ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡಿ

7
ಹಲವು ಸೌಲಭ್ಯಗಳಿಗೆ ಒತ್ತಾಯಿಸಿ ದಸಂಸ ಪ್ರತಿಭಟನೆ

ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ನೀಡಿ

Published:
Updated:
Prajavani

ದೇವನಹಳ್ಳಿ: ದಲಿತರ ಹಲವು ಸೌಲಭ್ಯಗಳ ಜಾರಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಸಂಚಾಲಕ ಡಿ.ಸಿ.ಅಂಬರೀಷ್ ಮಾತನಾಡಿ, ಪಿಟಿಸಿಎಲ್ ಕಾಯ್ದೆ ವಿರುದ್ಧವಾಗಿ ಸುಪ್ರೀಂಕೋರ್ಟ್‌ ನೀಡಿರುವ ಆದೇಶಕ್ಕೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ತಂದು ಮೇಲ್ಮನವಿ ಸಲ್ಲಿಸಬೇಕು. ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಭೂ ಮಂಜೂರಾತಿ ಕಾಯ್ದೆ 1969ರ ಪ್ರಕಾರ ಪರಿಶಿಷ್ಟರಿಗೆ ಶೇ50 ರಷ್ಟು ಭೂಮಿಯನ್ನು ಈಗ ಹಾಲಿ ವಿಲೆ ಇರುವ ಭೂಮಿಯಲ್ಲಿ ಕಾಯ್ದಿರಿಸಿ ಮಂಜೂರಾತಿ ನೀಡಬೇಕು. ಪ್ರತಿ ಗ್ರಾಮಗಳಲ್ಲಿ ಅರ್ಹರನ್ನು ಗುರುತಿಸಿ ನಿವೇಶನ ಮತ್ತು ವಸತಿ ನೀಡಬೇಕು. ಸ್ಮಶಾನ ಅಭಿವೃದ್ಧಿ ಪಡಿಸಬೇಕು. ಸರ್ಕಾರಿ ಇಲಾಖೆಯಲ್ಲಿ ಮೀಸಲಾತಿ ಇರುವಂತೆ ಖಾಸಗಿ ಕ್ಷೇತ್ರದಲ್ಲಿಯೂ ಸರ್ಕಾರ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನ ಭೈರದೇನಹಳ್ಳಿ ಸ.ನಂ32ರಲ್ಲಿ ಸರ್ಕಾರಿ ಜಮೀನು 5 ಎಕರೆ, ಗೊಡ್ಲುಮುದ್ದೇನಹಳ್ಳಿ ಗೋಮಾಳ ಜಮೀನು, ಪುರ ಗ್ರಾಮದ ಸ.ನಂ.11ಪಿ.1ರಲ್ಲಿ 5 ಎಕರೆ ಜಮೀನು ಇದೆ. ಇದನ್ನು ವಸತಿ ವಂಚಿದ ದಲಿತರಿಗೆ ನೀಡಬೇಕೆಂದು ಒತ್ತಾಯಿಸಿದರು

ಸಾವಕನಹಳ್ಳಿ ಗ್ರಾಮದ ಸ.ನಂ.42/1 ರಲ್ಲಿ 2.16 ಎಕರೆ ಜಮೀನು ಒತ್ತುವರಿಯಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅರ್ಹರಿಗೆ ನಿವೇಶನ ನೀಡಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸಲು ಇಲಾಖೆ ಟೆಂಡರ್ ಮೂಲಕ ದುಪ್ಪಟು ಹಣ ಪಡೆದು ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದೆ. ಇಲಾಖೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಗೋವಿಂದರಾಜು, ದೇವರಾಜು, ಮುನಿರಾಜು, ಸುರೇಶ್, ಆನಂದ್, ಮಣಿಕಂಠ, ಶೇಖರ್, ಜಿಲ್ಲಾ ಖಜಾಂಚಿ ರಾಜಪ್ಪ, ತಾಲ್ಲೂಕು ಸಂಚಾಲಕರಾದ ನರಸಿಂಹಯ್ಯ, ಎ.ಜಗದೀಶ್, ರಾಮಕೃಷ್ಣಪ್ಪ, ಸಿ.ಆನಂದ್, ಶ್ರೀನಿವಾಸ್, ದೊಡ್ಡರಂಗಪ್ಪ, ನಾಗಾರ್ಜುನ, ವೆಂಕಟೇಶಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !