೇಗೌಡ, ಅಶ್ವಥಗೌಡ, ನಾಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT