ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದನೆ’

ಎಸ್ಪಿಗೆ ವಿಜಯಪುರದವರಿಂದ ಹಲವು ಅಹವಾಲು ಸಲ್ಲಿಕೆ
Last Updated 13 ಜೂನ್ 2019, 14:28 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ಗುರುವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಜೀತ್.ವಿ.ಜೆ ಅವರು ಜನರಿಂದ ಕುಂದುಕೊರತೆಗಳ ಕುರಿತು ಅಹವಾಲು ಸ್ವೀಕರಿಸಿದರು.

ಚಿಕ್ಕಮಕ್ಕಳು ಸೆಲ್ಯೂಷನ್, ವೈಟ್‌ನಾರ್ ಬಳಕೆ ಮಾಡಿಕೊಂಡು ಡ್ರಗ್ಸ್‌ಗೆ ದಾಸರಾಗುತ್ತಿದ್ದಾರೆ. ನಗರದಲ್ಲಿ ಬೈಕ್ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವು ಸ್ಕೂಟರ್‌ಗಳ ಸೈಲೆನ್ಸರ್‌ ತೆಗಿಸಿ ಹೆಚ್ಚು ಶಬ್ದವುಂಟಾಗುವಂತೆ ವಾಹನಗಳನ್ನು ಚಾಲನೆ ಮಾಡುತ್ತಾರೆ. ಶಾಲಾ ಕಾಲೇಜುಗಳು ಬಿಟ್ಟಾಗ ಸಾಕಷ್ಟು ಮಂದಿ ಯುವಕರು ಹೆಣ್ಣು ಮಕ್ಕಳನ್ನು ರೇಗಿಸುವುದು, ಅವರನ್ನು ಹಿಂಬಾಲಿಸುವುದನ್ನು ಮಾಡುತ್ತಾರೆ ಎಂದರು.

ಆಟದ ಮೈದಾನವು ರಾತ್ರಿ 8 ಗಂಟೆಯ ನಂತರ ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗುತ್ತಿದೆ. ಕುಡಿದು ಬಾಟಲಿಗಳನ್ನು ಬಿಸಾಕಿರುತ್ತಾರೆ. ಪಾದಚಾರಿಗಳು ಸಾಕಷ್ಟು ಮಂದಿ ವಾಯುವಿಹಾರಕ್ಕೆ ತೆರಳಿದಾಗ ಗಾಯಗೊಂಡಿದ್ದಾರೆ. ಮನೆಗಳ ಬಳಿಯಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಬಳಿಯಲ್ಲಿ ವಿನಾಕಾರಣ ಕುಡಿದು ಗಲಾಟೆ ಮಾಡುತ್ತಿರುತ್ತಾರೆ. ಇದನ್ನು ತಪ್ಪಿಸಿ, ಹಳ್ಳಿಗಳಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ. ಈ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟರೂ ಅವರು ಬರುವ ಮುನ್ನಾ ದೂರವಾಣಿ ಕರೆ ಮಾಡಿ ಬರುತ್ತಾರೆ. ಅಷ್ಟರಲ್ಲಿ ಮದ್ಯವನ್ನು ಬೇರೆಡೆ ಶೇಖರಣೆ ಮಾಡಿರುತ್ತಾರೆ. ಆಗ ಅವರು ಬಂದು ವಾಪಸ್‌ ಹೋಗುತ್ತಾರೆ.

ನಗರದ ರಾಜೀವ್‌ನಗರಕ್ಕೆ ಯಾವಾಗ ಬೀಟ್ ಪೊಲೀಸ್ ಬರ‍್ತಾರೆ ಎನ್ನುವ ಮಾಹಿತಿಯಿಲ್ಲ. ಪ್ರಮುಖ ವೃತ್ತಗಳಲ್ಲಿರುವ ವಾಣಿಜ್ಯ ಮಳಿಗೆಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಅಪರಾಧ ಕೃತ್ಯಗಳನ್ನು ತಡೆಗಟ್ಟಬೇಕು. ಬೆಳಿಗ್ಗೆ 6 ಗಂಟೆಗೆ ಬಾರುಗಳನ್ನು ತೆರೆಯುತ್ತಾರೆ. ಕಾರ್ಮಿಕರು ಬೆಳಿಗ್ಗೆ ಪಾನಮತ್ತರಾಗುವುದರಿಂದ ಯಾರೂ ಕೆಲಸಕ್ಕೆ ಬರಲ್ಲ ಎಂದಿದ್ದಾರೆ.

