ಗತ ಮೆಲುಕು ಹಾಕಿದ ಅಪ್ಪಟ ಗಾಂಧಿವಾದಿ ಚಿನ್ನರಾಯಪ್ಪ

7
'ಸ್ವಾತಂತ್ರ್ಯ ಹೋರಾಟದ ಕಿಚ್ಚು ಈಗಿನ ಯಾವ ಹೋರಾಟದಲ್ಲೂ ಇಲ್ಲ'

ಗತ ಮೆಲುಕು ಹಾಕಿದ ಅಪ್ಪಟ ಗಾಂಧಿವಾದಿ ಚಿನ್ನರಾಯಪ್ಪ

Published:
Updated:
Deccan Herald

ದೇವನಹಳ್ಳಿ: ಸ್ವಾತಂತ್ರ್ಯಕ್ಕಾಗಿ ನಡೆದ ಅಂದಿನ ಹೋರಾಟದಲ್ಲಿ ಸಾವಿರಾರು ಜನರು ನಿಷ್ಠೆ, ಸ್ವಾಭಿಮಾನದಿಂದ ಪಾಲ್ಗೊಳ್ಳುತ್ತಿದ್ದರು. ಈಗಿನ ಯಾವ ಹೋರಾಟದಲ್ಲೂ ಜನರು ಕಿಚ್ಚಿನಿಂದ ಪಾಲ್ಗೊಳ್ಳುತ್ತಿಲ್ಲ ಎನ್ನುತ್ತಾರೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಪ್ಪಟ ಗಾಂಧಿವಾದಿ ಚಿನ್ನರಾಯಪ್ಪ.

ಗಾಂಧಿ ಜಯಂತಿ ಪ್ರಯುಕ್ತ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಮ್ಮದು ಕೃಷಿ ಕುಟುಂಬ. ದೇವನಹಳ್ಳಿ ನಗರದ ಪರ್ವತಪುರದಲ್ಲಿ ವಾಸವಾಗಿದ್ದೇನೆ. ಚಿನ್ನಕೆಂಪಮ್ಮ ಮತ್ತು ಅಪ್ಪಾಜಪ್ಪರ ಮಗನಾಗಿ 1936 ಮೇ15 ರಂದು ಜನಿಸಿದ ನಾನು ಬಾಲಕನಿದ್ದಾಗಲೇ ಪರಂಗಿ (ಬ್ರಿಟಿಷರು) ಜೀಪ್ ಮತ್ತು ಕುದುರೆಗಳ ಮೇಲೆ ಓಡಾಡುತ್ತಿದ್ದುದನ್ನು ಕುತೂಹಲದಿಂದ ನೋಡುತ್ತಿದ್ದೆ’ ಎಂದು ಗತವನ್ನು ಮೆಲುಕು ಹಾಕಿದರು.

‘ಆಗಿನ ಕಾಲದಲ್ಲಿ ಟ್ರಾನ್ಸಿಸ್ಟರ್, ರೇಡಿಯೊ ಇತ್ತು. ಬೇರೇನೂ ಇರಲಿಲ್ಲ. ಮಾಹಿತಿ ಸಕಾಲದಲ್ಲಿ ತಲುಪುತ್ತಿರಲಿಲ್ಲ. ಮಾಹಿತಿ ಸಿಕ್ಕ ನಂತರ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ 12ನೇ ವಯಸ್ಸಿನಲ್ಲೇ ಧುಮುಕಿದೆ. ಬ್ರಿಟಿಷ್‌ ಆಡಳಿತದಲ್ಲಿ ಬೆರಳೆಣಿಕೆಯಷ್ಟು ನಮ್ಮವರು ಪೊಲೀಸ್ ಕಾನ್‌ಸ್ಟೆಬಲ್‌ಗಳಾಗಿದ್ದರು. ಆದರೂ, ಅವರು ಅಸಹಾಯಕರಾಗಿದ್ದರು. ಅಂದಾಜು 20ಕ್ಕೂ ಹೆಚ್ಚು ಹೋರಾಟಗಳಲ್ಲಿ ಪಾಲ್ಗೊಂಡಿರುವ ನೆನಪಿದೆ’ ಎಂದು ಅನುಭವ ಹಂಚಿಕೊಂಡರು.

 

‘13ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದೇನೆ. ಆಗಿನ ಕಾಲದಲ್ಲಿ ಮೆಟ್ರಿಕ್ಯುಲೇಷನ್ ನಂತರ ಒಂದೇ ವರ್ಷ ಪಿ.ಯು.ಸಿಗೆ ಅವಕಾಶವಿತ್ತು. ಬೆಂಗಳೂರಿನ ಸರ್ಕಾರಿ ಆರ್ಟ್ಸ್‌ ಕಾಲೇಜು ಮೈದಾನದಲ್ಲಿ ಗಾಂಧೀಜಿ ಅವರ ಬೃಹತ್ ಸಭೆಯಲ್ಲಿ ಭಾಷಣ ಮಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಕರೆ ನೀಡಿದ್ದರು. ನಾನು ಸಹ ಭಾಗವಹಿಸಿದ್ದೆ' ಎಂದು ವಿವರಿಸಿದರು.

‘ಪ್ರತಿಭಟನೆ ಮತ್ತು ಹೋರಾಟದಲ್ಲಿ ಭಾಗವಹಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟು ತಿಂದಿದ್ದೇನೆ. ಜೈಲಿನಲ್ಲಿ ಬಂದಿಯಾಗಿಲ್ಲ. 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ ನನಗೆ ಗೊತ್ತಿರುವ ಪ್ರಕಾರ 38 ದಿನಗಳ ಕಾಲ ನಿರಂತರವಾಗಿ ನಡೆಯಿತು’ ಎಂದು ನೆನಪುಗಳನ್ನು ಕಣ್ಣಿಗೆ ಕಟ್ಟುವಂತೆ ಪೋಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !