ಸೋಮವಾರ, ಆಗಸ್ಟ್ 19, 2019
21 °C

 ₹ 65 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ

Published:
Updated:
Prajavani

ಕನಸವಾಡಿ (ದೊಡ್ಡಬಳ್ಳಾಪುರ): ತಾಲ್ಲೂಕಿನ ನೆಲಮಂಗಲ ಗಡಿಯಿಂದ ಕನಸವಾಡಿ, ಕೋಡಿಪಾಳ್ಯ ಮೂಲಕ ಬೆಂಗಳೂರು ಉತ್ತರ ತಾಲ್ಲೂಕಿನ ಗಡಿವರೆಗಿನ ₹ 65 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಟಿ.ವೆಂಕಟರಮಣಯ್ಯ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ‘ನೆಲಮಂಗಲದಿಂದ ರಾಜಾನುಕುಂಟೆವರೆಗಿನ ರಸ್ತೆ ಅಭಿವೃದ್ಧಿಗೆ ₹ 450 ಕೋಟಿಗಳನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯೋಜನೆ ಒಪ್ಪಿಗೆ ಪಡೆದು ಮಂಜೂರಾತಿ ದೊರೆತಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿ ಈಗ ಕಾಮಗಾರಿ ಆರಂಭಿಸಲಾಗಿದೆ. ಈ ರಸ್ತೆ ನಿರ್ಮಾಣದಿಂದ ಈ ಭಾಗದಲ್ಲಿ ಅಭಿವೃದ್ಧಿಗೆ ವೇಗ ದೊರೆಯಲಿದೆ. ತುಮಕೂರು ಮೂಲಕ ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಗುವ ವಾಹನಗಳು ವಿಮಾನ ನಿಲ್ದಾಣ, ಚೆನ್ನೈ ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ’ ಎಂದರು.

‘ವಿಮಾನ ನಿಲ್ದಾಣ ಹತ್ತಿರ ಇದೆ ಎನ್ನುವ ಕಾರಣಕ್ಕಾಗಿ ಈಗಾಗಲೇ ನೆಲಮಂಗಲ ತಾಲ್ಲೂಕಿನ ಹಾಗೂ ಕನಸವಾಡಿ ಹೋಬಳಿಯಲ್ಲಿ ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಗೋದಾಮುಗಳನ್ನು ನಿರ್ಮಿಸುತ್ತಿವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲು ಸಹಕಾರಿಯಾಗುತ್ತದೆ’ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್‌, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬೈರೇಗೌಡ, ಎಪಿಎಂಪಿ ನಿರ್ದೇಶಕ ಮಂಜುನಾಥ್‌, ಕೆಪಿಸಿಸಿ ಸದಸ್ಯ ಆರ್‌. ಜಿ.ವೆಂಕಟಾಚಲಯ್ಯ, ಎಂ.ಜಿ.ಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಚನ್ನಮ್ಮರಾಮಲಿಂಗಯ್ಯ, ಜಿ.ಶಂಕರಪ್ಪ, ಮುಖಂಡರಾದ ಆರ್‌.ದಯಾನಂದಸ್ವಾಮಿ, ಆರ್‌.ವಿ.ಗೌಡ, ವಿಜಯಕುಮಾರ್‌ ಇದ್ದರು.

Post Comments (+)