ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸಂಭ್ರಮ

ವಿಜಯಪುರ: ಸಂಭ್ರಮ ಇಮ್ಮಡಿಗೊಳಿಸಿದ ಉತ್ತಮ ಮಳೆ, ಬೆಳೆ
Last Updated 14 ಜನವರಿ 2021, 3:01 IST
ಅಕ್ಷರ ಗಾತ್ರ

ವಿಜಯಪುರ: ಗ್ರಾಮೀಣ ಸೊಗಡಿನೊಂದಿಗೆ ತಳಕು ಹಾಕಿಕೊಂಡಿರುವ ಮಕರ ಸಂಕ್ರಾಂತಿ ಹಬ್ಬವನ್ನು ಗುರುವಾರ ಆಚರಿಸಲು ಎಲ್ಲೆಡೆ ಜನರು ಸಿದ್ಧರಾಗುತ್ತಿದ್ದಾರೆ. ಹಬ್ಬದ ಮುನ್ನಾ ದಿನ ಹೂ–ಹಣ್ಣುಗಳ ವ್ಯಾಪಾರದ ಭರಾಟೆ ಜೋರಾಗಿತ್ತು. ಈ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಿರುವುದು ಜನರ ಖುಷಿಗೆ ಕಾರಣವಾಗಿದೆ.

ಸೂರ್ಯನ ಪಥ ಸಂಚಲನೆಗೆ ಸಂಬಂಧಿಸಿದ ಹಬ್ಬವೇ ಸಂಕ್ರಮಣ ಅಥವಾ ಸಂಕ್ರಾಂತಿ. ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವುದು, ಉತ್ತರಾಭಿಮುಖವಾಗಿ ಪರಿಭ್ರಮಣ ಪ್ರಾರಂಭಿಸುವುದರಿಂದ ಉತ್ತರಾಯಣ ಪುಣ್ಯಕಾಲ ಎಂದು ಕರೆಯುವರು. ‌

ರೈತರಿಗೆ ಸುಗ್ಗಿಯ ಹಬ್ಬ, ಬೆಳೆಗಳನ್ನು ಕೊಯ್ಲು ಮಾಡಿ ಕಣಗಳಲ್ಲಿ ಹಾಕಿ ಕಾಳು ಮಾಡುತ್ತಾರೆ. ಫಸಲನ್ನು ಸಂಗ್ರಹಿಸಿ ರಾಶಿಗೆ ಪೂಜೆ ಮನೆಗೆ ಕೊಂಡೊಯ್ಯುವರು. ಜಾನುವಾರಿಗೆ ವಿಶೇಷ ಆಲಂಕಾರ ಮಾಡಿ ಮೆರವಣಿಗೆ ಹಾಗೂ ಬೆಂಕಿ ಹಾಯಿಸಿ ಸಂಭ್ರಮಿಸುತ್ತಾರೆ.

ಹೆಣ್ಣುಮಕ್ಕಳು ವಿಶೇಷವಾದ ಉಡುಗೆ ತೊಡುಗೆಗಳನ್ನು ತೊಟ್ಟು ಎಳ್ಳು–ಬೆಲ್ಲ ಬೀರುವ ಮೂಲಕ ಬಾಂಧವ್ಯದ ಬೆಸುಗೆ ಗಟ್ಟಿಪಡಿಸಿಗೊಳ್ಳಲು ಮುನ್ನುಡಿ ಹಾಡುತ್ತಾರೆ. ಹಬ್ಬದ ದಿನ ಮನೆ ಮಂದಿ ಬೆಳಿಗ್ಗೆ ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸುತ್ತಾರೆ. ಹೆಂಗಳೆಯರು ಮನೆಗಳ ಹೊಸ್ತಿಲಲ್ಲಿ ಹಾಗೂ ಮನೆಗಳ ಮುಂದೆ ಚಿತ್ತಾಕರ್ಷಣೆಯ ರಂಗೋಲಿಗಳನ್ನು ಬಿಡಿಸುತ್ತಾರೆ. ಸಂಕ್ರಾಂತಿಯ ದಿನ ಅನೇಕ ಕಡೆ ರಂಗೋಲಿ ಸ್ಪರ್ಧೆ ನಡೆಸುವುದು ರೂಢಿಯಲ್ಲಿದೆ.

ಎಳ್ಳು, ಕಡಲೆಬೀಜ, ಕೊಬ್ಬರಿ, ಅಚ್ಚುಬೆಲ್ಲ, ಸಕ್ಕರೆ ಅಚ್ಚು, ಹುರಿಗಡಲೆ ಸೇರಿಸಿ ಎಳ್ಳು–ಬೆಲ್ಲ ತಯಾರಿಸುತ್ತಾರೆ. ದೇವರ ಮುಂದೆ ಎಳ್ಳುಬೆಲ್ಲ ಮತ್ತು ನವಧಾನ್ಯಗಳನ್ನಿಟ್ಟು ಪೂಜೆ ಮಾಡುತ್ತಾರೆ. ವಿಶೇಷವಾಗಿ ಎಳ್ಳನ್ನು ಪೂಜಿಸಿ ದಾನ ಮಾಡುತ್ತಾರೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು
ಎಂಬುದು ಸಂಕ್ರಾಂತಿಯ ನಾಣ್ಣುಡಿಯಾಗಿದೆ.

ಮನೆಗಳಲ್ಲಿ ಪೂಜೆಯ ನಂತರ ಗೋವುಗಳಿಗೆ ಪೂಜೆ ಮಾಡಿ ಅಕ್ಕಿ, ಬೆಲ್ಲ, ಹಣ್ಣು ತಿನ್ನಿಸುತ್ತಾರೆ. ದೇವಾಲಯಗಳಿಗೆ ತೆರಳಿ ಎಳ್ಳು ದೀಪ ಹಚ್ಚಿಟ್ಟು ನಮಸ್ಕರಿಸುತ್ತಾರೆ. ಸಂಜೆ ಗೋಧೂಳಿ ಸಮಯದಲ್ಲಿ ಹೆಣ್ಣು ಮಕ್ಕಳು ವಿಶೇಷ ಉಡುಗೆ ತೊಡುಗೆ ತೊಟ್ಟು ಮನೆಗಳ ಸುತ್ತಮುತ್ತಲಿನ ಬಂಧು, ಬಳಗ, ಆಪ್ತರ ಮನೆಗಳಿಗೆ ತೆರಳಿ ಎಳ್ಳು, ಬಾಳೆಹಣ್ಣು, ಕಬ್ಬು ತೆಗೆದುಕೊಂಡು ಹೋಗಿ ಎಳ್ಳು ಬೀರುತ್ತಾರೆ. ಎಳ್ಳು ಬೀರುವುದರಿಂದ ಕೌಟುಂಬಿಕ ಸೌಹಾರ್ದ ಬೆಳೆಯುತ್ತದೆ ಹಾಗೂ ಸಾಮಾಜಿಕ ಅಸಮಾನತೆ ನಿವಾರಿಸಿ ಆತ್ಮೀಯತೆ ಬೆಳೆಸಿಕೊಳ್ಳಬಹುದು ಎಂಬುದು ನಂಬಿಕೆಯಿದೆ.

ಕಬ್ಬಿನ ಜಲ್ಲೆ ಒಂದಕ್ಕೆ 80 ರೂಪಾಯಿ, ಬಟನ್ ಹೂ 200 ಕೆ.ಜಿಗೆ, ಸೇವಂತಿಗೆ 150, ಚೆಂಡುಹೂ 40, ಬಾಳೆ ಹಣ್ಣು 50, ಅವರೆಕಾಯಿ 50, ಗೆಣಸು 60, ರೂಪಾಯಿಗೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT