ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ ತಂತ್ರಜ್ಞಾನ ಅಭಿವೃದ್ಧಿಗೆ ರಹದಾರಿ

ಆನೇಕಲ್‌ ಹಸಿರು ಮನೆಯಲ್ಲಿ ಹೂ–ತರಕಾರಿ ಬೆಳೆ ಕುರಿತ ವಿಚಾರ ಸಂಕಿರಣ
Last Updated 8 ಸೆಪ್ಟೆಂಬರ್ 2022, 7:23 IST
ಅಕ್ಷರ ಗಾತ್ರ

ಆನೇಕಲ್:‘ತೋಟಗಾರಿಕೆಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡು ಲಾಭದಾಯಕ ಬೆಳೆ ಬೆಳೆಯಲು ತಾಲ್ಲೂಕಿನಲ್ಲಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಸುಮಾರು 800 ಎಕರೆ ಪ್ರದೇಶದಲ್ಲಿ ಹಸಿರು ಮನೆ ನಿರ್ಮಿಸಿ ರೈತರು ಹೂವು, ತರಕಾರಿ ಬೆಳೆಯುತ್ತಿದ್ದಾರೆ. ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕು’ ಎಂದುತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಆರ್‌. ದೇವರಾಜು ಸಲಹೆ ನೀಡಿದರು.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ತೋಟಗಾರಿಕಾ ಇಲಾಖೆ ಮತ್ತು ಆನೇಕಲ್‌ ತಾಲ್ಲೂಕು ಹಸಿರುಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ನಡೆದ ಹಸಿರು ಮನೆಯಲ್ಲಿ ಹೂ ಮತ್ತು ತರಕಾರಿ ಬೆಳೆಗಳ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ರೈತರು ಆದಾಯ ಹೆಚ್ಚಳ ಮಾಡಲು ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಈ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ರೈತರಿಗೆ ತರಬೇತಿ, ಮಾರ್ಗದರ್ಶನ ಮತ್ತು ನೆರವು ನೀಡುವ ಕಾರ್ಯಕ್ರಮಗಳನ್ನು ಇಲಾಖೆ ರೂಪಿಸಿದೆ ಎಂದರು.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಸಿ. ಅಶ್ವಥ್‌ ಮಾತನಾಡಿ, ತೋಟಗಾರಿಕೆಯಲ್ಲಿ ರಫ್ತು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರೈತರು ವೈಜ್ಞಾನಿಕ ಕೃಷಿ ವಿಧಾನ ಅಳವಡಿಸಿಕೊಳ್ಳಬೇಕು. ಗುಣಮಟ್ಟದ ಬೆಳೆ ಬೆಳೆದರೆ ರಫ್ತು ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ರೈತರ ಅನುಭವ ಅತ್ಯಂತ ಪ್ರಮುಖವಾದುದು. ಪ್ರತಿಯೊಬ್ಬ ರೈತನಲ್ಲೂ ಕೃಷಿ ವಿಜ್ಞಾನಿ ಇರುತ್ತಾನೆ. ಹಾಗಾಗಿ, ರೈತರೇ ತಮ್ಮ ಅನುಭವದ ಆಧಾರದ ಮೇಲೆ ಪ್ರಯೋಗ ಮಾಡುವ ಮೂಲಕ ತಮ್ಮದೇ ಆದ ಬ್ರ್ಯಾಂಡ್‌ ರೂಪಿಸಬೇಕು ಎಂದು ಹೇಳಿದರು.

ರೈತರು ಬೆಳೆಗಳನ್ನು ಬೆಳೆಯುವುದರ ಜೊತೆಗೆ ಮಾರುಕಟ್ಟೆ ಸೃಷ್ಟಿ ಮಾಡಬೇಕು. ಗ್ರಾಹಕರು ರೈತರ ಉತ್ಪನ್ನಗಳನ್ನು ಹುಡುಕಿಕೊಂಡು ಬರವಂತಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಯಿದೆ. ಹಾಗಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪುವ ನಿಟ್ಟಿನಲ್ಲಿ ಫಸಲು ಬೆಳೆಯಬೇಕು ಎಂದರು.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಹಲವಾರು ಸಂಶೋಧನೆ ಕೈಗೊಂಡಿದೆ. ಸಂಶೋಧನೆಗಳ ಫಲ ರೈತರಿಗೆ ತಲುಪಬೇಕು. ಹಾಗಾಗಿ, ರೈತರು ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆಯಲು ಅವಕಾಶವಿದೆ. ಇದನ್ನು ಬಳಸಿಕೊಳ್ಳಬೇಕು ಎಂದರು.

ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಣ್ಣ ಮಾತನಾಡಿ, ತಾಲ್ಲೂಕಿನ ಸಿಂಗೇನಅಗ್ರಹಾರ ಮಾರುಕಟ್ಟೆ ಬಳಿ ಹೂವಿನ ಮಾರಾಟಕ್ಕಾಗಿ 10 ಎಕರೆ ಜಮೀನನ್ನು ನೀಡಬೇಕು. ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಿಸಬೇಕು. ಇದರಿಂದ ಆಂಧ್ರಪ್ರದೇಶ, ತಮಿಳುನಾಡು ಮತ್ತು ರಾಜ್ಯದ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಪ್ಲಾಸ್ಟಿಕ್‌ ಹೂವುಗಳ ಹಾವಳಿಯಿಂದ ಜರ್ಬೇರಾ ಸೇರಿದಂತೆ ವಿವಿಧ ನೈಸರ್ಗಿಕ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ, ಪ್ಲಾಸ್ಟಿಕ್‌ ಹೂವುಗಳನ್ನು ನಿಷೇಧ ಮಾಡಬೇಕು. ಇದರಿಂದ ರೈತರ ಹೂವಿನ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂದರು.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ತೇಜಸ್ವಿನಿ ಪ್ರಕಾಶ್‌ ‘ಸಂರಕ್ಷಿತ ಬೇಸಾಯದಡಿ ಗುಲಾಬಿ ಮತ್ತು ಕಾರ್ನೇಷನ್‌ ಬೆಳೆ’, ಡಾ.ಶಂಕರ್‌ ಹೆಬ್ಬಾರ್‌ ಅವರು ‘ಸಂರಕ್ಷಿತ ಬೇಸಾಯದಡಿ ದಪ್ಪ ಮೆಣಸಿನಕಾಯಿ’, ಡಾ.ಬಾಲಕೃಷ್ಣ ಅವರು ‘ಗುಣಮಟ್ಟ ಮತ್ತು ಮಾರುಕಟ್ಟೆ, ದಪ್ಪ ಮೆಣಸಿನಕಾಯಿ’ ವಿಷಯ ಕುರಿತು ವಿಚಾರ ಮಂಡಿಸಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪ್ರಗತಿಪರ ರೈತ ದೊಡ್ಡಹಾಗಡೆ ಹರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT