ಸೋಮವಾರ, ನವೆಂಬರ್ 18, 2019
23 °C
ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸ್ಥಳೀಯರ ಆಕ್ರೋಶ

‘ಟೋಲ್‌ಗೇಟ್ ಬಳಿ ರಸ್ತೆ ದುರಸ್ತಿಯಾಗಲಿ’

Published:
Updated:
Prajavani

ವಿಜಯಪುರ: ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿಗಳ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿನ ರಸ್ತೆಗಳನ್ನು ನಿರ್ಲಕ್ಷ್ಯ ಮಾಡಿರುವುದರ ಪರಿಣಾಮ ಜನರು ಸಂಕಷ್ಟ ಎದುರಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿ ದೇವರಾಜು ಆರೋಪಿಸಿದರು.

‘ಯಾವುದೇ ವಾಹನ ಖರೀದಿ ಮಾಡಿದರೂ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸುವಾಗ ರಸ್ತೆ ತೆರಿಗೆ ಕಟ್ಟಿಸಿಕೊಳ್ಳುತ್ತಾರೆ. ನಮ್ಮಿಂದ ತೆರಿಗೆ ಕಟ್ಟಿಸಿಕೊಂಡ ಮೇಲೆ ಜನರ ಸಂಚಾರಕ್ಕೆ ಅನುಕೂಲಕರವಾಗಿರುವಂತೆ ರಸ್ತೆ ನಿರ್ಮಾಣ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದ್ದರೂ, ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆಯಿಂದ ಹೆಚ್ಚು ವಾಹನಗಳ ಸಂಚಾರವಿರುವ ರಸ್ತೆಗಳನ್ನು ಸರಿಪಡಿಸಲಿಕ್ಕೆ ಅವರಿಂದ ಸಾಧ್ಯವಾಗುತ್ತಿಲ್ಲ. ಇವರ ಬೇಜವಾಬ್ದಾರಿತನಕ್ಕೆ ಅಮಾಯಕರು ಬಲಿಯಾಗುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಅನ್ಸರ್‌ಪಾಷ ಮಾತನಾಡಿ, ‘ಇಲ್ಲಿನ ದೇವನಹಳ್ಳಿ ರಸ್ತೆಯಲ್ಲಿರುವ ಟೋಲ್‌ಗೇಟ್ ಸಮೀಪದಲ್ಲಿ ಮುಖ್ಯ ರಸ್ತೆಯಲ್ಲೆ ಮಳೆಯ ನೀರು ನಿಲ್ಲುತ್ತಿರುವ ಕಾರಣದಿಂದಾಗಿ ರಸ್ತೆ ತೀರಾ ಹದಗೆಟ್ಟಿದ್ದು ಕೂಡಲೇ ದುರಸ್ತಿ ಮಾಡಬೇಕು. ಇದು ಬೆಂಗಳೂರಿನಿಂದ ಶಿಡ್ಲಘಟ್ಟ, ಕೋಲಾರದ ಕಡೆಗೆ ಸಂಚರಿಸುವ ಮುಖ್ಯ ರಸ್ತೆಯಾಗಿದೆ. ದಿನನಿತ್ಯ ಈ ರಸ್ತೆ ಟ್ರಾಫಿಕ್‌ನಿಂದ ಕೂಡಿರುತ್ತದೆ’ ಎಂದರು.

‘ನಡುರಸ್ತೆಯಲ್ಲಿ ಮಳೆಯ ನೀರು ನಿಂತಿರುವ ಕಾರಣ, ವಾಹನ ಸವಾರರು ಸರಿಯಾದ ರಸ್ತೆ ಗುರುತಿಸಿ ಮುಂದೆ ಸಾಗಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಮಂದಿ ರಸ್ತೆಯಲ್ಲಿನ ಹಳ್ಳಗಳು ಗುರುತಿಸಲಾಗದೆ ಗುಂಡಿಗಳಿಗೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳು ನಡೆದಿವೆ’ ಎಂದರು.

ಮುಖಂಡ ಮುತ್ತುಮಣಿ ಮಾತನಾಡಿ, ‘ಮಳೆಯ ನೀರನ್ನು ರಸ್ತೆಯ ಪಕ್ಕದಲ್ಲಿರುವ ಮೋರಿಯ ಮೂಲಕ ಕಾಲುವೆಯಲ್ಲಿ ಹರಿದುಹೋಗಲು ಅವಕಾಶ ಮಾಡಿ ಎಂದು ಪುರಸಭೆಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಶಾಸಕರು, ಎಲ್ಲರಿಗೂ ಕೇಳಿಕೊಂಡಿದ್ದೇವೆ. ಇದುವರೆಗೂ ಒಬ್ಬರೂ ಈ ಕಡಗೆ ಗಮನಹರಿಸಿಲ್ಲ. ಈ ರಸ್ತೆಯುದ್ಧಕ್ಕೂ ಅಲ್ಲಲ್ಲಿ ಗುಂಡಿಗಳಿವೆ. ಅವುಗಳನ್ನೂ ಮುಚ್ಚಬೇಕು’ ಎಂದು ಒತ್ತಾಯಿಸಿದರು.

ಕೆ.ಮಂಜುನಾಥ್ ಮಾತನಾಡಿ, ‘ಪುರಸಭೆಯವರು ಈ ರಸ್ತೆ ನಮಗೆ ಸಂಬಂಧಿಸಿದ್ದಲ್ಲ ಎಂದು ಹೇಳುತ್ತಾರೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಕಡೆಗೆ ಗಮನಹರಿಸುವುದೇ ಇಲ್ಲ. ವೇಗವಾಗಿ ಬರುವ ಲಾರಿಗಳು, ಬಸ್ಸುಗಳಿಂದ ಕೆಸರು ನೀರೆಲ್ಲವೂ ಸಮೀಪದ ಅಂಗಡಿಗಳ ಒಳಗೆ ಚಿಮ್ಮುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಗಮನಹರಿಸಿ ರಸ್ತೆ ದುರಸ್ತಿಗೊಳಿಸಿ ಇಲ್ಲಿ ನೀರು ನಿಲ್ಲದಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

 

ಪ್ರತಿಕ್ರಿಯಿಸಿ (+)