ಬುಧವಾರ, ನವೆಂಬರ್ 20, 2019
25 °C
ರಾಜ್ಯ ಘಟಕದ ಭರವಸೆ

ರೈತರಿಗೆ ಅನ್ಯಾಯ ಆಗುವ ಒಪ್ಪಂದ ಜಾರಿ ಇಲ್ಲ: ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್

Published:
Updated:

ದೊಡ್ಡಬಳ್ಳಾಪುರ: ರೈತರಿಗೆ ಅನ್ಯಾವಾಗುವಂತಹ ಆರ್‌ಸಿಇಪಿ ಸೇರಿದಂತೆ ಯಾವುದೇ ಒಪ್ಪಂದಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ನಗರದಲ್ಲಿ ಶನಿವಾರ ನಡೆದ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಬೂತ್ ಮಟ್ಟದ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ವಿರುದ್ದ ಹೋರಾಟ ನಡೆಸಲು ವಿರೋಧಿಗಳಿಗೆ ಯಾವುದೇ ಅಸ್ತ್ರ ಇಲ್ಲವಾಗಿದೆ. ಇನ್ನು ಚರ್ಚೆಯ ಹಂತದಲ್ಲಿಯೇ ಇರುವಂತಹ ಆರ್‌ಸಿಇಪಿ ಒಪ್ಪಂದ ವಿರುದ್ಧ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಒಪ್ಪಂದದಿಂದ ರೈತರಿಗೆ ಉಂಟಾಗುವ ತೊಂದರೆಗಳ ಅರಿವು ಸರ್ಕಾರಕ್ಕೆ ಇದೆ. ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರಕ್ಕೆ ಪತ್ರ ಬರೆದು ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎಂದರು.

ಹೊಸಕೋಟೆ ಉಪಚುನಾವಣೆಯಲ್ಲಿ ಬಂಡಾಯ ಎದ್ದಿರುವ ಶರತ್‌ಬಚ್ಚೆಗೌಡ ಅವರೊಂದಿಗೆ ಮಾತನಾಡುವೆ ಎಂದ ಅವರು, ಟಿಪ್ಪು ಜಯಂತಿ ಆಚರಣೆ ವಿಷಯದಲ್ಲಿ ಪರವೇ, ವಿರೋಧವೇ ಎಂಬ ಗೊಂದಲದಲ್ಲಿರುವ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರಾವಧಿಯಲ್ಲಿ ಮುಸ್ಲಿಂ ಸಮುದಾಯ ಕೇಳದಿದ್ದರೂ ಟಿಪ್ಪು ಜಯಂತಿ ಆಚರಿಸುವ ಮೂಲಕ ರಾಜ್ಯದಲ್ಲಿ ಮಾರಣಹೋಮ ನಡೆಸಿತ್ತು ಎಂದು ಟೀಕಿಸಿದರು.

ರೈತರಿಗೆ ಕೇಂದ್ರ ₹6 ಸಾವಿರ, ರಾಜ್ಯ ₹4 ಸಾವಿರ ಪ್ರೋತ್ಸಾಹಧನ, ನೇಕಾರರ ಸಾಲ ಮನ್ನಾ, ನೆರೆ ಪೀಡಿತರಿಗೆ ಮನೆಯ ನಿರ್ಮಾಣಕ್ಕೆ ಐದು ಲಕ್ಷ ನೀಡುವಂತ ದೇಶದಲ್ಲಿಯೇ ಮಾದರಿಯಾಗುವಂತಹ ಯೋಜನೆಗಳನ್ನು ನೀಡುತ್ತ ರಾಜ್ಯದ ಅಭಿವೃದ್ದಿ ಕೈಗೊಳ್ಳುತ್ತಾ ನೂರು ದಿನ ಪೂರೈಸಲಾಗಿದೆ ಎಂದರು.

ಬಿಜೆಪಿ ಮುಖಂಡ ಜೆ.ನರಸಿಂಹಸ್ವಾಮಿ ಮಾತನಾಡಿ, ಪಕ್ಷ ಸಂಘಟನೆ ನಿರಂತರ ಪ್ರಕ್ರಿಯೆಯಾಗಿದ್ದು ಯಡಿಯೂರಪ್ಪ ಸರ್ಕಾರ ಪೂರ್ಣಾವಧಿಗೊಳಿಸಲಿದೆ. ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ಸಂಘಟನೆ ಬಲಗೊಂಡಿದೆ ಎಂದರು.

ಮುಖಂಡ ಟಿ.ವಿ.ಲಕ್ಷ್ಮೀನಾರಾಯಣ್‌ ಮತನಾಡಿ, ಐದು ವರ್ಷಗಳಿಂದ ದಾಬಸ್ ಪೇಟೆ, ದೇವನಹಳ್ಳಿ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಸಾವುನೋವು ಉಂಟಾಗುತ್ತಿದ್ದು ಕೇಂದ್ರ ಸರ್ಕಾರದ ಗಮನಕ್ಕೆ ತಂದು ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಬಿ.ಸಿ.ನಾರಾಯಣಸ್ವಾಮಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲ, ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ನಗರ ಅಧ್ಯಕ್ಷ ಬಿ.ಮುದ್ದಪ್ಪ, ಜಿಲ್ಲಾ ಉಪಾಧ್ಯಕ್ಷ ಕೋಡಿ ನರಸಿಂಹಮೂರ್ತಿ, ಜಿಲ್ಲಾ ವಕ್ತಾರ ಎಚ್.ಎಸ್.ಅಶ್ವಥ್‌ನಾರಾಯಣಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ್, ಮುಖಂಡರಾದ ಸಿ.ಡಿ.ಸತ್ಯನಾರಾಯಣಗೌಡ, ಶ್ರಿನಿವಾಸ್, ಕಾಂತರಾಜ್, ಗಿರಿಜಾ, ಕೃಷ್ಣಮೂರ್ತಿ, ಅಶ್ವಥ್ ನಾರಾಯಣಗೌಡ, ಶಿವು ಇದ್ದರು.

ಪ್ರತಿಕ್ರಿಯಿಸಿ (+)