ಬುಧವಾರ, ಸೆಪ್ಟೆಂಬರ್ 18, 2019
24 °C

ಮರಸೂರು ಗ್ರಾಮ ಪಂಚಾಯಿತಿ ಕ್ರೀಡೋತ್ಸವ

Published:
Updated:
Prajavani

ಆನೇಕಲ್: ‘ಗ್ರಾಮೀಣ ಯುವಕರಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಸಲು ಹಾಗೂ ಪರಸ್ಪರ ಸಹಬಾಳ್ವೆ, ನಾಯಕತ್ವ ಗುಣಗಳನ್ನು ಬೆಳೆಸುವ ಸಲುವಾಗಿ ಗ್ರಾಮ ಪಂಚಾಯಿತಿ ಕ್ರೀಡೋತ್ಸವ ಆಯೋಜಿಸಲಾಗಿದೆ’ ಎಂದು ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ್‌ರೆಡ್ಡಿ ತಿಳಿಸಿದರು.

ಅವರು ತಾಲ್ಲೂಕಿನ ಮರಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕ್ರೀಡೋತ್ಸವದ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್‌ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.

‘ಕ್ರೀಡೆಗಳು ಆರೋಗ್ಯದ ಪ್ರತೀಕ. ಹಾಗಾಗಿ ಗ್ರಾಮ ಪಂಚಾಯಿತಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕ್ರೀಡೋತ್ಸವ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಕ್ರೀಡೋತ್ಸವ ನಡೆಸಲು ತೀರ್ಮಾನಿಸಲಾಗಿದ್ದು ಅಂತರ್‌ ಗ್ರಾಮಮಟ್ಟದಲ್ಲಿ ವಿವಿಧ ಕ್ರೀಡೆಗಳನ್ನು ನಡೆಸಲಾಗುತ್ತದೆ. ವಾಲಿಬಾಲ್‌ ಟೂರ್ನಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ’ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಶಶಿಕಿರಣ್ ಮಾತನಾಡಿ, ‘ಭಾರತ ಸರ್ಕಾರದ ಫಿಟ್‌ ಇಂಡಿಯಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡೋತ್ಸವ ಪ್ರಾರಂಭಿಸಲಾಗಿದೆ. ಹಲವು ಗ್ರಾಮಗಳಲ್ಲಿ ವ್ಯಾಯಾಮ ಶಾಲೆಗಳನ್ನು ತೆರೆಯಲಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ವಾತಾವರಣವನ್ನು ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲು ಶ್ರಮಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲತಾ ಶ್ರೀನಿವಾಸ್‌, ಸದಸ್ಯ ಪುರುಷೋತ್ತಮ್‌ರೆಡ್ಡಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಡಿ.ಎನ್.ವೀರಭದ್ರಪ್ಪ ಹಾಜರಿದ್ದರು.

ಮಡಿವಾಳ ಗ್ರಾಮದ ತಂಡವು ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆಯಿತು. ಮರಸೂರು ಗ್ರಾಮ ದ್ವಿತೀಯ ಸ್ಥಾನ ಪಡೆಯಿತು.

Post Comments (+)