ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವೇದಿಕೆ; ಹಲವು ಸಮ್ಮೇಳನ

ವಿಜಯಪುರ: ಹಲವು ಪ್ರಕಾರದ ಸಾಹಿತ್ಯದ ಧ್ವನಿಯಾದ ಅಪರೂಪದ ಸಮಾವೇಶ
Last Updated 27 ಸೆಪ್ಟೆಂಬರ್ 2020, 2:51 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಗಂಗಾತಾಯಿ ದೇವಾಲಯದ ಆವರಣದಲ್ಲಿ ಶನಿವಾರ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಳು ಒಂದೇ ವೇದಿಕೆಯಲ್ಲಿ ಸರಳವಾಗಿ ನಡೆದವು.

ಸಮ್ಮೇಳನ ಅಧ್ಯಕ್ಷ ಪ್ರೊ.ಚಂದ್ರಪ್ಪ ಮಾತನಾಡಿ, ‘ಜಾತಿ, ಧಾರ್ಮಿಕ ಮಂಜೂರಾತಿ ಪಡೆದು ದಲಿತರು ಮತ್ತು ಮಹಿಳೆಯರನ್ನು ಹೀನಾಯ ಸ್ಥಿತಿಗೆ ದೂಡಿದೆ. ದುರ್ಬಲ ವರ್ಗದವರನ್ನು ಪ್ರಬಲ ವರ್ಗದವರು ನಿರಂತರವಾಗಿ ಶೋಷಣೆ ಮಾಡುತ್ತಾ ಬರುತ್ತಿದ್ದಾರೆ. ಸಾಹಿತ್ಯ ಲೋಕದಲ್ಲಿ ಪಂಪನಿಂದ ಆರಂಭವಾಗಿ ಪ್ರಸ್ತುತದವರೆಗೂ ಜಾತಿ ಸೂತಕದ ಬಗ್ಗೆ ಎಚ್ಚರಗಳು ಅಭಿವ್ಯಕ್ತಗೊಳ್ಳುತ್ತಲೇ ಇವೆ’ ಎಂದರು.

‘ಎಲ್ಲಾ ನೋವುಗಳನ್ನು ಉಂಡು ವಿಶ್ವನಾಯಕನ ಪಟ್ಟಕ್ಕೆ ಬೆಳೆದ ಅಂಬೇಡ್ಕರ್, ದಲಿತ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕುಗಳನ್ನು ಕೊಟ್ಟರು. ಈ ಹಕ್ಕುಗಳನ್ನು ಅರ್ಥ ಮಾಡಿಕೊಂಡ ಅಕ್ಷರ ವಂಚಿತರು ಅಕ್ಷರ ಪಡೆದು ಶಿಕ್ಷಣ ಸಂಘಟನೆ ಹೋರಾಟದಲ್ಲಿ ತೊಡಗಿಸಿಕೊಂಡರು. ಅವರಿಗಾದ ಅವಮಾನಗಳನ್ನು, ಅನ್ಯಾಯಗಳನ್ನು ಅಕ್ಷರವೆಂಬ ಅಭಿವ್ಯಕ್ತಿಯಲ್ಲಿ ಆಸ್ಫೋಟಿಸಿದರು. ಅವರೇ ದಲಿತ ಸಾಹಿತಿಗಳು’ ಎಂದು ಹೇಳಿದರು.

‘ದಲಿತರು ಮೂಲತಃ ಶೋಷಿತರೇ ಹೊರತು ಶೋಷಿತರೆಲ್ಲಾ ದಲಿತರಲ್ಲ. ಶೋಷಣೆಯ ಜೊತೆಗೆ ಅಮಾನವೀಯವಾದ ಹಿಂಸೆ, ಕ್ರೌರ್ಯಗಳಿಗೆ ಒಳಗಾದವರು. ಮನುಷ್ಯರಾಗಿದ್ದೂ ಮುನುಷ್ಯರಂತೆ ಕಾಣದವರು ಇಂತಹವರಿಗೆ ಬೆಳಕು ಕೊಡಬೇಕಾಗಿದೆ’ ಎಂದರು.

ಮಹಿಳಾ ಸಮ್ಮೇಳನಾಧ್ಯಕ್ಷೆ ಸುನಂದ ರು. ಬಸಪ್ಪ ಮಾತನಾಡಿ, ‘ಮಹಿಳಾ ಸ್ವಾತಂತ್ರ್ಯಕ್ಕೆ ಆದ್ಯತೆ ಸಿಗಬೇಕಿದೆ. ಮಹಿಳೆಯರನ್ನು ಉಪೇಕ್ಷಿಸಲಾಗುತ್ತಿದೆ. ಕೌಟುಂಬಿಕ ಸಮಸ್ಯೆಗಳು ಹೋಗಲಾಡಿಸಬೇಕಾಗಿದೆ. ಮಹಿಳೆಯರಿಗೆ ಶಿಕ್ಷಣದ ಕೊರತೆ ಬಹಳಷ್ಟಿದೆ.
ಕನ್ನಡ ಮಾಧ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ನಾವು ಯಾವ ಭಾಷೆಯಲ್ಲಿ ಯೋಚಿಸಬಲ್ಲೆವೋ ಅದೇ ಭಾಷೆಯಲ್ಲಿ ಶಿಕ್ಷಣ ಕೊಡುವುದರಿಂದ ಬಿರುಕುಗಳಿಲ್ಲದ ಶಿಕ್ಷಣ ಮತ್ತು ಜ್ಞಾನದ ಅನ್ವೇಷಣೆ ಸಾಧ್ಯವಾಗುತ್ತದೆ. ಕೇರಳ ಮಾದರಿಯಲ್ಲಿ ನಮ್ಮ ಶಿಕ್ಷಣದ ಪದ್ಧತಿ ಹಾಗೂ ಶೈಕ್ಷಣಿಕ ಮೂಲಸೌಕರ್ಯಗಳು ಕಲ್ಪಿಸುವಂತಹ ವ್ಯವಸ್ಥೆ ಜಾರಿಯಾಗಬೇಕು’ ಎಂದರು.

‘ತಾಲ್ಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಸ್ವರ್ಣಗೌರಿ ಮಹದೇವ್, ತಾಲ್ಲೂಕು ಸಮ್ಮೇಳನಾಧ್ಯಕ್ಷ ಕೆ.ಸಿ.ಮಂಜುನಾಥ್, ಜಿಲ್ಲಾ ಸರ್ಕಾರಿ ನೌಕರರ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವಿಜಯಕುಮಾರ್, ಜಿಲ್ಲಾ ಶಿಕ್ಷಕರ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಾಂತರಾಜ್,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಭಾಗವಹಿಸಿದ್ದರು.ಬಿಜೆಪಿ ಮುಖಂಡ ಜಿ.ಚಂದ್ರಣ್ಣ ಸಮ್ಮೇಳನ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT