ಶುಕ್ರವಾರ, ನವೆಂಬರ್ 15, 2019
26 °C

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ ವಿರೋಧ

Published:
Updated:
Prajavani

ದೇವನಹಳ್ಳಿ: ಕೇಂದ್ರ ಸರ್ಕಾರದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಒಪ್ಪಂದದ ವಿರುದ್ಧ ಪ್ರಾಂತ ರೈತ ಸಂಘದ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಸಂಕೀರ್ಣದ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎನ್.ವೀರಣ್ಣ ಮಾತನಾಡಿ, ‘ಕೇಂದ್ರ ಸರ್ಕಾರ ರೈತ ಮುಖಂಡರ ಸಭೆ ಕರೆದು ಚರ್ಚಿಸದೆ ಆಸಿಯಾನ್ 11 ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರಕ್ಕೆ ಮುಂದಾಗಿರುವುದು ಅವೈಜ್ಞಾನಿಕ. ದೇಶ ಮತ್ತು ರಾಜ್ಯದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿರುವ ರೈತರನ್ನು ಬಲಿಪಶು ಮಾಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಕೃಷಿ ಕಾರ್ಮಿಕರಿಗೆ, ಹಾಲು ಉತ್ಪಾದಕರಿಗೆ ಕೈಗೆ ಕೆಲಸವಿಲ್ಲದ ಸ್ಥಿತಿ ನಿರ್ಮಾಣವಾಗಲಿದ್ದು ಹಾಲಿನ ಉತ್ಪಾದನೆ ಗಣನೀಯವಾಗಿ ಕುಸಿತ ಕಂಡು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ’ ಎಂದು ದೂರಿದರು.

‘ಇಲ್ಲಿನ ರೈತರು ಒಂದರಿಂದ ಆರೇಳು ಪಶುಗಳಿಗೆ ಸಿಮಿತವಾಗಿ ಪಾಲನೆ ಮಾಡುತ್ತ ಜೀವನ ಸುಧಾರಣೆಗೆ ಮುಂದಾಗಿದ್ದಾರೆ. ವಿದೇಶಗಳಲ್ಲಿ ಅಲ್ಲಿನ ಸರ್ಕಾರ ಅಪಾರವಾದ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ ಅಲ್ಲಿನ ಹಾಲು ಉತ್ಪಾದಕರು ಸಾವಿರಕ್ಕಿಂತ ಹೆಚ್ಚು ಪಶುಗಳನ್ನು ಸಾಕಣೆ ಮಾಡಿಕೊಂಡು ಕಾರ್ಖಾನೆಯಂತೆ ಹಾಲು ಉತ್ಪಾದಿಸಿ ವಾಣಿಜ್ಯ ವಹಿವಾಟು ರೀತಿಯಲ್ಲಿ ರಪ್ತು ಮಾಡಲು ಮುಂದಾಗಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕಿದರೆ ಸ್ಥಳೀಯ ಹೈನುಗಾರಿಕೆಗಳು ಮೂಲೆ ಗುಂಪು ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಡೆನ್ಮಾರ್ಕ್, ದೇಶಗಳಿಂದ ಹಾಲು ಉತ್ಪಾದನೆಯ ಶೇ 93ರಷ್ಟು ವಿದೇಶಿಗಳಿಗೆ ರಪ್ತು ಮಾಡುತ್ತವೆ. ಅತ್ಯಾಧುನಿಕ ಯಾಂತ್ರಿಕೃತ ಪದ್ಧತಿಯಲ್ಲಿ ಅತಿ ಹೆಚ್ಚು ರಿಯಾಯಿತಿ ಪ್ರೋತ್ಸಾಹ ಧನದಿಂದ ಹಾಲು ಉತ್ಪಾದನೆ ಮಾಡುವುದರಿಂದ ಒಪ್ಪಂದಕ್ಕೆ ಸಹಿ ಹಾಕಿದರೆ ಸ್ಥಳಿಯ ಹೈನುಗಾರಿಕೆ ಕುಟುಂಬಗಳು ಬೀದಿಪಾಲಗಾಲಿದೆ ಎಂದು ಅರೋಪಿಸಿದರು.

‘ಕೃಷಿ, ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಸಾಂಬಾರ ಪದಾರ್ಥಗಳು, ತೆಂಗು, ಅಡಿಕೆ, ಇನ್ನಿತರ ಜೀವನಕ್ಕೆ ಅವಶ್ಯವಿರುವ ಒಟ್ಟು 37ಕ್ಕೂ ಹೆಚ್ಚು ಬೆಳೆ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆ ವ್ಯಾಪ್ತಿಗೆ ಬಂದರೆ ದೇಶದಲ್ಲಿರುವ ಶೇ 60ರಷ್ಟು ರೈತರ ಬದುಕು ಕತ್ತಲೆಯಾಗಲಿದೆ. ನಮ್ಮ ದೇಶೀಯ ಉತ್ಪನ್ನ ಮತ್ತು ಮಾರುಕಟ್ಟೆ ವ್ಯವಸ್ಥೆ ಸರ್ವನಾಶವಾಗಲಿದೆ ಎಂದು ದೂರಿದರು.

ಪ್ರಾಂತ ರೈತ ಸಂಘ ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ, ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೇಕ್ ಇನ್ ಇಂಡಿಯಾ ಘೋಷಣೆ ಮಾಡಿದ ನಂತರವು ಸ್ಥಳೀಯ ಉತ್ಪಾದನೆಗಳಿಗೆ ಆಧ್ಯತೆ ನೀಡುವ ಬದಲು ವಿದೇಶಿ ಬಂಡವಾಳ ಶಾಹಿಗಳಿಂದ ಸ್ಥಳಿಯ ರೈತರ ಮೇಲೆ ಗದಪ್ರಹಾರಕ್ಕೆ ಮುಂದಾಗಿದೆ’ ಎಂದು ದೂರಿದರು.

ರೈತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಜಿ.ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ನಂಜೇಗೌಡ, ಮುಖಂಡರಾದ ವಿ.ನಾರಾಯಣಸ್ವಾಮಿ, ಲಕ್ಷ್ಮಿನಾರಾಯಣಪ್ಪ, ಬಿ.ಕೆ.ಶಿವಪ್ಪ, ಹನುಮಂತರಾಯಪ್ಪ ಇದ್ದರು.

ಪ್ರತಿಕ್ರಿಯಿಸಿ (+)