ಇಲ್ಲಿನ ಜೂನಿಯರ್ ಕಾಲೇಜಿನ ಸಮೀಪದ ಹೆಣ್ಣು ಮಕ್ಕಳ ಶಾಲೆಯ ಬಳಿಯಲ್ಲಿ ಯುವಕರಿಗೆ ಕಡಿವಾಣ ಹಾಕುವವರು ಇಲ್ಲದಂತಾಗಿರುವುದರಿಂದ ಕುಡಿದು ಬಾಟಲಿಗಳನ್ನು ಅಲ್ಲೆ ಬಿಸಾಡಿ ಹೋಗಿರುತ್ತಾರೆ. ಬೆಳಿಗ್ಗೆ ವಿದ್ಯಾರ್ಥಿಗಳು ಬಂದು ಅವುಗಳನ್ನು ಸ್ವಚ್ಛ ಮಾಡಬೇಕು. ಪೊಲೀಸರು ಸಾರ್ವಜನಿಕರನ್ನು ಸೇರಿಸಿಕೊಂಡು ವಾಟ್ಸಪ್ ಗ್ರೂಪ್ ಮಾಡಿದರೆ ಜನರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲಿಕ್ಕೆ ಅನುಕೂಲವಾಗಲಿದೆ. ನಗರದಲ್ಲಿ ಏಕಮುಖ ರಸ್ತೆ ಸಂಚಾರ ಮಾಡಿದರೆ ಉತ್ತಮವಾಗುತ್ತದೆ. ಸರ್ಕಾರಿ ಆಸ್ಪತ್ರೆ ಬಳಿ ಡಿ.ವಿ.ಡಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಡಿ ಎಂದು ಕನಕರಾಜು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠ ಮಾತನಾಡಿ, ಖಾಸಗಿ ಬಸ್‌ಗಳ ಬಗ್ಗೆ ವಿಶೇಷವಾಗಿ ಬದಲಾವಣೆಗಳಾಗಲಿದೆ. ನಿಯಮ ಮೀರಿ ನಡೆಯುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳು ವೈಟ್‌ನಾರ್ ಬಳಕೆ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಪುಸ್ತಕ ಮಳಿಗೆಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ಟ್ರಾಫಿಕ್ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನಗರದಲ್ಲಿನ ರಸ್ತೆಗಳನ್ನು ಸರ್ವೆ ಮಾಡಿ ಕಿರಿದಾದ ರಸ್ತೆಗಳನ್ನು ಗುರುತಿಸಿ ಪಾರ್ಕಿಂಗ್, ಸಂಚಾರದ ಕುರಿತು ವರದಿ ತಯಾರಿಸಿ ಅನುಷ್ಠಾನಗೊಳಿಸಬೇಕು, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕಾಲೇಜು ಆವರಣಗಳಲ್ಲಿ ಕುಡಿತಕ್ಕೆ ಇವತ್ತಿನಿಂದಲೇ ಕಡಿವಾಣ ಹಾಕಲಾಗುತ್ತದೆ. ಹೆಣ್ಣು ಮಕ್ಕಳನ್ನು ಚುಡಾಯಿಸುವವರ ಬಗ್ಗೆ ನಿಗಾವಹಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬೆಳಿಗ್ಗೆ 10 ಗಂಟೆಯವರೆಗೂ ಮದ್ಯದ ಅಂಗಡಿ ತೆರೆಯುವಂತಿಲ್ಲ. ಗೂಡ್ಸ್ ವಾಹನಗಳಲ್ಲಿ ಜನರ ಸಾಗಾಣಿಕೆಗೆ ಅವಕಾಶ ಕೊಡಲ್ಲ. ಸೀಟ್ ವಾಹನಗಳಿಗೆ ಮಾತ್ರ ಅವಕಾಶವಿದೆ. ಸಂಚಾರಿ ನಿಯಮಗಳನ್ನು ಪಾಲನೆ ಮಾಡಲೇಬೇಕು. ಪುರಸಭೆಯ ಮೂಲಕ ಟ್ರಾಫಿಕ್ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾಗಳನ್ನು ಹಾಕಿದ್ದೇವೆ. ಜಿಲ್ಲೆಯ ಹಲವು ಕಡೆ ಮಾಡಿದ್ದೇವೆ. ಇಲ್ಲೂ ಮಾಡ್ತೇವೆ ಎಂದರು.

ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್, ಸಬ್‌ ಇನ್‌ಸ್ಪೆಕ್ಟರ್‌ಗಳಾದ ನರೇಶ್‌ ನಾಯಕ್, ಮಂಜುನಾಥ್, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ, ನಾಯಕ್, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT