ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಮೂಲಗಳ ಪುನಶ್ಛೇತನ ಅನಿವಾರ್ಯ’

ಗೋಕಟ್ಟೆಗಳು, ಕಲ್ಯಾಣಿಗಳನ್ನು ಹೊಂದಿದ್ದರೂ ಇದರಲ್ಲಿ ಶೇ.50ರಷ್ಟು ಉಪಯೋಗವಿಲ್ಲ
Last Updated 22 ಮಾರ್ಚ್ 2019, 13:56 IST
ಅಕ್ಷರ ಗಾತ್ರ

ದೇವನಹಳ್ಳಿ: ‘2021ರ ಹೊತ್ತಿಗೆ ರಾಜ್ಯದ ಜನಸಂಖ್ಯೆ 7.5 ಕೋಟಿ ತಲುಪುವ ನಿರೀಕ್ಷೆ ಇದೆ.ಆದ್ದರಿಂದ ಜಲ ಮೂಲಗಳ ಪುನಶ್ಛೇತನ ಮತ್ತು ಜಲ ಸಂರಕ್ಷಣೆ ಮಾಡುವುದು ಅನಿವಾರ್ಯ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅತಿಕ್ ಹೇಳಿದರು.

ಇಲ್ಲಿನ ಕೆಂಪಲಿಂಗನಪುರ ಗ್ರಾಮದ ಕೆರೆ ಬಳಿ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತ ಇಲಾಖೆ ವತಿಯಿಂದ ‘ವಿಶ್ವ ಜಲ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನ ಮಾರುಕಟ್ಟೆಯಲ್ಲಿ ನೀರಿನ ವ್ಯಾಪಾರ ಹೆಚ್ಚುತ್ತಲೇ ಇದೆ. ನೀರಿನ ಬಾಟಲ್‌ಗಳು ಬೀದಿ ಬೀದಿಗಳಲ್ಲಿ ಮಾರಾಟವಾಗುತ್ತಿದೆ. ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಇಳಿಮುಖ ಆಗುತ್ತಿರುವ ನೀರಿನ ಸಂಪನ್ಮೂಲಗಳ ಸಂರಕ್ಷಣೆ ಅತಿಮುಖ್ಯ ಎಂದರು.

ರಾಜ್ಯದ ಏಳು ಪ್ರಮುಖ ನದಿಗಳು, 36 ಸಾವಿರ ಕೆರೆಗಳು, ಅಸಂಖ್ಯಾತ ಕುಂಟೆಗಳು, ಗೋಕಟ್ಟೆಗಳು, ಕಲ್ಯಾಣಿಗಳನ್ನು ಹೊಂದಿದ್ದರೂ ಇದರಲ್ಲಿ ಶೇ 50ರಷ್ಟು ಉಪಯೋಗ ಇಲ್ಲದಂತಾಗಿದೆ. ಇದೇ ಮೊದಲ ಬಾರಿಗೆ ಜಲಾಮೃತ ಸಮಿತಿ ಜಿಲ್ಲಾ ಮಟ್ಟದಲ್ಲಿ ರಚಿಸಿ ಜಲ ಮೂಲದ ಮತ್ತು ಪರಿಸರ ಸಂಕ್ಷಣೆ ಮಾಡಲು ಸರ್ಕಾರ ಈ ವರ್ಷದಿಂದ ಜಲ ವರ್ಷವೆಂದು ಘೊಷಿಸಿದೆ ಎಂದು ಹೇಳಿದರು.

1,300 ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುವ ಖಾತರಿ ಇಲ್ಲ. ಪ್ರತಿಯೊಂದು ಮನೆಗಳಿಗೆ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿಗಳು ನೀರಿನ ಅಯವ್ಯಯ (ಬಜೆಟ್) ಮಂಡಿಸಲೇಬೇಕು. ಪಂಚಾಯಿತಿ ಆಡಳಿತ ಮಟ್ಟದಲ್ಲಿ ಚರ್ಚಿಸಿ ಪ್ರತಿ ಗ್ರಾಮ ಪಂಚಾಯಿತಿ ಒಂದು ಕೆರೆ ದುರಸ್ತಿಗೊಳಿಸಿ ಕನಿಷ್ಠ ವಾರ್ಷಿಕ ಐದು ಸಾವಿರ ಸಸಿ ನೆಟ್ಟು ಬೆಳೆಸಲೇಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿ, ಒಂದು ಮನೆಗೆ ಮಳೆ ನೀರು ಸಂಗ್ರಹ ಅಳವಡಿಸಲು ₹20 ಸಾವಿರ ಸಾಕು. ಜಿಲ್ಲೆಯಲ್ಲಿ ಸ್ಥಳೀಯ ದಾನಿಗಳು ₹10 ರಿಂದ ₹5 ಲಕ್ಷದವರೆಗೆ ನೀಡಿದ ಹಣದಿಂದ 22 ಕೆರೆಯಲ್ಲಿ ಹೂಳು ಎತ್ತುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕರಿಯಪ್ಪ, ಮುಖ್ಯ ಲೇಕ್ಕಾಧಿಕಾರಿ ಶೋಭಾ, ಮುಖ್ಯಯೋಜನಾಧಿಕಾರಿ ವಿನುತಾ ರಾಣಿ, ಯೋಜನಾ ನಿರ್ದೇಶಕ ಡಾ.ಶಿವರುದ್ರಪ್ಪ, ಉಪಆರಣ್ಯ ಸಂರಕ್ಷಣಾಧಿಕಾರಿ ಆನಂದ್ ವೈದುರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರುದ್ರೇಶ್, ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸತ್ಯ ನಾರಾಯಣ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಮುರುಡಯ್ಯ, ಪಿಡಿಓ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT