ಮಂಗಳವಾರ, ಜೂನ್ 15, 2021
21 °C
ದೇವನಹಳ್ಳಿ: ವೆಂಡಿವೀರನ್ ಪಗಾಡಿಯ ಅವರ 249ನೇ ಜಯಂತಿಯಲ್ಲಿ ಸ್ಮರಣೆ

ಸ್ವಾತಂತ್ರ್ಯಕ್ಕಾಗಿ ಮಾದಿಗರ ಬಲಿದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಬ್ರಿಟೀಷರನ್ನು ದೇಶದಿಂದ ಹೊರಹಾಕಿ ಸ್ವಾತಂತ್ರ್ಯ ಪಡೆಯಲು ನಡೆದ ಹೋರಾಟದಲ್ಲಿ ಮಾದಿಗ ಸಮುದಾಯದ ವೀರ ಸೇನಾನಿಗಳ ಬಲಿದಾನವು ಆಗಿದೆ’ ಎಂದು ಮಾದಿಗ ದಂಡೋರ ಸಮಿತಿ ರಾಜ್ಯ ಪ್ರಚಾರ ಘಟಕದ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ರಾಜ್ಯ ಸಮಿತಿ ವತಿಯಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ ಸೇನಾಧಿಪತಿ ವೆಂಡಿವೀರನ್ ಪಗಾಡಿಯ ಅವರ 249ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಪ್ರತಿವರ್ಷ ತಮಿಳುನಾಡಿನಲ್ಲಿ ಆಗಸ್ಟ್‌ 20ರಂದು ವೆಂಡಿ ವೀರನ್ ಪಗಾಡಿಯ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಕೋವಿಡ್ 19 ಸೋಂಕಿನ ಕಾರಣ ಅಲ್ಲಿಗೆ ಹೋಗಲಾಗುತ್ತಿಲ್ಲ. ಮಾದಿಗ ವಿವಿಧ ಸಂಘಟನೆ ಒಕ್ಕೂಟದ ವತಿಯಿಂದ ಇದೇ ಮೊದಲ ಬಾರಿಗೆ ದೇವನಹಳ್ಳಿಯಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಮಾದಿಗ ದಂಡೊರ ಹಿರಿಯ ಮುಖಂಡ ಪಿಳ್ಳಮುನಿಶ್ಯಾಮಪ್ಪ ಮಾತನಾಡಿ, ‘ಈ ಹಿಂದೆ ಕ್ಷೇತ್ರದಲ್ಲಿ ಶಾಸಕನಾಗಿ ಅತ್ಯುತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ ತೃಪ್ತಿ ಇದೆ. ಒಂದು ಸಮುದಾಯಕ್ಕೆ ಸಿಮಿತವಾಗಿ ಕೆಲಸ ಮಾಡದೆ ಜಾತ್ಯತೀತ ಭಾವನೆಯಿಂದ ಐದು ವರ್ಷ ಕಪ್ಪು ಚುಕ್ಕೆ ಇಲ್ಲದೆ ಶಾಸಕ ಸ್ಥಾನದ ಘನತೆ ಎತ್ತಿ ಹಿಡಿದಿದ್ದೇನೆ’ ಎಂದು ಹೇಳಿದರು. 

‘ವೆಂಡಿವೀರನ್ ಪಗಾಡಿಯ ಅತ್ಯಂತ ಪ್ರಬಲ ವೀರ ಸೇನಾಧಿಪತಿಯಾಗಿ ಹೋರಾಟ ನಡೆಸಿದವರು. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಮದ್ರಾಸ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾಗ ಪ್ರಬಲ ವಿರೋಧ ವ್ಯಕ್ತಪಡಿಸುವ ಧೈರ್ಯ ತೋರಿದ್ದರು. ಸಮುದಾಯವನ್ನು ಹೋರಾಟದ ಮೂಲಕ ಜಾಗೃತಿಗೊಳಿಸಬೇಕಾಗಿದೆ’ ಎಂದು ಹೇಳಿದರು.

ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಶಂಕರಪ್ಪ ಮಾತನಾಡಿ, ‘ಸಾಮಾನ್ಯ ಸೈನಿಕನಾಗಿ ರಾಜ ಪುಲೈ ದೇವಾನನ್ ಸಂಸ್ಥಾನದಲ್ಲಿ ಸೇರ್ಪಡೆಗೊಂಡು ಪ್ರಾಂತೀಯ ರಾಜರನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವೆಂಡಿ ವೀರನ್ ಪಗಾಡಿಯ ಸೇನಾಧಿಪತಿಯಾಗಿ ನೇಮಕಗೊಳ್ಳುತ್ತಾರೆ. 1755ರಲ್ಲಿ ಬ್ರಿಟಿಷರ 40 ಬಿಡಾರಗಳನ್ನು ದಾಳಿ ಮಾಡಿ ಧ್ವಂಸಗೊಳಿಸುತ್ತಾರೆ. ಇದು 1757ರ ಪ್ಲಾಸಿ ಕದನಕ್ಕೆ ಮೊದಲು ನಡೆದ ಘಟನೆಯಾಗಿದ್ದು ಬ್ರಿಟಿಷರ ಕುತಂತ್ರಕ್ಕೆ ರಾತ್ರೋರಾತ್ರಿ ಕೊಲೆಯಾಗುತ್ತಾರೆ. ಇವರೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೊದಲ ಹೆಜ್ಜೆ ಇಟ್ಟಿದ್ದು’ ಎಂದು ಹೇಳಿದರು.

‘ಬಿಜೆಪಿ ನನ್ನನ್ನು ಗುರುತಿಸಿ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನ ನೀಡಿದೆ. ಮಾದಿಗರಿಗೆ ಪ್ರತ್ಯೇಕ ಮೀಸಲಾತಿ ಪ್ರಸ್ತಾಪದ ಬೇಡಿಕೆ ಇಟ್ಟಿದ್ದೇನೆ. ಭರವಸೆ ಸಿಕ್ಕಿದೆ. ಸಾಮಾಜಿಕ ನ್ಯಾಯ ಸಿಗಲಿದೆ ಎಂಬ ವಿಶ‍್ವಾಸವಿದೆ’ ಎಂದು ಹೇಳಿದರು.

ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜಿ.ಮಾರಪ್ಪ, ಕದುರಪ್ಪ, ಮುದಗುರ್ಕಿ ನಾರಾಯಣಸ್ವಾಮಿ, ಎಂ.ಎಂ.ಶ್ರೀನಿವಾಸ್, ಬಿಜ್ಜವಾರ ನಾಗರಾಜ್, ಕೃಷ್ಣಪ್ಪ , ಲಕ್ಷ್ಮೀನಾರಾಯಣ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.