ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿ ಚೀಟಿ ವಿತರಣೆ ದಾಖಲೆ ನೀಡಿ: ಪಿಳ್ಳಮುನಿಶಾಮಪ್ಪ

Last Updated 23 ಜುಲೈ 2020, 14:52 IST
ಅಕ್ಷರ ಗಾತ್ರ

ವಿಜಯಪುರ: ದೇವನಹಳ್ಳಿ ತಾಲ್ಲೂಕಿನಲ್ಲಿ 6 ಸಾವಿರ ಸಾಗುವಳಿ ಹಕ್ಕುಪತ್ರಗಳನ್ನು ಶಾಸಕರು ವಿತರಣೆ ಮಾಡಿದ್ದಾರೆ ಎಂದು ಪಕ್ಷದ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಅವರ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಚೀಟಿ ವಿತರಣೆ ಮಾಡಿದ್ದರೆ ಶಾಸಕರು ತಾಲ್ಲೂಕಿನ ಜನತೆಯ ಮುಂದೆ ದಾಖಲೆಗಳ ಸಮೇತ ಸಾಬೀತು ಪಡಿಸಲಿ ಎಂದು ಜೆಡಿಎಸ್ ಮುಖಂಡ ಪಿಳ್ಳಮುನಿಶಾಮಪ್ಪ ಒತ್ತಾಯಿಸಿದ್ದಾರೆ.

ಇಲ್ಲಿ ಮಾತನಾಡಿದ ಅವರು, ‘ನಾನು ಶಾಸಕನಾಗಿದ್ದಾಗ, ದೇವನಹಳ್ಳಿ ತಾಲ್ಲೂಕಿನಲ್ಲಿ 58 ಸಾಗುವಳಿ ಚೀಟಿ ವಿತರಣೆ ಮಾಡಿದ್ದೆ. ತೂಬಗೆರೆ ಹೋಬಳಿಯಲ್ಲಿ 278 ಮಂದಿಗೆ ಸಾಗುವಳಿ ಚೀಟಿ ವಿತರಣೆ ಮಾಡಿದ್ದೆ. ಪಟ್ಟಣ ಪ್ರದೇಶಗಳ ಸುತ್ತಮುತ್ತಲಿನಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ದರಖಾಸ್ತು ಮೂಲಕ ಭೂಮಿ ಮಂಜೂರಾತಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ 6 ಸಾವಿರ ಸಾಗುವಳಿ ಚೀಟಿ ವಿತರಣೆ ಮಾಡಿದ್ದಾರೆ ಎಂದು ಕಾರ್ಯಕರ್ತರು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ.

‘ಅಷ್ಟೊಂದು ಪ್ರಮಾಣದಲ್ಲಿ ಸಾಗುವಳಿ ಚೀಟಿಗಳು ವಿತರಣೆ ಮಾಡಲು ಸಾಧ್ಯವೇ ಇಲ್ಲ. ಹಾಗೆ ಮಾಡಿದ್ದರೆ ಅವರ ಕಾರ್ಯವನ್ನು ನಾವೂ ಶ್ಲಾಘಿಸುತ್ತೇವೆ. ಈ ರೀತಿಯಾಗಿ ದಿಕ್ಕುತಪ್ಪಿಸುವುದು ಸರಿಯಲ್ಲ. ಸತ್ಯವನ್ನು ಜನರಿಗೆ ತಿಳಿಸಬೇಕು. ನನ್ನ ಅವಧಿಯಲ್ಲಿ ವಿತರಣೆ ಮಾಡಿರುವ ಸಾಗುವಳಿ ಚೀಟಿಗಳ ಕುರಿತು ಬಹಿರಂಗವಾಗಿ ದಾಖಲೆಗಳು ಬಿಡುಗಡೆ ಮಾಡಲು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.

ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ‘ನಮ್ಮ ಪಕ್ಷದ ಕಾರ್ಯಕರ್ತರು, 94ಸಿ ನಲ್ಲಿ ಹಕ್ಕುಪತ್ರಗಳು ಎನ್ನುವುದರ ಬದಲಾಗಿ ಸಾಗುವಳಿ ಚೀಟಿಗಳನ್ನು ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ. 3800ರಷ್ಟು 94ಸಿ ಹಕ್ಕು ಪತ್ರಗಳಾಗಿವೆ. ಇನ್ನೂ ಒಂದು ಸಾವಿರ ಆಗಬೇಕು. ಹಕ್ಕುಪತ್ರಗಳಾವುದು, ಸಾಗುವಳಿ ಚೀಟಿ ಯಾವುದು ಎನ್ನುವ ಬಗ್ಗೆ ಅರ್ಥ ಮಾಡಿಕೊಳ್ಳಲು ವಿಫಲವಾಗಿ ಈ ರೀತಿಯಾದ ಗೊಂದಲ ಸೃಷ್ಟಿ ಮಾಡಿದ್ದಾರೆ. 600 ಸಾಗುವಳಿ ಚೀಟಿ ಈಗ ಸಿದ್ಧ ಇವೆ. ಲಾಕ್‌ಡೌನ್‌ ಜಾರಿಯಾದ ಕಾರಣ ವಿತರಣೆ ವಿಳಂಬ 390 ಸಾಗುವಳಿ ಚೀಟಿಗಳ ವಿತರಣೆ ಮಾಡದೆ 30 ವರ್ಷಗಳಿಂದ ಬೇರೆ ಏನೋ ‘ಕಮಿಟ್‌ಮೆಂಟ್’‌ ಇಟ್ಟುಕೊಂಡು ಬಾಕಿ ಇಟ್ಟುಕೊಂಡಿದ್ದರು. ಈಗ ಲಂಚವಿಲ್ಲದೆ ಬಿಡುಗಡೆ ಮಾಡಿಸಿದ್ದೇನೆ. ಮನೆ ಬಾಗಿಲಿಗೆ ಸಾಗುವಳಿ ಚೀಟಿ ತಲುಪಿಸಿದ್ದೇನೆ. ನಾನು ಶಾಸಕನಾಗುವ ಮುಂಚೆ 8 ಸಾವಿರ ಕಡತಗಳು ಬಾಕಿ ಇದ್ದವು. ಪೂರ್ತಿ ವಿಲೇವಾರಿ ಮಾಡಿಸಿದ್ದೇನೆ’ ಎಂದರು.

ತಾಲ್ಲೂಕಿನಲ್ಲಿ ನಾನು ಶಾಸಕನಾದ ನಂತರ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರು ಟೀಕೆ ಮಾಡಿದ್ದಾಗ, ನಮ್ಮ ಕಾರ್ಯಕರ್ತರು ಅವರಿಗೆ ಉತ್ತರ ಕೊಡಲು ಹೋಗಿ, ಈ ರೀತಿ ಗೊಂದಲ ಮಾಡಿಕೊಂಡಿದ್ದಾರೆ. ಅರ್ಜಿ ನಮೂನೆ 53ರ ಅರ್ಜಿಗಳು ಎಷ್ಟು ಬಂದಿವೆ. ಎನ್ನುವ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಸಮಿತಿ ರಚನೆಯಾಗಿದ್ದು, ಶೀಘ್ರವಾಗಿ ಸಭೆ ಕರೆದು ಕಾನೂನು ಪ್ರಕಾರ ಅರ್ಜಿಗಳು ಇತ್ಯರ್ಥಗೊಳಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT