ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ಆಡಳಿತ ಸರ್ಕಾರದ ಆದ್ಯತೆ: ಸಚಿವ ಅಶೋಕ್

ದೇವನಹಳ್ಳಿಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅಭಿಮತ
Last Updated 26 ಜನವರಿ 2020, 14:29 IST
ಅಕ್ಷರ ಗಾತ್ರ

ದೇವನಹಳ್ಳಿ: ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ಸರ್ಕಾರದ ಪ್ರಥಮ ಆದ್ಯತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್‌ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದೇಶ ಸವಾಲು ಎದುರಿಸುತ್ತಲೇ ಪ್ರಗತಿಯತ್ತ ಹೆಜ್ಜೆ ಇಡುತ್ತಿದೆ. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವಾಗಲು ಎಲ್ಲ ರೀತಿಯಲ್ಲೂ ಪ್ರಗತಿ ಗುರಿ ಹೊಂದಿದೆ. ವಿಶ್ವದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ಗಣತಂತ್ರ ವ್ಯವಸ್ಥೆ ಭಾರತ ಹೊಂದಿರುವುದು ಹೆಮ್ಮೆ ವಿಚಾರ ಎಂದರು.

ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ, ಪ್ರಾಣಹಾನಿ, ಜಾನುವಾರು ಸಾವು ನೋವು ಆಗಿದೆ. ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ಪರಿಹಾರಾತ್ಮಕ ಕಾರ್ಯವನ್ನು ಸರ್ಕಾರ ನಡೆಸುತ್ತಿದೆ. ಕಂದಾಯ ಇಲಾಖೆ ವ್ಯಾಪ್ತಿಯ ಬೆಳೆ ನಷ್ಟಕ್ಕೆ ₹429 ಕೋಟಿ ಇತರೆ ಇಲಾಖೆಯಿಂದ ಮೂಲಸೌಲಭ್ಯಕ್ಕೆ ₹500ಕೋಟಿ, ಕೇಂದ್ರ ಸರ್ಕಾರದ ಬೆಳೆ ಪರಿಹಾರ ₹1200 ಕೋಟಿ, ರಸ್ತೆ, ಅಂಗನವಾಡಿ, ಶಾಲೆಗಳ ನಿರ್ಮಾಣಕ್ಕೆ ₹800 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ 1190 ಎಕರೆ ಜಮೀನು ಅಂಗನವಾಡಿ ಕಟ್ಟಡ, ಸರ್ಕಾರಿ ಶಾಲೆಗಳಿಗೆ ಮೀಸಲು ಇಡಲಾಗಿದೆ. ಜ.28ರಂದು ಬೆಂಗಳೂರು ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಹತ್ತು ಸಾವಿರ ಅರ್ಹರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಿವೇಶನ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಪ್ರಕಟಿಸಿದರು.

ರಾಜ್ಯದಲ್ಲಿ ಅನೇಕ ಕಡೆ ಸರ್ಕಾರಿ ಜಾಗ, ಕೆರೆಯಂಗಳ, ರಾಜಕಾಲುವೆ ಒತ್ತುವರಿ ಬಗ್ಗೆ ದೂರುಗಳು ಬಂದಿವೆ. ತೆರವುಗೊಳಿಸಲು ಬೋಪಯ್ಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ರೈತರಿಗೆ ಕೇಂದ್ರ ಸರ್ಕಾರ ₹6ಸಾವಿರ, ರಾಜ್ಯ ಸರ್ಕಾರ 4ಸಾವಿರ ಒಟ್ಟು ₹10ಸಾವಿರ ಪರಿಹಾರಾತ್ಮಕವಾಗಿ ನೇರ ಬ್ಯಾಂಕ್‌ ಖಾತೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಇದುವರೆಗೂ ₹3,341 ಕೋಟಿ ರೈತರಿಗೆ ಸಂದಾಯವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1021 ಕಂದಾಯ ಅದಾಲತ್‌ ಕಾರ್ಯಕ್ರಮ ನಡೆಸಲಾಗಿದ್ದು ಸಲ್ಲಿಕೆಯಾಗಿದ್ದ 22,252 ಅರ್ಜಿಗಳ ಪೈಕಿ 21,235 ವಿಲೇವಾರಿಯಾಗಿವೆ. ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸುವ ಕಾರ್ಯ ಕಳೆದ ವರ್ಷದಿಂದಲೇ ಆರಂಭಿಸಲಾಗಿದ್ದರೂ ಇದುವರೆಗೂ ರೈತರು ಬೆಳಸಿದ್ದ 5,763 ಎಕರೆ ಪ್ರದೇಶದಲ್ಲಿ ನೀಲಗಿರಿ ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀಲಗಿರಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ 1,39083 ಫಲಾನುಭವಿಗಳು ಮಾಸಾಶನ ಪಡೆಯುತ್ತಿದ್ದಾರೆ. ಮಾಸಾಶನಕ್ಕೆ ಅರ್ಜಿ ಸಲ್ಲಿಸಿ ಕಚೇರಿಗೆ ಅಲೆದಾಟ ತಪ್ಪಿಸಲು ಅಧಿಕಾರಿಗಳು ನೇರವಾಗಿ ಆಧಾರ್‌ ಕಾರ್ಡ್‌ ಪಡೆದು ಒಳಪಡಿಸುವ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಗ್ರಾಮಗಳಲ್ಲಿನ ಸಮಸ್ಯೆ ಅರಿತು ತಕ್ಷಣ ಪರಿಹರಿಸಲು ‘ಜನಸ್ನೇಹಿ ಜಿಲ್ಲಾಧಿಕಾರಿ ಮನೆ ಬಾಗಿಲಿಗೆ’ ಯೋಜನೆ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ. ಸಮಸ್ಯೆ ಹೊತ್ತು ಕಚೇರಿಗೆ ಬರಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಹೇಳಿದರು.

ಜಿಲ್ಲೆಯಲ್ಲಿ 3500 ವಸತಿ ನಿರ್ಮಾಣ ಗುರಿ ಇದೆ. ಈಪೈಕಿ 1240 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪಂಚಾಯತ್‌ ರಾಜ್‌ ಎಂನಿಯರಿಂಗ್‌ ವಿಭಾಗದಿಂದ 68 ಕೆರೆಗಳನ್ನು ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ. ಈಪೈಕಿ 48 ಕೆರೆಗಳನ್ನು ಒತ್ತುವರಿ ತೆರವುಗೊಳಿಸಲಾಗಿದೆ. 20ಕೆರೆಗಳ ಒತ್ತುವರಿ ಪ್ರಗತಿಯಲ್ಲಿದೆ. ಸರ್ಕಾರ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ,ಅನುಷ್ಟಾನ ಹಂತದಲ್ಲಿರುವ ಕಾಮಗಾರಿಗಳಿಗೆ ಅನುದಾನ ಸ್ಥಗಿತಗೊಳಿಸಲಾಗಿದೆ. ಸಾವಿರಾರು ಕುಟುಂಬಗಳಿಗೆ ನಿವೇಶನವಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಜಿಲ್ಲಾ ಕೇಂದ್ರ ಹೊಂದಿರುವ ತಾಲ್ಲೂಕು ಅಭಿವೃದ್ಧಿಗೆ ಕನಿಷ್ಠ ₹150ಕೋಟಿ ವಿಶೇಷ ಪ್ಯಾಕೇಜ್‌ ನೀಡಿ ಸರ್ಕಾರ ವಿವಿಧ ಯೋಜನೆಗಳಿಗೆ ಮುಂದಾಗಬೇಕಾಗಿದೆ ಎಂದು ಮನವಿ ಮಾಡಿದರು.

ಸಂಸದ ಬಿ.ಎನ್‌.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್‌, ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ, ಸಿಇಒ ಎನ್‌.ಎಂ.ನಾಗರಾಜ್‌, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ಕೆ.ನಾಯ್ಕ್‌, ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ರವಿ.ಡಿ.ಚನ್ನಣ್ಣನವರ್, ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT