ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ ಕಣದಲ್ಲೂ ಧರ್ಮ-ಸಂಸ್ಕೃತಿ ಹಾಸುಹೊಕ್ಕು

ಉಜ್ಜಯಿನಿ ಮಹಾಪೀಠದ ಶ್ರೀಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಮತ
Last Updated 2 ಡಿಸೆಂಬರ್ 2019, 15:56 IST
ಅಕ್ಷರ ಗಾತ್ರ

ಆನೇಕಲ್: ದೇಶದ ಪರಂಪರೆಯಲ್ಲಿ ದೇಗಲುಗಳಿಗೆ ಹೆಚ್ಚಿನ ಮಹತ್ವ ಇದೆ. ಪ್ರತಿ ಗ್ರಾಮದಲ್ಲೂ ದೇಗುಲಗಳು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕೇಂದ್ರಗಳಾಗಿವೆ ಎಂದು ಉಜ್ಜಯಿನಿ ಮಹಾಪೀಠದ ಶ್ರೀಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯದ ರಾಜಗೋಪುರ ಗುದ್ದಲಿಪೂಜೆ, ನವಗ್ರಹ ಮಂಟಪ, ನೈರುತ್ಯ ಗಣಪತಿ, ನಾಗರಕಟ್ಟೆ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಇತಿಹಾಸ ಗಮನಿಸಿದರೆ ದೇಶದ ಮಣ್ಣಿನ ಕಣ ಕಣದಲ್ಲೂ ದೇವರು, ಧರ್ಮ, ಸಂಸ್ಕೃತಿ, ಪರಂಪರೆ ಹಾಸುಹೊಕ್ಕಾಗಿದೆ. ನೂರಾರು ಜಾತಿ, ಭಾಷೆ, ಧರ್ಮ, ಮತಗಳಿದ್ದರೂ ಭಾರತೀಯರೆಂಬ ಭಾವನೆಯಿಂದ ನಾವೆಲ್ಲಾ ಒಂದಾಗಿದ್ದೇವೆ. ಇಂತಹ ಸಂಸ್ಕೃತಿ ಬೇರಾವುದೇ ದೇಶಗಳಲ್ಲಿ ಕಾಣುವುದಿಲ್ಲ. ಸ್ವಾಮಿ ವಿವೇಕಾನಂದರು ಭಾರತವನ್ನು ಆಧ್ಯಾತ್ಮಿಕ ಗುರು ಎಂದು ಕರೆದಿದ್ದಾರೆ ಎಂದರು.

ಎಡೆಯೂರು ಬಾಳೆಹೊನ್ನೂರು ಖಾಸ ಶಾಖಮಠದ ಪಟ್ಟದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲರನ್ನು ವಿಶ್ವಾಸದಿಂದ ಕಾಣುವ ಧರ್ಮ ಭಾರತೀಯ ಧರ್ಮ. ಸಮಾನತೆ, ಸಹಬಾಳ್ವೆ ತತ್ವ ಜಗತ್ತಿಗೆ ನೀಡಿದ ಹೆಗ್ಗಳಿಕೆ ಹೊಂದಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಧ್ಯೇಯ ವಾಕ್ಯವಾಗಿದೆ ಎಂದರು.

ಪರಿಸರ ಮಾಲಿನ್ಯ ನಿಯಂತ್ರ ಮಂಡಳಿ ಮುಖ್ಯ ವೈಜ್ಞಾನಾಧಿಕಾರಿ ಬಾಲಗಂಗಾಧರ್‌ ಮಾತನಾಡಿ, ಪರಿಸರ ಕಲುಷಿತವಾಗುತ್ತಿದೆ. ಅಂತೆಯೇ ಮನಸ್ಸುಗಳು ಕಲುಷಿತಗೊಳ್ಳುತ್ತಿವೆ. ಪೂಜೆ, ಧ್ಯಾನದಿಂದ ಮನಸ್ಸು ಪರಿಶುದ್ಧಗೊಳ್ಳಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮನಸ್ಸು ಶುದ್ಧ ಮಾಡಿಕೊಳ್ಳಬೇಕು. ಜತೆಗೆ ಸುತ್ತಲಿನ ಪರಿಸರ ಮಾಲಿನ್ಯ ತಡೆಯುವುದೇ ಪ್ರತಿಯೊಬ್ಬರ ಜವಾಬ್ದಾರಿ. ದೇವಾಲಯ, ಕಲ್ಯಾಣಮಂಟಪ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಬೇಕು ಎಂದರು.

ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ರಾಜಾಪುರ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಮ್ಮಳಾಪುರ ಶ್ರೀಗಳು, ಬೆಳ್ಳಾವಿ ಶ್ರೀಗಳು, ನಾಗಾಲಾಪುರ ಶ್ರೀಗಳು, ದೇವೇಗೌಡನದೊಡ್ಡಿ ಮಠದ ಶ್ರೀಗಳು, ಅಂಕಲಸಿದ್ದೇಶ್ವರ ಮಠದ ಶ್ರೀಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜಯರಾಜ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಜೆ.ಪ್ರಸನ್ನಕುಮಾರ್‌, ಪುರಸಭಾ ಸದಸ್ಯೆ ಮಂಜುಳ ನೀಲಕಂಠಯ್ಯ, ಮುಖಂಡರಾದ ಎಚ್.ಎಸ್.ಬಸವರಾಜು, ಕೆ.ಎಸ್‌.ನಟರಾಜು, ಸಿ.ನಟರಾಜ್‌,ನಿರಂಜನ್‌, ಎಚ್.ಎಸ್.ನಂಜಪ್ಪ, ರುದ್ರಸ್ವಾಮಿ, ಮುನಿಯಪ್ಪ, ಆರ್‌.ಎಸ್‌.ಪ್ರಕಾಶ್‌, ಮರಿರಾಜು, ಪರಮಶಿವಯ್ಯ, ರಾಜಶೇಖರ್‌, ಶಶಿಕಲಾ ಮಲ್ಲಿಕಾರ್ಜುನ್‌ ಇದ್ದರು.

ಉಜ್ಜಯಿನಿ ಸ್ವಾಮೀಜಿ ಅವರನ್ನು ಜಾನಪದ ಕಲಾತಂಡಗಳು ಮತ್ತು ಮಂಗಳವಾದ್ಯ ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಲಾಯಿತು. ಉದ್ಘಾಟನೆ ಅಂಗವಾಗಿ ಗಣಪತಿ ಹೋಮ, ನವಗ್ರಹ ಹೋಮ, ರುದ್ರ ಹೋಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT