ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ: ಸುಗ್ಗಿ ಹಬ್ಬದ ಸಂಭ್ರಮ

Last Updated 16 ಜನವರಿ 2023, 5:19 IST
ಅಕ್ಷರ ಗಾತ್ರ

ದೇವನಹಳ್ಳಿ: ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ರಾಸುಗಳಿಗೆ ಸಿಂಗರಿಸಿ, ಪೂಜೆ ಸಲ್ಲಿಸಿ, ರಾಸುಗಳಿಗೆ ಕಿಚ್ಚುಹಾಯಿಸುವ ಸಂಪ್ರದಾಯ ವಿಶೇಷವಾಗಿತ್ತು.

ಉರಿಯುವ ಬೆಂಕಿಯ ಜ್ವಾಲೆ ಲೆಕ್ಕಿಸದೆ, ಹಾರಿಬರುವ ರಾಸುಗಳ ಮೈನವಿರೇಳಿಸುವ ದೃಶ್ಯಗಳನ್ನು ನಗರದ ಪರ್ವತಪುರ ರಸ್ತೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಕಣ್ತುಂಬಿಕೊಂಡರು. ಸಂಪ್ರದಾಯದಂತೆ, ಸಂಕ್ರಾಂತಿ ದಿನ ಪ್ರತಿವರ್ಷ ನಗರದಲ್ಲಿ ರಾಸುಗಳಿಗೆ ಕಿಚ್ಚುಹಾಯಿಸುವುದು. ಕಾಟಮ್ಮರಾಯನಿಗೆ ಪೂಜೆ ಸಲ್ಲಿಸುವುದು, ಸೂರ್ಯ ಅಸ್ತಾಂಗತವಾಗುತ್ತಿದ್ದಂತೆ, ಒಣ ಹುಲ್ಲನ್ನು ರಾಶಿ ಹಾಕಿ ಬೆಂಕಿ ಹಚ್ಚಿ, ಕಿಚ್ಚುಹಾಯಿಸುವುದು ಸಂಪ್ರದಾಯ.

ಕಳೆದ ಎರಡು ವರ್ಷಗಳಿಂದ ಕೊರೊನಾ ಇದ್ದಿದ್ದರಿಂದ ಸಂಕ್ರಾಂತಿ ಹಬ್ಬದ ಕಳೆ ಇರಲಿಲ್ಲ. ಈ ಬಾರಿ ಚರ್ಮಗಂಟು ರೋಗ ಮತ್ತು ಕಾಲುಬಾಯಿ ಜ್ವರದ ನಡುವೆಯೂ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಹಬ್ಬಗಳ ಆಚರಣೆಗಳ ಸಂಪ್ರದಾಯ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿದೆ ಎಂಬುವುದಕ್ಕೆ ಉದಾಹರಣೆಯಾಗಿ ಸಂಕ್ರಾಂತಿ ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ಹಳ್ಳಿಯ ಜನ ಸಂಜೆಯ ವೇಳೆ ಹಬ್ಬದ ದಿನ ಹಸುಗಳಿಗೆ ಸಿಂಗರಿಸಿ ಹಬ್ಬವನ್ನು ಆಚರಿಸಿದರು.

ರಾಸುಗಳ ಹಬ್ಬವೆಂದೆ ಬಿಂಬಿತವಾದ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಕಳೆ ಗಟ್ಟಿತ್ತು. ಜಿಲ್ಲೆ, ತಾಲ್ಲೂಕಿನಾದ್ಯಂತ ರೈತರು ರಾಸುಗಳಿಗೆ ಗೋಪೂಜೆ ಮಾಡಿ ಭಕ್ತಿಯಿಂದ ಆಚರಿಸಿದರು.

ಗ್ರಾಮೀಣ ಭಾಗದಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಮಕರ ಸಂಕ್ರಾಂತಿಯನ್ನು ಸಾಧಾರಣವಾಗಿ ಆಚರಣೆ ಮಾಡುತ್ತಿರುವುದು ಕಂಡು ಬಂದಿದೆ. ಇದು ಗ್ರಾಮಗಳಲ್ಲಿ ಕೇವಲ ಎರಡು-ಮೂರು ಜತೆ ಇರುವುದು ಕಂಡುಬಂತು.

ರಸ್ತೆಯಲ್ಲಿ ಹುಲ್ಲಿಗೆ ಬೆಂಕಿ ಹಾಕಿ ತಮ್ಮ ರಾಸುಗಳನ್ನು ಕಿಚ್ಚು ಹಾಯಿಸುವುದರ ಮೂಲಕ ರೈತರು ಹಬ್ಬವನ್ನು ಸಂಭ್ರಮಿಸಿದರು.

ಎಂಪಿಸಿಎಸ್ ಅಧ್ಯಕ್ಷ ಎಸ್.ಪಿ.ಮುನಿರಾಜು ಮಾತನಾಡಿ, ಹಲವಾರು ವರ್ಷಗಳಿಂದ ಸಂಕ್ರಾಂತಿ ಹಬ್ಬದ ದಿನ ರಾಸುಗಳಿಗೆ ಕಿಚ್ಚುಹಾಯಿಸುವ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದೇವೆ. ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಉಳುಮೆಯಿಂದ ರಾಗಿ ಒಕ್ಕಣೆ ವರೆಗೂ ಯಂತ್ರಗಳ ಬರಾಟೆ ಹೆಚ್ಚಾಗಿದ್ದೇ ರಾಸುಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂದರು.

ಕಾಟಮ್ಮರಾಯನಿಗೆ ಪೂಜೆ: ಅಂದಿನ ಕಾಲದಿಂದ ಕಾಟಮ್ಮರಾಯನಿಗೆ ಪೂಜೆ ಮಾಡುವ ಸಂಪ್ರದಾಯವಿದ್ದು ಹಿರಿಯರು ಹೇಳುವ ಹಾಗೆ ಎತ್ತು ಹಸುಗಳಿಗೆ ಯಾವುದೇ ರೋಗರುಜಿನ ಬರದಂತೆ ನೋಡಿಕೊಳ್ಳಲೆಂದು ಈ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸುವ ನಂಬಿಕೆ ರೈತರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT