ಹಳ್ಳಿಯ ಚಿತ್ರಗಳ ಸಂಕ್ರಾಂತಿ ಸಂಪುಟ

7

ಹಳ್ಳಿಯ ಚಿತ್ರಗಳ ಸಂಕ್ರಾಂತಿ ಸಂಪುಟ

Published:
Updated:

ಹಳ್ಳಿ ಮತ್ತು ನಗರಗಳ ನಡುವಿನ ಗೆರೆ ತೆಳುವಾಗುತ್ತಾ ಹೋದಂತೆ ಹಬ್ಬಗಳೂ ತಮ್ಮ ಮೂಲ ಸೊಗಡು ಕಳೆದುಕೊಳ್ಳುತ್ತವೆ. ಎಂದಿಗೂ ಬಣ್ಣ ಮಾಸದ ಶಕ್ತಿ ಇರುವುದು ನೆನಪುಗಳಿಗೆ ಮಾತ್ರವೆನ್ನಿಸುತ್ತದೆ.

---

ಸೀಗೆಹುಡಿ ಹಾಕಿ ಮೈ ತಿಕ್ಕಿಸಿಕೊಂಡಾಗ ಮೈಮೇಲಿದ್ದ ಸೆಗಣಿ ಹೋಗಿ, ಚರ್ಮ ಮಿರಿಮಿರಿ ಅನ್ನುತ್ತಿತ್ತು. ಕುಂಟೆಯಲ್ಲಿ ಸ್ನಾನ ಮಾಡಿಸಿದರೂ ನನಗೆ ಸ್ಯಾಂಡಲ್ ಸೋಪ್ ವೈಭೋಗ. ಮನೆ ಸೇರುವ ಹೊತ್ತಿಗೆ ಜಗಲಿ ಕಟ್ಟೆ ಮೇಲೆ ದಾಸವಾಳ, ಸಂಪಿಗೆ ಇನ್ನು ಯಾವ್ಯಾವುದೋ ಹೂಗಳ ವಿಚಿತ್ರ ಸಂಯೋಜನೆಯ ನಗು. ಒಂದಿಷ್ಟು ಊದಿರುವ, ಇನ್ನಷ್ಟು ಇನ್ನೂ ಊದಬೇಕಾಗಿರುವ ಬಣ್ಣಬಣ್ಣದ ಬಲೂನುಗಳು. ಮಕ್ಕಳು ನನ್ನ ಕೊರಳು ಹಿಡಿದು ಮುದ್ದಾಡಿ ಹೂ, ಬಲೂನು ಕಟ್ಟಿದರು. ಅಮ್ಮ ಬಂದು ಬೇಯಿಸಿದ ಅವರೆ, ಕಡ್ಲೆಕಾಯಿ, ಬೆಲ್ಲ, ಹುಗ್ಗಿ ಇನ್ನೂ ಏನೇನೋ ತಿನ್ನಿಸಿದಳು. ಅಣ್ಣ ಎಲ್ಲಿಂದಲೋ ಒಂದು ಹೊರೆ ಹಸಿ ಹುಲ್ಲು ಸಂಪಾದಿಸಿದ್ದ. ಎಳೆ ಗರಿಕೆ ಬಾಯಿಗಿಟ್ಟು, ‘ನಮ್ ಗೌರಿಗೆ ಹಸಿ ಹುಲ್ಲು ಅಂದ್ರೆ ಪ್ರಾಣ’ ಎಂದು ಮುದ್ದುಮುದ್ದು ಮಾಡಿದ. ನಾನು ಕಿಚ್ಚು ಹಾಯ್ತಾ ಇರ್ಲಿಲ್ಲ. ಆದ್ರೆ ಊರು ಮುಂದಿನ ಅರಳಿಕಟ್ಟೆ ತನಕ ಎಲ್ಲರ ಮನೆಗೆ ಹೋಗಿ ಯಾರ ಮನೆಯಲ್ಲಿ ಏನು ಅಡುಗೆ ಅಂತ ರುಚಿ ನೋಡಿ ಬರ್ತಿದ್ದೆ. ‘ಗೌರಿ ಬಂದ್ಲೂ’ ಅಂತಾ ಏನಾದ್ರೂ ಕೊಟ್ಟು ಕಳಿಸೋರು ಅನ್ನಿ.

***


ಕಣದಲ್ಲಿ ರಾಗಿ ಒಕ್ಕಣೆ (ಚಿತ್ರ: ಎಂ.ಎಸ್.ಮಂಜುನಾಥ್)

ಈಗ ಮೇಯಲೂ ಜಾಗವಿಲ್ಲದೆ, ಕಾಲಾಡಲೂ ಅವಕಾಶವಿಲ್ಲದೆ ಶೆಡ್‌ನಲ್ಲಿ ಕಟ್ಟಿಹಾಕಿಸಿಕೊಂಡು ದಿನದೂಡುವ ಗೌರಿ (ಹಸು) ತಾನು ಕರುವಾಗಿದ್ದ ದಿನಗಳನ್ನು ನೆನಪಿಸಿಕೊಂಡು ಮಾತನಾಡಿದರೆ ಹೀಗೆ ಹೇಳಬಹುದು. ‘ಅಸಲಿಗೆ ಈ ಬೆಂಗಳೂರು ನಮ್ಮೂರಿಗೆ ಬಂದಿದ್ದಾರೂ ಯಾಕೆ ಮತ್ತು ಹೇಗೆ?’ ಇದು ಅವಳ ಪಾಲಿಗೆ ಬಗೆಹರಿಯದ ಪ್ರಶ್ನೆ. ಇದು ನನ್ನದೂ ಹೌದು ಅನ್ನಿ.

ನಮ್ಮದು ದೊಡ್ಡಬಳ್ಳಾಪುರ ಸೆರಗಿನ ಮುತ್ಸಂದ್ರ. ಅಂದ್ರೆ ನಾವು ದೊಡ್ಡಬಳ್ಳಾಪುರಕ್ಕೆ ಸೇರಿದವರೂ ಅಲ್ಲ ಅನ್ನಿ. ಮೊದಲಿನ ನಮ್ಮೂರನ್ನು ನೆನಸಿಕೊಂಡರೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ಹಳ್ಳಿಯ ಚಿತ್ರಗಳು’ ಸಾಲುಸಾಲು.

ಸದಾ ಮಗ್ಗದ ಸದ್ದು, ಹಸಿರು ಹೊಲ, ಗದ್ದೆ, ತೋಟ, ಊರ ಪಕ್ಕದಲ್ಲಿ ರೈಲ್ವೆ ಲೈನ್ ಇದ್ದರೆ ಯಾರ ಮನೆಗೂ ಅಲರಾಂ ಗಡಿಯಾರವೇ ಬೇಡ ಅಲ್ವಾ? ಕಾಚಿಗುಡ ಎಕ್ಸ್‌ಪ್ರೆಸ್‌ ಬಂದಾಗ ಎದ್ದೇಳು, ಹಿಂದೂಪುರ ಪ್ಯಾಸೆಂಜರ್ ಬಂದಾ ತಿಂಡಿ ತಿನ್ನು, ಬಸವ ಬಂದಾಗ ಸ್ಕೂಲಿಗೆ ಓಡು, ರಾತ್ರಿ ಬಾಂಬೆ ಗಾಡಿ ಉದ್ಯಾನ್ ಕೂ ಅಂತೂ ಅಂದ್ರೆ ಮುಸುಕಿ ಹಾಕಿ ಮಲಗು.

ಮೊದಲಿಗೇ ಹೇಳಿ ಬಿಡ್ತೀನಿ, ನಮ್ಮೂರಲ್ಲಿ ಹಸು–ಎತ್ತು–ಎಮ್ಮೆಗಳು ಕೇವಲ ಪ್ರಾಣಿಗಳಲ್ಲ. ಅವನ್ನು ‘ಜೀವ’ ಅಂತ್ಲೇ ಅನ್ನುತ್ತಿದ್ದರು. ಇವತ್ತಿಗೂ ಹಿರಿಯರು ಅದೇ ಪದ ಬಳಸ್ತಾರೆ.

ಊರ ಸುತ್ತ ಇದ್ದ ಖಾಲಿ ಜಾಗದಲ್ಲಿ ಸಾಕಷ್ಟು ಮೇವಿತ್ತು. ಇದನ್ನು ಗಮನಿಸಿಯೇ ಸ್ವಂತ ಜಮೀನು ಇಲ್ಲದಿದ್ದರೂ ಕೆಲವರು ಧೈರ್ಯವಾಗಿ ಹಸು–ಎಮ್ಮೆ ಕಟ್ಟಿಕೊಂಡಿದ್ದರು. ಹಗಲು ಹೊರಗೆ ಮೇಯಲು ಹೋಗುತ್ತಿದ್ದ ಹಸುಗಳು ಮೆಲುಕು ಹಾಕುತ್ತಾ ರಾತ್ರಿ ಕಳೆಯುತ್ತಿದ್ದವು. ಅಕ್ಕಪಕ್ಕದ ಮನೆಗಳು, ಊರ ಒಳಗಿನ ಹೋಟೆಲ್‌ಗಳಿಂದ ತರುವ ಮುಸುರೆಗೆ ಮೇಲಿಷ್ಟು ಬೂಸಾ ಉದುರಿಸಿಕೊಡುವುದು ಮಾಮೂಲು. ಎತ್ತುಗಳಿಗೆ ಮತ್ರ ತುಸು ಹೆಚ್ಚು ಕಾಳಜಿ. ಜೋಳದ ದಂಟು, ರಾಗಿ ಅಂಬಲಿಯ ಆತಿಥ್ಯ.

ಪ್ರತಿವರ್ಷ ಸಂಕ್ರಾಂತಿ ಕಣ ಆಗುತ್ತಿದ್ದ ಕಾಯಂ ಜಾಗಗಳಿದ್ವು. ಕಣದ ಕೆಲಸಕ್ಕೆ ಅಂತ ಹೋದವರಿಗೆ ಕೂಲಿ ಬದಲು ರಾಗಿ ಹುಲ್ಲು ಕೊಟ್ಟು ಕಳಿಸ್ತಾ ಇದ್ರು. ಹೊಲಗಳಿಲ್ಲದೆ ಹಸುಗಳನ್ನು ಕಟ್ಟಿಕೊಂಡವರ ಪಾಲಿಗೆ ಬೇಸಿಗೆ ಕಳೆಯಲು ಇದೇ ಆಧಾರ. ಇವೆಲ್ಲಾ ಕೊಡುಕೊಳ್ಳುವ ವ್ಯವಹಾರಕ್ಕಿಂತ ಹೆಚ್ಚಾಗಿ ಬಾಂಧವ್ಯದ ಮಾತು. ಎಲ್ಲರಿಗೂ ಎಲ್ಲರ ಜಾತಿಗಳೂ ಗೊತ್ತಿದ್ದರೂ ಯಾರಿಗೂ ಯಾರೂ ದೂರ ಅನ್ನಿಸ್ತಾ ಇರ್ಲಿಲ್ಲ. ಕಣದ ರೋಲರ್ ಮೇಲೆ ಕೂಡುವ ಆಸೆಯಿಂದ ಬರುವ ಮಕ್ಕಳನ್ನು ಆಸ್ಥೆಯಿಂದ ಕೂಡಿಸಿಕೊಳ್ತಿದ್ರು. ಕಣದ ಪಕ್ಕ ಹೊಂಗೆ ಮರಗಳಿಗೆ ಕಟ್ಟಿರುತ್ತಿದ್ದ ಜೋಕಾಲಿಗಳು ಯಾರಪ್ಪನ ಮನೆಯ ಆಸ್ತಿಯೂ ಆಗಿರಲಿಲ್ಲ.


ಹಳ್ಳಿಗಳಲ್ಲಿ ಕಣಗಳು ನಾಪತ್ತೆಯಾದ ನಂತರ ರಸ್ತೆಗಳಲ್ಲೇ ಒಕ್ಕಣೆ ಸಾಮಾನ್ಯ ದೃಶ್ಯವಾಗಿದೆ (ಚಿತ್ರ: ಎಂ.ಎಸ್.ಮಂಜುನಾಥ)

ನೋಡನೋಡ್ತಾ ಇದೆಲ್ಲಾ ಹೇಗೆ ಬದಲಾಗಿ ಹೋಯ್ತು ಅಂತೀನಿ. ಊರಿಗೆ ಆರು ಕಿ.ಮೀ. ದೂರದಲ್ಲಿರುವ ಬಾಶೆಟ್ಟಿಹಳ್ಳಿಯಲ್ಲಿ ಇಂಡಸ್ಟ್ರಿಯಲ್ ಏರಿಯಾ ಅಯ್ತು, ಅಪರೇರಲ್ ಪಾರ್ಕ್ ಬಂತು. ಜನ ಬಂದ್ರೂ ಬಂದ್ರೂ ಬಂದ್ರೂ. ಯಾವ್ಯಾವುದೋ ಊರು, ರಾಜ್ಯಗಳಿಂದೆಲ್ಲಾ ಬಂದ್ರೂ. ನಮ್ಮೂರಲ್ಲಿ ನಾವೇ ಪರಕೀಯರು ಅನ್ನಿಸೋಕೆ ಶುರುವಾಯ್ತು. ನಾವು ಕ್ರಿಕೆಟ್ ಆಡ್ತಿದ್ದ ಜಾಗದಲ್ಲೆಲ್ಲಾ ಬಿಲ್ಡಿಂಗು, ಬಾಡಿಗೆ ಮನೆ, ಅಂಗಡಿಗಳು. ದನಗಳನ್ನು ಮೇಯಿಸ್ತಿದ್ದ ಜಾಗದಲ್ಲೆಲ್ಲಾ ಬೇಲಿ. ಹೊಲಗಳು ಇಲ್ಲದವರು ಮೇವು ಹೊಂಚಲಾಗದೆ ದನಗಳನ್ನು ಮಾರಿದರೆ, ಹೊಲಗಳು ಇದ್ದವರು ಮೊದಲು ಭೂಮಿಯನ್ನೂ ನಂತರ ‘ಜೀವ’ಗಳನ್ನೂ ಮಾರಿಕೊಂಡರು.

ಸೀಬೆತೋಟ ಇದ್ದ ಜಾಗದಲ್ಲಿ ರೈಲ್ವೆ ಮೇಲ್ಸೇತುವೆ, ಸುಗಂಧರಾಜ–ಕಾಕಡ ತೋಟಗಳಿದ್ದ ಜಾಗದಲ್ಲಿ ಲೇಔಟ್‌ಗಳು, ದೆವ್ವಗಳು ಓಡಾಡ್ತಿದ್ದ ನಂದಿಮೋರಿ ಹತ್ರ ಸೈಟುಗಳು, ವರ್ಷಕ್ಕೆರೆಡು ಬೆಳೆ ಬರ್ತಿದ್ದ ಭತ್ತದಗದ್ದೆಗಳಿದ್ದ ಜಾಗ ಪಾಳುಹಾಳು. ಎಂದೋ ಬತ್ತಿಹೋಗಿರುವ ಅರ್ಕಾವತಿ ನದಿಗೆ ಈಗ ನಮ್ಮೂರಲ್ಲಿ ಒಂದು ದೊಡ್ಡ ಸೇತುವೆ ಕಟ್ದಿದ್ದಾರೆ. ಅದರ ಮೇಲೆ ಬೆಂಗಳೂರಿಂದ ಬರುವ ಬಿಎಂಟಿಸಿ ಬಸ್‌ಗಳು ಸರಬರ ಓಡಾಡ್ತವೆ. ಆದರೆ ನದಿಗೆ ಜೀವ ಬಂದು ಎಷ್ಟು ವರ್ಷಗಳಾದವೋ ಮರೆತುಹೋಗಿದೆ.

ತಮಾಷೆ ಗೊತ್ತಾ? ಎಮ್ಮೆ ಅಡ್ಡ ಬಂತು ಅಂತ ಒಂದು ಸಲ ನಮ್ಮೂರ ಹತ್ತಿರ ರೈಲೇ ನಿಂತಿತ್ತು. ಆದರೆ ಈಗ ಲಾರಿಗಳೇ ಹಸುಗಳಿಗೆ ಡಿಕ್ಕಿಹೊಡೆದುಕೊಂಡು ಹೋಗ್ತವೆ. ಬೈಕ್–ಸ್ಕೂಟರ್‌ನವರಿಗೂ ಎಮ್ಮೆ ಇರಲಿ, ನಾಯಿ–ಕುರಿಗಳು ಅಡ್ಡ ಬಂದ್ರೂ ಕಿರಿಕಿರಿ ಅನ್ನಿಸುತ್ತೆ. ಹೌದು, ಊರು ಬದಲಾಗಿದೆ. ನಮ್ಮೂರು ನಮ್ಮೂರಾಗಿ ಉಳಿದಿಲ್ಲ. ಬೆಂಗಳೂರಿನಂತೆ ಆಗ್ತಿದೆ, ಅಗಿಬಿಟ್ಟಿದೆ.

ರಾಶಿ ಮಾಡುತ್ತಿದ್ದ ಕಣಗಳು, ಕಿಚ್ಚು ಹಾಯಿಸುತ್ತಿದ್ದ ಅರಳಿಕಟ್ಟೆ ಪಕ್ಕದ ಮೈದಾನಗಳಿಗೆ ಸಂಕ್ರಾಂತಿ ಬಂತೆಂಬ ಸುಳಿವೂ ಇಲ್ಲ. ‘ಜೀವ’ಗಳೇ ಇಲ್ಲದ ಊರಲ್ಲಿ ಜೀವಕಳೆ ಇರಲು ಸಾಧ್ಯವೇ?

(ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)


ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಂಕ್ರಾಂತಿ ಖರೀದಿ (ಚಿತ್ರ: ಎಂ.ಎಸ್.ಮಂಜುನಾಥ)

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !