ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌ ತಾಲ್ಲೂಕಿನ ಜಿಗಳ ಗ್ರಾಮದಲ್ಲಿ ಸುಗ್ಗಿ ಹಬ್ಬದ ಸಡಗರ

ಗ್ರಾಮೀಣ ಸೊಗಡು ಕಣ್ಮರೆಗೆ ವಿಷಾದ
Last Updated 28 ಜನವರಿ 2021, 2:19 IST
ಅಕ್ಷರ ಗಾತ್ರ

ಆನೇಕಲ್:ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳಾದ ಜಾತ್ರೆ, ಉತ್ಸವ, ಹಬ್ಬಗಳು ಜನರು ಪರಸ್ಪರ ಅರಿತುಕೊಳ್ಳಲು ಕಷ್ಟ, ಸುಖಗಳಿಗೆ ಸ್ಪಂದಿಸಲು ಉತ್ತಮ ವೇದಿಕೆಗಳಾಗಿವೆ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ವಿ.ಆರ್‌. ಟ್ಯಾಗೋರ್‌ ತಿಳಿಸಿದರು.

ಅವರು ತಾಲ್ಲೂಕಿನ ಜಿಗಳ ಗ್ರಾಮದಲ್ಲಿ ಭಾರತೀಯ ಕಿಸಾನ್‌ ಸಂಘದ ದಕ್ಷಿಣ ಪ್ರಾಂತ್ಯ ಆನೇಕಲ್‌ ಘಟಕದಿಂದ ಆಯೋಜಿಸಿದ್ದ ಸುಗ್ಗಿ ಹಬ್ಬ-2021 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಈ ಹಿಂದೆ ಸುಗ್ಗಿ ಕಾಲ ಮುಗಿಯುತ್ತಿದ್ದಂತೆ ಹಬ್ಬಗಳ ಕಾಲ ಪ್ರಾರಂಭವಾಗುತ್ತಿತ್ತು. ಪ್ರತಿಯೊಂದು ಹಬ್ಬ, ಉತ್ಸವಗಳಲ್ಲೂ ಗ್ರಾಮದ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಉತ್ಸವಗಳ ಸೊಗಡು ಮಾಯವಾಗುತ್ತಿದೆ. ಪರಸ್ಪರ ವಿಶ್ವಾಸ, ಸಹಕಾರ, ಮನೋಭಾವನೆ ಮೂಡಲು ಉಪಯುಕ್ತವಾಗಿವೆ. ನಗರೀಕರಣದ ಪ್ರಭಾವದಿಂದಾಗಿ ಗ್ರಾಮೀಣ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಗ್ರಾಮೀಣ ಸಂಸ್ಕೃತಿ, ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೋಲಾಟ, ಹಗ್ಗಜಗ್ಗಾಟ, ರಂಗೋಲಿ ಸ್ಪರ್ಧೆ, ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸುಗ್ಗಿ ಹಬ್ಬದಲ್ಲಿ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.

ಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ. ವಿಶ್ವನಾಥ್‌ ಮಾತನಾಡಿ, ಜಿಗಳ ಗ್ರಾಮದಲ್ಲಿ ಸುಗ್ಗಿ ಹಬ್ಬದ ಸಂಭ್ರಮದಲ್ಲಿ ವಿವಿಧ ಗ್ರಾಮದ ನೂರಾರು ಮಹಿಳೆಯರು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಗ್ರಾಮೀಣ ಭಾಗದಲ್ಲಿ ಅವಕಾಶಗಳಿಲ್ಲದೇ ಹಲವು ಪ್ರತಿಭೆಗಳು ಮೂಲೆ ಗುಂಪಾಗುತ್ತಿವೆ. ಸೂಕ್ತ ವೇದಿಕೆ ಒದಗಿಸುವ ಮೂಲಕ ಭಾರತೀಯ ಕಿಸಾನ್‌ ಸಂಘ ಉತ್ತಮ ಕೆಲಸ ಮಾಡಿದೆ ಎಂದರು.

ಭಾರತೀಯ ಕಿಸಾನ್‌ ಸಂಘದ ದಕ್ಷಿಣ ಪ್ರಾಂತ್ಯದ ರಾಮಸ್ವಾಮಿ ರೆಡ್ಡಿ, ತಹಶೀಲ್ದಾರ್‌ ಸಿ. ಮಹಾದೇವಯ್ಯ, ಕರ್ನಾಟಕ ಪ್ರದೇಶ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ದಕ್ಷಿಣ ಪ್ರಾಂತ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮುಖಂಡರಾದ ಶ್ರೀನಿವಾಸ್‌ ರೆಡ್ಡಿ, ನಾರಾಯಣಸ್ವಾಮಿ, ಜಿಗಳ ಪ್ರವೀಣ್‌ ಹಾಜರಿದ್ದರು.

ಸುಗ್ಗಿ ಹಬ್ಬದ ಅಂಗವಾಗಿ ಭಾರತ ಮಾತೆ ಪೂಜೆ, ಗೋಮಾತಾ ಪೂಜೆ, ಭಜನೆ, ರಾಶಿ ಪೂಜೆ, ರಂಗೋಲಿ ಸ್ಪರ್ಧೆ, ಕೋಲಾಟ, ಮಡಿಕೆ ಹೊಡೆಯುವುದು, ಹಗ್ಗಜಗ್ಗಾಟ, ಗಾಳಿಪಟ ಸ್ಪರ್ಧೆ, ರಾಸುಗಳ ಪ್ರದರ್ಶನ, ಎತ್ತುಗಳ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ತಾಲ್ಲೂಕಿನ ವಿವಿಧ ಗ್ರಾಮಗಳು ನೂರಾರು ರೈತರು, ಮಹಿಳೆಯರು ಸುಗ್ಗಿ ಹಬ್ಬಕ್ಕೆ ಮೆರುಗು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT