ಭಾನುವಾರ, ಸೆಪ್ಟೆಂಬರ್ 19, 2021
24 °C

ಶ್ರಮದಾನ ಸಂಸ್ಕೃತಿ ಕಣ್ಮರೆಗೆ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಶ್ರಮದಾನ ಕುರಿತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕಲ್ಪನೆಯನ್ನು ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ. ಪ್ರಶಾಂತ್ ತಿಳಿಸಿದರು.

ಹೋಬಳಿಯ ದಂಡಿಗಾನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಸ್ವಚ್ಛತಾ ಹಾಗೂ ಶ್ರಮದಾನ, ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಗಳನ್ನು ಸ್ವಚ್ಛವಾಗಿಡುವಂತೆ ಬೀದಿ, ಕಚೇರಿಗಳನ್ನು ಸ್ವಚ್ಛವಾಗಿಡಬೇಕಿದೆ. ಶ್ರಮದಾನ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಸ್ವಚ್ಛತಾ ಸಪ್ತಾಹ ಕೇವಲ ಒಂದು ವಾರಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡೀ ಸ್ವಚ್ಛತೆ ಕಾಪಾಡುವ ಮನೋಭಾವ ಬೆಳೆಸಬೇಕಿದೆ. ನಮ್ಮ ಊರು ಎಂಬ ಅಭಿಮಾನ ಪ್ರತಿಯೊಬ್ಬರಲ್ಲೂ ಇದ್ದರೆ ಅಭಿವೃದ್ಧಿ ಸಾಧ್ಯವಿದೆ. ಪರಿಸರ ಸಂರಕ್ಷಣೆ ಮೇಲೆ ನಮ್ಮೆಲ್ಲರ ಭವಿಷ್ಯವಿದೆ. ಶುದ್ಧ ಪರಿಸರ ಇದ್ದರೆ ಮಾತ್ರ ಎಲ್ಲರೂ ಆರೋಗ್ಯವಂತರಾಗಿರಲು ಸಾಧ್ಯ ಎಂದರು.

ಬಮೂಲ್ ಮಾಜಿ ನಿರ್ದೇಶಕ ಎನ್. ನಾರಾಯಣಸ್ವಾಮಿ ಮಾತನಾಡಿ, ಅಹಿಂಸೆ, ಸತ್ಯ, ಚಾರಿತ್ರ್ಯ ಮತ್ತು ಗ್ರಾಮ ಸ್ವರಾಜ್ಯ ಕಲ್ಪನೆಯು ವಿಶ್ವಕ್ಕೆ ಗಾಂಧೀಜಿ ಅವರ ಕೊಡುಗೆಗಳಾಗಿವೆ. ವಿಶ್ವದ ಹಲವು ಕಡೆಗಳಲ್ಲಿ ಅಶಾಂತಿ ತುಂಬಿದ್ದು ಗಾಂಧೀಜಿ ಅವರ ವಿಚಾರಧಾರೆಗಳು ಮಹತ್ವ ಪಡೆದಿವೆ ಎಂದು ಹೇಳಿದರು.

ಅವರ ವಿಚಾರಧಾರೆಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದು ಯುವಜನಾಂಗದ ಕರ್ತವ್ಯವಾಗಿದೆ. ಗಾಂಧೀಜಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರಗೊಳ್ಳಬೇಕೆಂದರೆ ಪ್ರತಿ ಯೊಬ್ಬರು ತಮ್ಮ ನಗರ, ಗ್ರಾಮವನ್ನು ಸ್ವಚ್ಛವಾಗಿಡಲು ಶ್ರಮಿಸಬೇಕು ಎಂದರು.

ಯುವಜನತೆಗಾಗಿ ಸ್ವಚ್ಛತೆಯ ಬಗ್ಗೆ ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ, ಆಶುಭಾಷಣ, ಚರ್ಚಾ ಸ್ಪರ್ಧೆ ಏರ್ಪಡಿಸಿ ಸ್ವಾತಂತ್ರ್ಯೋತ್ಸವದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಚಿದಾನಂದ ಬಿರಾದರ್, ಸಹಶಿಕ್ಷಕ ಎಲ್. ಕೃಷ್ಣಪ್ಪ, ದೇವನಹಳ್ಳಿ ತಾಲ್ಲೂಕು ಜಯಕರ್ನಾಟಕ ಪ್ರಚಾರ ಸಮಿತಿ ಅಧ್ಯಕ್ಷ ವಿ. ಸುನಿಲ್, ಮಾರುತಿ ಯುವಜನ ಸೇವಾ ಸಂಘದ ಅಧ್ಯಕ್ಷ ಸಿ. ಮಂಜುನಾಥ್, ಕಾರ್ಯದರ್ಶಿ ಎ.ಎಂ. ರಾಕೇಶ್, ಎನ್.ಎಸ್.ಎಸ್ ಸ್ವಯಂ ಸೇವಕರಾದ ಎಚ್.ಎಸ್. ಸಾಗರ್, ಜಿ. ರಾಕೇಶ್, ಎನ್. ಅನ್ವಿತಾ, ಎಸ್. ನಂದಿನಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.