ಸೋಮವಾರ, ಅಕ್ಟೋಬರ್ 21, 2019
24 °C

ಪ್ರಗತಿಯಲ್ಲಿ ಯೌವನಸ್ಥರ ಪಾತ್ರ ಮಹತ್ತರ

Published:
Updated:
Prajavani

ವಿಜಯಪುರ: ‘ವಿಶ್ವಗುರುವಾಗುವತ್ತ ಸಾಗುತ್ತಿರುವ ಭಾರತ ದೇಶವನ್ನು ಸದೃಢಗೊಳಿಸುವಲ್ಲಿ ಯುವಜನರ ಪಾತ್ರ ಮತ್ತು ತೊಡಗಿಸಿಕೊಳ್ಳುವಿಕೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಯುವಕರನ್ನು ಸಂಘಟಿಸಬೇಕಾಗಿರುವ ಅನಿವಾರ್ಯತೆ ಇದೆ’ ಎಂದು ಕಣ್ಣೀರಿನ ಮೊರೆಗಳು ಖ್ಯಾತಿಯ ಪಾಸ್ಟರ್ ಕಾಳಾನಾಯಕ್ ಹೇಳಿದರು.

ಹೋಬಳಿಯ ಚಂದೇನಹಳ್ಳಿ ಗೇಟ್‌ನಲ್ಲಿರುವ ಯೇಸು ಪ್ರೇಮಾಲಯ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಆಯೋಜಿಸಿದ್ದ ಯೌವನಸ್ಥರ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತ ಯುವದೇಶವಾಗಿದ್ದು ದೇಶದ ಭವಿಷ್ಯ ಯುವಜನತೆಯ ಮೇಲೆ ನಿಂತಿದೆ. ವಿಶ್ವ ಶ್ರೇಷ್ಠ ಭಾರತವನ್ನು ನಿರ್ಮಿಸುವಲ್ಲಿ ಯುವಜನತೆಯ ಜವಾಬ್ದಾರಿ ಮಹತ್ತರವಾದುದಾಗಿದೆ. ದುಶ್ಚಟಗಳನ್ನು ಬಿಟ್ಟು ಆದ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯುವುದು ಅನಿವಾರ್ಯವಾಗಿದೆ ಎಂದರು.

ಜಾತಿ, ಧರ್ಮ, ಮತಕ್ಕಿಂತ ಮಾನನಧರ್ಮ ಪಾಲನೆಯಾಗಬೇಕಾಗಿದೆ. ಇಂತಹ ಉತ್ತಮ ಕಾರ್ಯಗಳಿಗಾಗಿ ಯುವಜನರನ್ನು ಸಜ್ಜುಗೊಳಿಸಬೇಕಾಗಿದೆ ಎಂದರು.

ಪಾಸ್ಟರ್.ವಿ.ನಾಗರಾಜ್ ಮಾತನಾಡಿ, ’ಭವಿಷ್ಯದ ಸಿದ್ಧತೆಗಾಗಿ ಯುವಪೀಳಿಗೆಯೊಂದಿಗೆ ಯಾವುದೇ ಸಂವಾದ ನಡೆದರೂ, ಅವುಗಳಿಂದ ಒಂದಲ್ಲ ಒಂದು ಅಂಶ ಕಲಿಯುವುದಕ್ಕೆ ದೊರಕುತ್ತದೆ’ ಎಂದರು.

’ಆದ್ದರಿಂದಲೇ ನಾನು ಯುವಕರನ್ನು ಹೆಚ್ಚು ಹೆಚ್ಚು ಭೇಟಿ ಮಾಡಲು, ಅವರೊಂದಿಗೆ ಮಾತನಾಡಲು, ಅವರ ಅನುಭವಗಳನ್ನು ಕೇಳಲು ಸಾಧ್ಯವಾದಷ್ಟೂ ಪ್ರಯತ್ನ ಮಾಡಬೇಕಾಗಿದೆ. ಅವರ ಆಶೋತ್ತರಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಲು ನಿರಂತರವಾಗಿ ಪ್ರಯತ್ನ’ ಎಂದರು.

ಪಾಸ್ಟರ್ ವಿ. ಸತ್ಯನಾರಾಯಣಪ್ಪ ಮಾತನಾಡಿ, ಭಾರತದಲ್ಲಿ ನೈತಿಕಶಕ್ತಿ ವೃದ್ಧಿಯಾಗಲು ಯುವಕ, ಯುವತಿಯರು, ಭವಿಷ್ಯ ಭಾರತದ ಭರವಸೆಗಳಾಗಬೇಕು. ಭಾರತವನ್ನು ಪ್ರಪಂಚದ ಅಗ್ರಮಾನ್ಯ ದೇಶವನ್ನಾಗಿ ಮಾಡುವ ಜವಾಬ್ದಾರಿ ಅವರ ಮೇಲಿದೆ ಎಂದರು.

ಯೌವನಸ್ಥರಿಂದ ಆರಾಧನಾ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಯುವಕ ಯುವತಿಯರು ಈ ಕೂಟದಲ್ಲಿ ಭಾಗವಹಿಸಿದ್ದರು. ಪಾಸ್ಟರ್‌ಗಳಾದ ಬಳುವನಹಳ್ಳಿ ಮೂರ್ತಿ, ಪ್ರೇಮ್‌ಕುಮಾರ್, ಶಂಕರಪ್ಪ, ಮಳ್ಳೂರು ಮೂರ್ತಿ, ಶ್ರೀನಿವಾಸ್ ಇದ್ದರು.

Post Comments (+)